ಮಂಗಳೂರು ನಗರ ಸೇರಿದಂತೆ ಹಲವೆಡೆ ಜನದಟ್ಟಣೆ ಇರುವ ಕಡೆ ಮತ್ತು ಯಾತ್ರಾ ಸ್ಥಳಗಳಲ್ಲಿ ಜಾಲತಾಣಗಳ ವೈರಲ್ ಹುಚ್ಚಿನಿಂದಾಗಿ ಯುವತಿಯರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಪುಂಡಾಟಿಕೆಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಹೆಚ್ಚಿಸಿಕೊಳ್ಳುವ ಮತ್ತು ರೀಲ್ಸ್ ಮಾಡುವ ನೆಪದಲ್ಲಿ ಕೆಲವು ಯುವಕರ ತಂಡಗಳು ಯುವತಿಯರನ್ನು ಅಡ್ಡಗಟ್ಟುತ್ತಿದ್ದು, ಇದು ದೊಡ್ಡ ಅಪಾಯದ ಮುನ್ಸೂಚನೆ ಎಂದು ಹೇಳಲಾಗುತ್ತಿದೆ.

ನಗರದ ಪ್ರಮುಖ ಆಕರ್ಷಣೀಯ ಕೇಂದ್ರಗಳಾದ ಶಾಪಿಂಗ್ ಮಾಲ್‌ಗಳು, ರೈಲ್ವೆ ಸ್ಟೇಷನ್ ಮತ್ತು ಕಾಲೇಜು ರಸ್ತೆಗಳನ್ನು ಇಂತಹ ತಂಡಗಳು ತಮ್ಮ ಅಡ್ಡಾಗಳನ್ನಾಗಿ ಮಾಡಿಕೊಂಡಿವೆ. ಕೈಯಲ್ಲಿ ಆಕರ್ಷಕ ಉಡುಗೊರೆ ಅಥವಾ ಹಣದ ಕಂತೆಗಳನ್ನು ಹಿಡಿದುಕೊಂಡು ಯುವತಿಯರ ಗುಂಪನ್ನು ತಡೆಯುವ ಇವರು, ಸಣ್ಣ ಪ್ರಶ್ನೆಗಳನ್ನು ಕೇಳುವ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡುವಂತೆ ಪೀಡಿಸುತ್ತಿದ್ದಾರೆ. ಇದೇ ನೆಪದಲ್ಲಿ ಮೊಬೈಲ್ ಸಂಖ್ಯೆಗಳನ್ನು ಪಡೆದು ಸ್ನೇಹ ಬೆಳೆಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.
ಮತ್ತು ಕೆಲವೊಮ್ಮೆ ಫ್ರಾಂಕ್ ಕಾಲ್ ಎಂದು ಕರೆಯಲ್ಪಡುವ ಅಂದರೆ ಯುವತಿಯರ ಅಥವಾ ಯುವಕರ ಮೊಬೈಲ್ ನಿಂದ ತಂದೆ ಅಥವಾ ತಾಯಿಗೆ ಕಾಲ್ ಮಾಡಿ ನಿಮ್ಮ ಮಗಳು ಅಥವಾ ಮಗ ಲವ್ ಗೆ ಬಿದ್ದಿದ್ದಾನೆ. ಇಂತಿಂಥವನ ಜತೆ ಓಡಿ ಹೋಗುವ ತಯಾರಿಯಲ್ಲಿದ್ದಾನೆ ಎಂದೆಲ್ಲ ತಮಾಷೆಗೆಂಬಂತೆ ಕಾಲ್ ಮಾಡಿ ಹೆತ್ತವರ ಆ ಕ್ಷಣಕ್ಕೆ ಶಾಕ್ ಮಾಡುವಂಥಾ ಅನೇಕ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿರುತ್ತದೆ. ಎಲ್ಲಾದರೂ ಹೃದಯ ಸಂಬಂಧಿ ಖಾಯಿಲೆ ಇರುವವರಾದರೆ ಪರಿಣಾಮ ಊಹಿಸಿ ನೋಡಿ. ಅದೇ ರೀತಿ ಒಂದೇ ಕ್ಷಣಕ್ಕೆ ತಮ್ಮ ಮಕ್ಕಳ ಮೇಲೆ ಇಟ್ಟಿರುವ ಭರವಸೆ ಕಳೆದುಕೊಂಡು ಏನಾದರೂ ಅನಾಹುತ ಮಾಡಿಕೊಂಡರೆ..? ಇದೇ ವಿಡಿಯೋ ಕಾರಣ ಮುಂದೆ ಮದುವೆ ಆಗುವ ಸಂದರ್ಭ ಸಂಬಂಧ ಕೂಡಿಬರದೇ ಕಷ್ಟ ಪಡುವ ಸ್ಥಿತಿಯೂ ನಿರ್ಮಾಣ ಆಗುವುದಿದೆ.

