ನೈಜ ರಾಷ್ಟ್ರವಾದ ರಕ್ಷಣೆಯ ಉದ್ದೇಶದ NSS ಎಂಬ ಹೊಸ ಸಂಘಟನೆ ಅಸ್ತಿತ್ವಕ್ಕೆ

ಬೆಂಗಳೂರು: ಭಾರತದ ಸಂವಿಧಾನಾತ್ಮಕ ಮೌಲ್ಯಗಳು, ಭ್ರಾತೃತ್ವ, ಜಾತ್ಯತೀತತೆ ಮತ್ತು ನೈಜ ರಾಷ್ಟ್ರವಾದವನ್ನು ರಕ್ಷಿಸುವ ಉದ್ದೇಶದೊಂದಿಗೆ ನ್ಯಾಷನಲ್ ಸೆಕ್ಯುಲರ್ ಸಂಘ (NSS) ಎಂಬ ಹೊಸ ಜಾತ್ಯತೀತ ಸಂಘಟನೆ ಸ್ಥಾಪನೆಯಾಗಿದೆ. ಸಂಘದ ಸಂಚಾಲಕರಾಗಿ ಸತ್ಯಪ್ರಕಾಶ್‌, ಸಹ ಸಂಚಾಲಕರಾಗಿ ವಕೀಲರಾದ ಶೈಲಜಾ ಅಮರನಾಥ್‌, ಸುಮತಿ ದೇವಗಿರಿಮಠ, ವೆಸ್ಲೆ ಬ್ರೌನ್‌, ಇಶಾಕ್ ಹುಸೇನ್ ಸೇರಿದಂತೆ ಹಲವರು ಮುಂದಾಳತ್ವ ವಹಿಸಿದ್ದಾರೆ.

ಸಂಘದ ಪರವಾಗಿ ಮಾತನಾಡಿದ ಸತ್ಯಪ್ರಕಾಶ್‌, ಆರ್‌ಎಸ್‌ಎಸ್‌ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಹೆಸರಿನಲ್ಲಿ ದೇಶದಾದ್ಯಂತ ಹುಸಿ ರಾಷ್ಟ್ರೀಯತೆ ಹರಡುತ್ತಿದೆ ಎಂದು ಆರೋಪಿಸಿದ್ದಾರೆ. ಅದಕ್ಕೆ ಪರ್ಯಾಯವಾಗಿ ನೈಜ ರಾಷ್ಟ್ರೀಯತೆ ಹಾಗೂ ಸಂವಿಧಾನಬದ್ಧ ಮೌಲ್ಯಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಕೇಡರ್ ಆಧಾರಿತ ಸ್ವಯಂಸೇವಕರ ಸಂಘಟನೆ ನಿರ್ಮಿಸಲಾಗುತ್ತದೆ ಎಂದು ಹೇಳಿದ್ದಾರೆ.
ಅವರು ನೆಹರು, ಮಹಾತ್ಮ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳಿಂದ ಪ್ರೇರಿತವಾಗಿ ವಿದ್ಯಾರ್ಥಿಗಳು, ಕಾರ್ಮಿಕರು, ವೃತ್ತಿಪರರು ಮತ್ತು ಹಿರಿಯ ನಾಗರಿಕರನ್ನು ಒಟ್ಟುಗೂಡಿಸುವ ಪಕ್ಷಾತೀತ ನಾಗರಿಕ ಚಳವಳಿಯಾಗಿದೆ ಎಂದು ವಿವರಿಸಿದ್ದಾರೆ.

ಮಾನವವಾದ, ಜನವಾದ ಮತ್ತು ಲೋಕವಾದ ನಮ್ಮ ತತ್ವ ಎಂದು ಹೇಳಿರುವ ಅವರು, ಬುದ್ಧ, ಬಸವಣ್ಣ ಮತ್ತು ಕುವೆಂಪು ಅವರ ಜೀವನದೃಷ್ಟಿಗೆ ಪ್ರಾಮುಖ್ಯತೆ ನೀಡುತ್ತೇವೆ ಎಂದಿದ್ದಾರೆ. ಜೊತೆಗೆ ಆರ್‌ಎಸ್‌ಎಸ್‌, ಬಜರಂಗದಳ ಮತ್ತು ವಿಎಚ್‌ಪಿ ಸಮಾಜದಲ್ಲಿ ಕೋಮು ದ್ವೇಷ ಹಬ್ಬಿಸುತ್ತಿವೆ ಎಂದು ಟೀಕಿಸಿದ್ದಾರೆ.

ಮುಂದಿನ ಮೂರು ವರ್ಷಗಳಲ್ಲಿ ಕರ್ನಾಟಕದ ಪ್ರತಿಯೊಂದು ಜಿಲ್ಲೆ, ತಾಲ್ಲೂಕು, ಹಳ್ಳಿ ಮತ್ತು ಬೂತ್ ಮಟ್ಟದಲ್ಲಿ ಸಂಘಟನೆ ಕಟ್ಟುವ ಗುರಿ ಹೊಂದಿದ್ದು, ಬಳಿಕ ದೇಶದ ಇತರ ರಾಜ್ಯಗಳಿಗೂ ವಿಸ್ತರಿಸುವ ಯೋಜನೆ ಇದೆ ಎಂದು ತಿಳಿಸಿದ್ದಾರೆ.

ಶೈಲಜಾ ಅಮರನಾಥ್ ಅವರು, ಕೋಮುವಾದಿ ಮತ್ತು ದ್ವೇಷ ರಾಜಕಾರಣದ ವಿರುದ್ಧ ಸಂವಿಧಾನಬದ್ಧ ರಾಷ್ಟ್ರ ನಿರ್ಮಾಣಕ್ಕಾಗಿ ಎಲ್ಲರೂ ಎನ್‌ಎಸ್‌ಎಸ್ ಜೊತೆ ಕೈಜೋಡಿಸಬೇಕು ಎಂದು ಕರೆ ನೀಡಿದ್ದಾರೆ. ಜಾತ್ಯತೀತ ತತ್ವದಲ್ಲಿ ನಂಬಿಕೆ ಇರುವ ಎಲ್ಲರೂ ಸದಸ್ಯರಾಗಬಹುದು ಎಂದೂ ಹೇಳಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading