ಇಪ್ಪತ್ತು ವರ್ಷಗಳ ನಂತರ ತಾಯಿಯ ಕೈತುತ್ತು ತಿಂದ ಮಗ: ಮಾನವೀಯತೆ ಮೇಳೈಸಿದ ಈ ಕಥೆ ನೀವು ಓದಬೇಕು!

ವಿಶೇಷ ವರದಿ

ಇಪ್ಪತ್ತು ವರುಷಗಳ ನಂತರ ತಾಯಿಯ ಕೈಯಿಂದ ಕೈತುತ್ತು ತಿನ್ನುವ ಭಾಗ್ಯ ದೊರೆತ  ಮಗ, ಆ ಅಸಾಧ್ಯ ಗುರಿ ತಲುಪಲು ಮಾನವೀಯ ಮನಸ್ಸುಗಳು ಕೈಜೋಡಿಸಿದ ಅಪರೂಪದ ಕಥೆ ಇದು. 

ಮಾನವೀಯತೆ, ಸಹೋದರತ್ವ ಮತ್ತು ಒಗ್ಗಟ್ಟಿಗೆ ಜಾತಿ, ಧರ್ಮ ಅಥವಾ ಗಡಿಗಳ ಹಂಗಿಲ್ಲ ಎಂಬುದನ್ನು ಕೇರಳದ ಜನತೆ ಜಗತ್ತಿನ ಮುಂದೆ  ಸಾಬೀತುಪಡಿಸಿದೆ. ಕೇವಲ ಒಂದು ಜೀವವನ್ನು ಉಳಿಸುವುದಕ್ಕಾಗಿ ಇಡೀ ರಾಜ್ಯವೇ ಒಂದಾಗಿ, ಅದರ ಜತೆ ಸುತ್ತಮುತ್ತಲಿನ ರಾಜ್ಯಗಳೂ ಸ್ಪಂದಿಸಿ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿ, ಮರಣದಂಡನೆಯ ದವಡೆಯಿಂದ ವ್ಯಕ್ತಿಯೊಬ್ಬನನ್ನು ರಕ್ಷಿಸಿ ತಾಯ್ನಾಡಿಗೆ ಕರೆತಂದಿರುವ ಅಪರೂಪದ ಮತ್ತು ಭಾವುಕ ಘಟನೆಯೊಂದು ಇಡೀ ದೇಶದ ಗಮನ ಸೆಳೆದಿದೆ.

20 ವರ್ಷಗಳ ಕಾಲ ಸೌದಿ ಅರೇಬಿಯಾದ ಜೈಲಿನಲ್ಲಿ ಕಣ್ಣೀರಿನ ದಿನಗಳನ್ನು ಕಳೆದಿದ್ದ ಕೋಯಿಕೋಡ್‌ನ ಅಬ್ದುಲ್ ರಹೀಂ ಅಂತಿಮವಾಗಿ ಬಿಡುಗಡೆಯಾಗಿ ತಾಯ್ನಾಡಿಗೆ ಮರಳಿದ್ದಾರೆ.2006ರಲ್ಲಿ ಕೇರಳದ ಕೋಯಿಕೋಡ್ ನಿವಾಸಿಯಾದ ಅಬ್ದುಲ್ ರಹೀಂ ತನ್ನ ಕುಟುಂಬದ ಬಡತನವನ್ನು ನೀಗಿಸಲು, ಸುಂದರ ಬದುಕು ಕಟ್ಟಿಕೊಳ್ಳುವ ಕನಸಿನೊಂದಿಗೆ ಸೌದಿ ಅರೇಬಿಯಾಕ್ಕೆ ಉದ್ಯೋಗದ ನಿಮಿತ್ತ ತೆರಳಿದ್ದರು. ಅಲ್ಲಿ ಅವರು ವಾಹನ ಚಾಲಕರಾಗಿ ಕೆಲಸಕ್ಕೆ ಸೇರಿಕೊಂಡರು. ಎಲ್ಲವೂ ಸರಿಯಾಗಿ ಸಾಗುತ್ತಿದೆ ಎನ್ನುವಷ್ಟರಲ್ಲಿ ವಿಧಿಯ ಆಟ ಬದಲಾಗಿತ್ತು.

ಒಂದು ದಿನ ತಾನು ಚಲಾಯಿಸುತ್ತಿದ್ದ ಕಾರಿನಲ್ಲಿ ದುರದೃಷ್ಟವಶಾತ್ ಪುಟ್ಟ ಬಾಲಕನೊಬ್ಬ ಅಕಸ್ಮಾತ್ತಾಗಿ ಸಾವನ್ನಪ್ಪುತ್ತಾನೆ. ಈ ಸಾವಿಗೆ ಚಾಲಕ ಅಬ್ದುಲ್ ರಹೀಂ ಅವರೇ ನೇರ ಕಾರಣ ಎಂದು ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿ ಅವರನ್ನು ಬಂಧಿಸುತ್ತಾರೆ. ಬದುಕು ಕಟ್ಟಿಕೊಳ್ಳಲು ಹೋದ ಯುವಕನ ಇಡೀ ಜೀವನ ಅಲ್ಲಿಗೆ ತಲೆಕೆಳಗಾಯಿತು.ಬಾಲಕನ ಸಾವಿನ ಪ್ರಕರಣದ ತನಿಖೆ ನಡೆದು ಸೌದಿ ನ್ಯಾಯಾಲಯವು ಅಬ್ದುಲ್ ರಹೀಂಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಿತು.

ಅನ್ಯಾಯವಾಗಿ, ಆಕಸ್ಮಿಕವಾಗಿ ನಡೆದ ಘಟನೆಗೆ ತನ್ನ ಜೀವವನ್ನೇ ತೆರಬೇಕಾಗಿ ಬಂದಲ್ಲಾ ಎಂದು ರಹೀಂ ಜೈಲಿನ ನಾಲ್ಕು ಗೋಡೆಗಳ ಮಧ್ಯೆ ಕಣ್ಣೀರಿಡುತ್ತಾ ಬರೊಬ್ಬರಿ 20 ವರ್ಷಗಳನ್ನು ಕಳೆದರು. ಇತ್ತ ಕೇರಳದಲ್ಲಿದ್ದ ಅವರ ವೃದ್ಧ ತಾಯಿ ಮಗನ ಬರುವಿಕೆಗಾಗಿ ಪ್ರತಿ ದಿನವೂ ದೇವರಲ್ಲಿ ಪ್ರಾರ್ಥಿಸುತ್ತಾ, ಶಬರಿಯಂತೆ ಕಾಯುತ್ತಿದ್ದರು. ರಹೀಂ ಅವರ ಬದುಕು ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ಜಗತ್ತಿನಾದ್ಯಂತ ಹರಡಿದ್ದ ಮಲಯಾಳಿಗಳ ಹೃದಯದಲ್ಲಿ ಕರುಣೆಯ ಜ್ಯೋತಿ ಬೆಳಗಿತು.ಕೆಲವೊಂದು ಇಸ್ಲಾಮಿಕ್ ರಾಷ್ಟ್ರಗಳ ಕಾನೂನಿನ ಪ್ರಕಾರ, ಮರಣದಂಡನೆ ಶಿಕ್ಷೆಗೆ ಒಳಗಾದ ಅಪರಾಧಿಯು ಶಿಕ್ಷೆಯಿಂದ ವಿನಾಯಿತಿ ಪಡೆಯಲು ಒಂದು ಅವಕಾಶವಿರುತ್ತದೆ. ಅದನ್ನೇ “ದಿಯಾ” ಅಥವಾ “ಬ್ಲಡ್ ಮನಿ” (Blood Money) ಎಂದು ಕರೆಯಲಾಗುತ್ತದೆ. ಸಂತ್ರಸ್ತ ಕುಟುಂಬಕ್ಕೆ ಬೃಹತ್ ಮೊತ್ತದ ಪರಿಹಾರವನ್ನು ನೀಡಿ, ಅವರು ಅಪರಾಧಿಯನ್ನು ಕ್ಷಮಿಸಲು ಒಪ್ಪಿಕೊಂಡರೆ ಶಿಕ್ಷೆಯಿಂದ ವಿನಾಯಿತಿ ದೊರೆಯುತ್ತದೆ.

ಅಬ್ದುಲ್ ರಹೀಂ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬವು ಬರೋಬ್ಬರಿ 34 ಕೋಟಿ ರೂಪಾಯಿ ಬ್ಲಡ್ ಮನಿ ಬೇಡಿಕೆಯನ್ನಿಟ್ಟಿತ್ತು. ಒಬ್ಬ ಸಾಮಾನ್ಯ ಚಾಲಕನ ಕುಟುಂಬಕ್ಕೆ ಈ ಮೊತ್ತ ಯೋಚಿಸಲೂ ಅಸಾಧ್ಯವಾಗಿತ್ತು. ಆದರೆ, ಈ ಸುದ್ದಿ ತಿಳಿಯುತ್ತಿದ್ದಂತೆ ಜಗತ್ತಿನಾದ್ಯಂತ ಇದ್ದ ಮಲಯಾಳಿಗಳು ಒಂದಾದರು. ಕೇರಳದ ಪ್ರಸಿದ್ಧ ಉದ್ಯಮಿ ಹಾಗೂ ಸಮಾಜಸೇವಕ ಬಾಬಿ ಚೆಮ್ಮನ್ನೂರು ಅವರು ಈ ಬೃಹತ್ ಧನಸಂಗ್ರಹಣೆಯ ಅಭಿಯಾನದ ನೇತೃತ್ವವನ್ನು ವಹಿಸಿಕೊಂಡರು.

