ವಿವಾಹಿತ ಮಹಿಳೆಯ ಜೊತೆ ಏಕಾಂತದಲ್ಲಿದ್ದ ಮೂವತ್ತು ವರ್ಷದ ಫಿಟ್‌ನೆಸ್ ಟ್ರೈನರ್ ಒಬ್ಬರು ಆಕೆಯ ಪತಿ ಅನಿರೀಕ್ಷಿತವಾಗಿ ಮನೆಗೆ ಬಂದಾಗ ತಪ್ಪಿಸಿಕೊಳ್ಳಲು ಯತ್ನಿಸಿ ಮೂವತ್ತನೇ ಅಂತಸ್ತಿನಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಆಘಾತಕಾರಿ ಘಟನೆ ವರದಿಯಾಗಿದೆ.
ಸಿಂಗಾಪುರದಲ್ಲಿ ನಡೆದಿರುವ ಈ ಘಟನೆಯಲ್ಲಿ ಮಹಿಳೆಯ ಪತಿ ಮನೆಗೆ ಬಂದಾಗ ಆತನಿಂದ ತಪ್ಪಿಸಿಕೊಳ್ಳಲು ಹೆದರಿದ ದೈಹಿಕ ತರಬೇತುದಾರ ಕಿಟಕಿಯ ಮೂಲಕ ಹೊರಗೆ ಹೋಗಿ ಅಲ್ಲಿನ ಸರಳುಗಳನ್ನು ಹಿಡಿದು ನೇತಾಡಿದ್ದಾನೆ. ಆದರೆ ಹೆಚ್ಚು ಹೊತ್ತು ಹಿಡಿದುಕೊಳ್ಳಲು ಸಾಧ್ಯವಾಗದೆ ಕೈಜಾರಿ ಮೂವತ್ತನೇ ಅಂತಸ್ತಿನಿಂದ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಭಾರಿ ಶಬ್ದ ಕೇಳಿಬಂದಿದ್ದರಿಂದ ಸ್ಥಳೀಯ ನಿವಾಸಿಗಳು ಹೊರಗೆ ಬಂದು ನೋಡಿದಾಗ ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಆತ ಬಿದ್ದಿರುವುದು ಕಂಡುಬಂದಿದೆ. ತಕ್ಷಣವೇ ನಿವಾಸಿಗಳು ತುರ್ತು ಸೇವೆಗಳಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿದ ಪ್ಯಾರಾಮೆಡಿಕ್ಸ್ ತಂಡ ಗಾಯಾಳುವಿಗೆ ತುರ್ತು ಚಿಕಿತ್ಸೆ ನೀಡಲು ಪ್ರಯತ್ನಿಸಿತಾದರೂ ಗಂಭೀರ ಗಾಯಗಳಾಗಿದ್ದರಿಂದ ಆತ ಅಲ್ಪ ಸಮಯದಲ್ಲೇ ಕೊನೆಯುಸಿರೆಳೆದಿದ್ದಾನೆ. ಘಟನೆಯ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಇಡೀ ಪ್ರದೇಶವನ್ನು ಸುತ್ತುವರಿದು ತನಿಖೆ ಆರಂಭಿಸಿದ್ದಾರೆ.

ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು ಸಾಕ್ಷಿದಾರರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಇದರೊಂದಿಗೆ ಸಂಬಂಧಪಟ್ಟ ಮಹಿಳೆ ಮತ್ತು ಆಕೆಯ ಪತಿಯನ್ನು ಸಹ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ವರದಿಯಾಗಿದೆ.


