ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಅಪರಾಧಿಯೊಬ್ಬ ಪೆರೋಲ್ ಮೇರೆಗೆ ಹೊರಬಂದು ತಲೆಮರೆಸಿಕೊಂಡಿದ್ದನು. ಕಳೆದ 12 ವರ್ಷಗಳಿಂದ ಬಾಲಿವುಡ್‌ನ ಸೂಪರ್ ಸ್ಟಾರ್‌ಗಳ ಜೊತೆ ಸಿನಿಮಾ ನಟನಾಗಿ ಮಿಂಚುತ್ತಿದ್ದ ಈತನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಅಹಮದಾಬಾದ್ ಮೂಲದ ಹೇಮಂತ್ ಮೋದಿ (53) ಎಂದು ಗುರುತಿಸಲಾಗಿದ್ದು, ಈತನನ್ನು ಕ್ರೈಂ ಬ್ರಾಂಚ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

2005ರಲ್ಲಿ ನರೋಡಾದಲ್ಲಿ ನಡೆದ ನರೇಂದ್ರ ಕಾಂಬ್ಳೆ ಕೊಲೆ ಪ್ರಕರಣದಲ್ಲಿ ಹೇಮಂತ್ ದೋಷಿಯಾಗಿದ್ದನು. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಈ ಕೊಲೆ ನಡೆದಿತ್ತು. 2008ರ ಆಗಸ್ಟ್ 27 ರಂದು ಹೇಮಂತ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಮಹೆಸಾನಾ ಜೈಲಿನಲ್ಲಿದ್ದ ಈತನಿಗೆ 2014ರ ಜುಲೈನಲ್ಲಿ ಗುಜರಾತ್ ಹೈಕೋರ್ಟ್ 30 ದಿನಗಳ ಪೆರೋಲ್ ಮಂಜೂರು ಮಾಡಿತ್ತು. ಆದರೆ ಪೆರೋಲ್ ಅವಧಿ ಮುಗಿದ ಮೇಲೆಯೂ ಈತ ಜೈಲಿಗೆ ಮರಳದ ಕಾರಣ, ಪೊಲೀಸರು ಈತನನ್ನು ತಲೆಮರೆಸಿಕೊಂಡಿರುವ ಅಪರಾಧಿ ಎಂದು ಘೋಷಿಸಿದ್ದರು.
ಜೈಲಿನಿಂದ ತಪ್ಪಿಸಿಕೊಂಡು ಮುಂಬೈಗೆ ತಲುಪಿದ ಈತ, ತನ್ನ ಹೆಸರನ್ನು ‘ಸ್ಪಂದನ್ ಮೋದಿ’ ಎಂದು ಬದಲಾಯಿಸಿಕೊಂಡು ಬಾಲಿವುಡ್‌ನಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಲು ಪ್ರಾರಂಭಿಸಿದನು. ಅಮೀರ್ ಖಾನ್ ಮತ್ತು ಅಮಿತಾಭ್ ಬಚ್ಚನ್ ನಟನೆಯ ‘ಥಗ್ಸ್ ಆಫ್ ಹಿಂದೂಸ್ತಾನ್’ ಹಾಗೂ ರಣವೀರ್ ಸಿಂಗ್ ನಾಯಕನಾಗಿದ್ದ ‘ಜಯೇಶ್ ಭಾಯ್ ಜೋರ್ದಾರ್’ ಮುಂತಾದ ಚಿತ್ರಗಳಲ್ಲಿ ಸಹನಟನಾಗಿ ಕಾಣಿಸಿಕೊಂಡಿದ್ದಾನೆ. ಇದರೊಂದಿಗೆ ‘ಯುಗಪುರುಷ್’, ‘ಗಾಂಧಿ ವಿರುದ್ಧ್ ಗೋಡ್ಸೆ’ ಮುಂತಾದ ನಾಟಕಗಳಲ್ಲಿ ಮತ್ತು ಕೆಲವು ಧಾರಾವಾಹಿಗಳಲ್ಲೂ ನಟಿಸಿದ್ದಾನೆ. ಗುಜರಾತಿ ಸಿನಿಮಾಗಳಲ್ಲೂ ಈತ ಅಭಿನಯಿಸಿದ್ದಾನೆ. ಅಷ್ಟೇ ಅಲ್ಲದೆ, ಮಲಯಾಳಂನ ಪ್ರಸಿದ್ಧ ಚಿತ್ರ ‘ಎಂಪೂರನ್’ ನಲ್ಲೂ ಹೇಮಂತ್ ನಟಿಸಿದ್ದಾನೆ ಎಂದು ಕ್ರೈಂ ಬ್ರಾಂಚ್ ತಿಳಿಸಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ‘ಲಾಹೋರ್ 1947’ ಚಿತ್ರದಲ್ಲೂ ಈತ ನಟಿಸಿದ್ದಾನೆ.
ನಟನಾಗಿ ಗುರುತಿಸಿಕೊಂಡ ನಂತರ ಈತ ಹಲವು ಬಾರಿ ಅಹಮದಾಬಾದ್‌ಗೆ ಬಂದಿದ್ದರೂ ಪೊಲೀಸರಿಗೆ ಈತನ ಮೇಲೆ ಅನುಮಾನ ಬಂದಿರಲಿಲ್ಲ. ಇತ್ತೀಚೆಗೆ ಆರೋಪಿ ತನ್ನ ಮನೆಗೆ ಬಂದಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಕ್ರೈಂ ಬ್ರಾಂಚ್ ಪೊಲೀಸರು ಜಾಲ ಬೀಸಿದ್ದರು. ಪೊಲೀಸರು ಬಂಧಿಸಲು ಬಂದಾಗಲೂ ತಾನು ಆ ವ್ಯಕ್ತಿಯಲ್ಲ, ತಪ್ಪಾಗಿ ಗುರುತಿಸಿದ್ದೀರಿ ಎಂದು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಸದ್ಯ ಹೇಮಂತ್‌ನನ್ನು ಮಹೆಸಾನಾ ಜೈಲಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


