ಪ್ರಿಂಟಿಂಗ್ ಸಂಸ್ಥೆಯೊಂದರ ಶೌಚಾಲಯದಲ್ಲಿ ಗುಪ್ತ ಕ್ಯಾಮೆರಾ ಅಳವಡಿಸಿ ಮಹಿಳಾ ಉದ್ಯೋಗಿಗಳ ಖಾಸಗಿ ದೃಶ್ಯಗಳನ್ನು ಸೆರೆಹಿಡಿಯಲು ಯತ್ನಿಸಿದ ಆರೋಪದ ಮೇಲೆ ಸಂಸ್ಥೆಯ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ತಿರುವನಂತಪುರದಲ್ಲಿ ಈ ಘಟನೆ ನಡೆದಿದೆ. ಬಂಧಿತನನ್ನು ರಾಹುಲ್ ಪಿ. ಅಶೋಕ್ (38) ಎಂದು ಗುರುತಿಸಲಾಗಿದೆ.

ರಾಹುಲ್ ತಾನು ನಡೆಸುತ್ತಿದ್ದ ಪ್ರಿಂಟಿಂಗ್ ಪ್ರೆಸ್‌ನ ಶೌಚಾಲಯದಲ್ಲಿ ಗುಪ್ತ ಕ್ಯಾಮೆರಾ ಅಳವಡಿಸಿದ್ದ. ಪ್ರೆಸ್ ಅವನ ಮನೆಯ ಕೆಳಗಿನ ಮಹಡಿಯಲ್ಲೇ ಕಾರ್ಯನಿರ್ವಹಿಸುತ್ತಿತ್ತು. ಇಬ್ಬರು ಮಹಿಳಾ ಉದ್ಯೋಗಿಗಳು ಅಲ್ಲಿ ಕೆಲಸ ಮಾಡುತ್ತಿದ್ದರು. ಮಾರ್ಚ್ 13, 2026 ರಂದು ಮಹಿಳಾ ಉದ್ಯೋಗಿಯೊಬ್ಬರು ಶೌಚಾಲಯಕ್ಕೆ ಹೋದಾಗ, ಅಲ್ಲಿದ್ದ ಕಸದ ಬುಟ್ಟಿಯಲ್ಲಿ ಯಾವುದೋ ವಸ್ತು ಇರುವುದನ್ನು ಗಮನಿಸಿದರು. ಪರಿಶೀಲಿಸಿದಾಗ, ಅದು ಗುಪ್ತ ಕ್ಯಾಮೆರಾ ಮತ್ತು ಅದಕ್ಕೆ ಪವರ್ ಬ್ಯಾಂಕ್ ಜೋಡಿಸಿರುವುದು ಪತ್ತೆಯಾಯಿತು. ಅವರು ತಕ್ಷಣ ಇನ್ನೊಬ್ಬ ಸಹೋದ್ಯೋಗಿಗೆ ಮಾಹಿತಿ ನೀಡಿ, ಪೊಲೀಸರಿಗೆ ದೂರು ನೀಡಿದರು.


ದೂರು ದಾಖಲಾದ ವಿಷಯ ತಿಳಿಯುತ್ತಿದ್ದಂತೆ ರಾಹುಲ್ ತಲೆಮರೆಸಿಕೊಂಡಿದ್ದ. ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರೂ, ನ್ಯಾಯಾಲಯ ಅದನ್ನು ನಿರಾಕರಿಸಿತು. ನಂತರ ಪೊಲೀಸರು ಆತನ ಅಡಗುತಾಣದಿಂದಲೇ ಬಂಧಿಸಿದರು. ಆದರೆ, ದೃಶ್ಯಗಳನ್ನು ಸೆರೆಹಿಡಿಯಲು ಬಳಸಿದ ಕ್ಯಾಮೆರಾ, ಪವರ್ ಬ್ಯಾಂಕ್ ಮತ್ತು ಮೆಮೊರಿ ಕಾರ್ಡ್ ಇನ್ನೂ ಪತ್ತೆಯಾಗಿಲ್ಲ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದರೆ ಮಾತ್ರ ಇವುಗಳನ್ನು ಪತ್ತೆಹಚ್ಚಲು ಸಾಧ್ಯ ಎಂದು ಪೊಲೀಸರು ತಿಳಿಸಿದ್ದಾರೆ.


