ಮುತಾಲಿಕ್, ಚೈತ್ರಾ ಕುಂದಾಪುರ, ಸೇರಿದಂತೆ 52 ಕ್ರಿಮಿನಲ್ ಪ್ರಕರಣಗಳ ವಾಪಸ್ ಗೆ ಸಚಿವ ಸಂಪುಟ ನಿರ್ಧಾರ

ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಕಲಬುರಗಿ ಜಿಲ್ಲೆಯ ಆಳಂದ ಕೋಮುಗಲಭೆ ಪ್ರಕರಣ ಹಾಗೂ ವಿವಿಧ ಕನ್ನಡಪರ ಹೋರಾಟಗಳಿಗೆ ಸಂಬಂಧಿಸಿದಂತೆ ದಾಖಲಾಗಿದ್ದ ಒಟ್ಟು 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ರಾಜ್ಯ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ. ಹಿಂಪಡೆಯಲಾದ ಪ್ರಕರಣಗಳಲ್ಲಿ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರ, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹಾಗೂ ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ಸೇರಿದಂತೆ ಹಲವು ಮುಖಂಡರ ಮೇಲಿನ ಕೇಸ್‌ಗಳು ಸೇರಿವೆ.



ಕಲಬುರಗಿ ಜಿಲ್ಲೆಯ ಆಳಂದ ಪೊಲೀಸ್ ಠಾಣೆ ವ್ಯಾಪ್ತಿಯ ಲಾಡ್ಲೇ ಮಶಾಕ ದರ್ಗಾ ಆವರಣದಲ್ಲಿರುವ ರಾಘವಚೈತನ್ಯ ಶಿವಲಿಂಗಕ್ಕೆ ಬಾಲಾಪರಾಧಿಗಳಿಂದ ಅಪಮಾನ ಮಾಡಲಾಗಿತ್ತು. ಈ ಘಟನೆಯು ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಜೇವರ್ಗಿಯ ಆಂದೋಲ ಮಠದ ಸಿದ್ದಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಶಿವಲಿಂಗದ ಶುದ್ಧೀಕರಣ ಕಾರ್ಯಕ್ರಮ ಮತ್ತು ಆಳಂದ ಚಲೋ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿತ್ತು. ಆದರೆ, ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಪಟ್ಟಣ ಪ್ರವೇಶಿಸಿದ ಆರೋಪದ ಮೇಲೆ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರ ಹಾಗೂ ಸಿದ್ದಲಿಂಗ ಸ್ವಾಮೀಜಿ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಇದರೊಂದಿಗೆ, ಗಲಭೆಯ ಸಂದರ್ಭದಲ್ಲಿ ಪೊಲೀಸ್ ವಾಹನಕ್ಕೆ ಹಾನಿ ಮಾಡಿದ ಆರೋಪ ಎದುರಿಸುತ್ತಿದ್ದ ಅಕೀಬ ಅನ್ಸಾರಿ ಎಂಬ ಯುವಕ ಹಾಗೂ ನಿಷೇಧಾಜ್ಞೆ ಉಲ್ಲಂಘಿಸಿ ಗುಂಪುಗೂಡಿದ ಆರೋಪ ಎದುರಿಸುತ್ತಿದ್ದ ಇಬ್ಬರು ಅಪ್ರಾಪ್ತ ಬಾಲಕರ ಮೇಲಿನ ಪ್ರಕರಣಗಳನ್ನೂ ಸಹ ಸರ್ಕಾರ ಹಿಂಪಡೆಯಲು ನಿರ್ಧರಿಸಿದೆ.

ಕೋಮುಗಲಭೆ ಪ್ರಕರಣಗಳ ಜೊತೆಗೆ, ರಾಜ್ಯದ ನೆಲ, ಜಲ ಮತ್ತು ಭಾಷೆಯ ಹಿತರಕ್ಷಣೆಗಾಗಿ ನಡೆದ ಹೋರಾಟಗಳ ಸಂದರ್ಭದಲ್ಲಿ ದಾಖಲಾಗಿದ್ದ ಪ್ರಕರಣಗಳನ್ನೂ ರದ್ದುಗೊಳಿಸಲಾಗಿದೆ. ಕಾವೇರಿ ವಿವಾದ ಮತ್ತು ಮೇಕೆದಾಟು ಯೋಜನೆ ಹೋರಾಟಗಳ ನೇತೃತ್ವ ವಹಿಸಿದ್ದ ವಾಟಾಳ್ ನಾಗರಾಜ್ ಹಾಗೂ ಅವರ ಬೆಂಬಲಿಗರ ವಿರುದ್ಧ ದಾಖಲಾಗಿದ್ದ ಒಟ್ಟು 10 ಪ್ರಕರಣಗಳನ್ನು ಹಿಂಪಡೆಯಲಾಗಿದೆ.

ಹಾಗೆಯೇ, ಕನ್ನಡ ನಾಮಫಲಕ ಚಳುವಳಿಯ ಸಂದರ್ಭದಲ್ಲಿ ಇಂಗ್ಲಿಷ್ ಬ್ಯಾನರ್ ತೆರವುಗೊಳಿಸಿದ ಆರೋಪದ ಮೇಲೆ ರೂಪೇಶ್ ರಾಜಣ್ಣ ವಿರುದ್ಧ ದಾಖಲಾಗಿದ್ದ ಪ್ರಕರಣ ಮತ್ತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನೂ ಸರ್ಕಾರ ಕೈಬಿಟ್ಟಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ಒಟ್ಟು 52 ವಿವಿಧ ಪ್ರಕರಣಗಳಲ್ಲಿ ಸಿಲುಕಿದ್ದ ವಿವಿಧ ಸಂಘಟನೆಗಳ ನಾಯಕರು ಹಾಗೂ ಕಾರ್ಯಕರ್ತರಿಗೆ ಕಾನೂನು ರಿಲೀಫ್ ಸಿಕ್ಕಂತಾಗಿದೆ.

Leave a Reply

Discover more from

Subscribe now to keep reading and get access to the full archive.

Continue reading