“ಬ್ಲಡ್ ರಿಲೇಶನ್ (ರಕ್ತಸಂಬಂಧ) ಇಲ್ಲದಿದ್ದರೂ, ಕೇವಲ ಮನುಷ್ಯತ್ವದ ಸಂಬಂಧದಿಂದ ಲಕ್ಷಾಂತರ ಜನರು ಕೈಜೋಡಿಸಿದರು. ಕೇವಲ ಕೆಲವೇ ದಿನಗಳಲ್ಲಿ ಜಗತ್ತಿನ ಮೂಲೆ ಮೂಲೆಗಳಿಂದ ಹಣ ಹರಿದುಬಂದು 34 ಕೋಟಿ ರೂಪಾಯಿಗಳ ಬೃಹತ್ ಮೊತ್ತ ಸಂಗ್ರಹವಾಯಿತು!”ಸಂಗ್ರಹವಾದ 34 ಕೋಟಿ ರೂಪಾಯಿಗಳನ್ನು ಸೌದಿ ದೇಶದ ನ್ಯಾಯಾಲಯಕ್ಕೆ ಅಧಿಕೃತವಾಗಿ ಸಂದಾಯ ಮಾಡಿದ ಬಳಿಕ, ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡು ಅಬ್ದುಲ್ ರಹೀಂ ಜೈಲಿನಿಂದ ಮುಕ್ತರಾದರು. ಅವರು ಸೌದಿಯಿಂದ ಕೇರಳದ ಕ್ಯಾಲಿಕಟ್ (ಕೋಯಿಕೋಡ್) ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅಲ್ಲಿ ಸೃಷ್ಟಿಯಾಗಿದ್ದು ಇತಿಹಾಸ.

ತಮ್ಮದೇ ಮನೆಯ ಮಗ ಮರಳಿ ಬರುತ್ತಿದ್ದಾನೆ ಎಂಬಂತೆ ಸಾವಿರಾರು ಕೇರಳಿಗರು ವಿಮಾನ ನಿಲ್ದಾಣದಲ್ಲಿ ನೆರೆದು ಭಾವುಕವಾಗಿ ಸ್ವಾಗತಿಸಿದರು. ಇಂಟರ್ನೆಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯಗಳು ವೈರಲ್ ಆಗಿ ಇಡೀ ದೇಶದ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ. 20 ವರ್ಷಗಳ ಕಾಲ ಮಗನ ಮುಖ ನೋಡಲು ಹಂಬಲಿಸುತ್ತಿದ್ದ ವೃದ್ಧ ತಾಯಿ, ಮಗನನ್ನು ಅಪ್ಪಿ ಮುದ್ದಾಡಿದ ಕ್ಷಣ ನೆರೆದಿದ್ದವರಲ್ಲಿ ರೋಮಾಂಚನ ಉಂಟುಮಾಡಿತು.ಅಬ್ದುಲ್ ರಹೀಂ ಅವರಿಗೆ ಇದು ಕೇವಲ ಬಿಡುಗಡೆಯಲ್ಲ, ಬದಲಿಗೆ ಇಡೀ ಮಾನವಕುಲ ನೀಡಿದ ಪುನರ್ಜನ್ಮ. ಜನರ ಸಕಾಲಿಕ ಸ್ಪಂದನೆ, ಸಹೋದರತ್ವ ಮತ್ತು ನಿಸ್ವಾರ್ಥ ಮನೋಭಾವಕ್ಕೆ ಈ ಘಟನೆ ಅತ್ಯುತ್ತಮ ಉದಾಹರಣೆಯಾಗಿದೆ. 20 ವರ್ಷಗಳ ಕಾಲ ಅನ್ಯಾಯವಾಗಿ ಜೈಲು ಶಿಕ್ಷೆ ಅನುಭವಿಸಿ, ಪ್ರಾಣಭೀತಿಯಲ್ಲಿದ್ದ ಅಬ್ದುಲ್ ರಹೀಂ ಅವರ ಮುಂದಿನ ಜೀವನವು ಅವರ ಕುಟುಂಬದೊಂದಿಗೆ ಸುಖ, ಶಾಂತಿ ಮತ್ತು ಸಂತಸದಿಂದ ಕೂಡಿರಲಿ ಎಂಬುದೇ ಎಲ್ಲರ ಆಶಯ.

Leave a Reply

Discover more from

Subscribe now to keep reading and get access to the full archive.

Continue reading