ಹೀಗೇ ವಿಡಿಯೋ ಮಾಡುತ್ತಾ ಅವರ ಖಾಸಗಿ ಕ್ಷಣಗಳ ಮುಖಭಾವಗಳನ್ನು ಬಳಸಿಕೊಂಡು ಮಾರ್ಫಿಂಗ್ ಮೂಲಕ ನಗ್ನ ದೃಶ್ಯಗಳನ್ನು ಸೇರಿಸಿ ಬ್ಲಾಕ್ ಮೇಲ್ ಮಾಡಿ ನಂತರ ಇದು ಆತ್ಮಹತ್ಯೆಯ ಹಂತಕ್ಕೂ ತಲುಪುತ್ತದೆ.
ಕೆಲವು ಕಂಟೆಂಟ್ ಕ್ರಿಯೇಟರ್‌ಗಳು ವೀವ್ಸ್ ಮತ್ತು ಲೈಕ್ಸ್ ಪಡೆಯುವ ಉದ್ದೇಶದಿಂದ ಯುವತಿಯರ ಅನುಮತಿ ಇಲ್ಲದೆಯೇ ವಿಡಿಯೋಗಳನ್ನು ಚಿತ್ರೀಕರಿಸುತ್ತಿದ್ದಾರೆ. ಇಂತಹ ವಿಡಿಯೋಗಳಲ್ಲಿ ಅವರ ಮುಜುಗರದ ಕ್ಷಣಗಳನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಸ್ಥಳೀಯರ ದೂರಿನ ಅನ್ವಯ, ಕಾಸರಗೋಡು ಮತ್ತು ಉಪ್ಪಳದಂತಹ ನೆರೆಹೊರೆಯ ಭಾಗಗಳಿಂದಲೂ ಕೆಲವು ಯುವಕರು ಬಂದು ಇಂತಹ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ.


ಈ ರೀತಿಯ ಸಣ್ಣ ಆಮಿಷಗಳು ಮುಂದೆ ದೊಡ್ಡ ಅನಾಹುತಗಳಿಗೆ ಕಾರಣವಾಗಬಹುದು ಎಂದು ಈ ಹಿಂದಿನ ಘಟನೆಗಳು ಎಚ್ಚರಿಸುತ್ತಿವೆ. ಕಳೆದ ವರ್ಷ ಮುಲ್ಕಿಯಲ್ಲಿ ಇನ್‌ಸ್ಟಾಗ್ರಾಮ್ ಸ್ನೇಹದ ಹೆಸರಿನಲ್ಲಿ ಅಪ್ರಾಪ್ತೆಯನ್ನು ಅಪಹರಿಸಿದ ಪ್ರಕರಣ ಮತ್ತು ಗುರುಪುರದಲ್ಲಿ ನಡೆದ ಅಹಿತಕರ ಘಟನೆಗಳು ಇದಕ್ಕೆ ಸಾಕ್ಷಿಯಾಗಿವೆ. ಒಮ್ಮೆ ಮೊಬೈಲ್ ಸಂಖ್ಯೆ ಅಥವಾ ವಿಡಿಯೋಗಳು ಅಪರಿಚಿತರ ಕೈ ಸೇರಿದರೆ, ಅವುಗಳನ್ನು ಬ್ಲ್ಯಾಕ್‌ಮೇಲ್ ಮಾಡಲು ಬಳಸುವ ಸಾಧ್ಯತೆಗಳಿರುತ್ತವೆ.
ಹೀಗಾಗಿ ಯುವತಿಯರು ಇಂತಹ ಅಪರಿಚಿತರ ಆಮಿಷಗಳಿಗೆ ಮರುಳಾಗದೆ ಜಾಗರೂಕರಾಗಿರಬೇಕು.
ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ಅಡ್ಡಗಟ್ಟಿ ಉಡುಗೊರೆಯ ಆಸೆ ತೋರಿಸಿದರೆ ಅಥವಾ ಅನುಮತಿ ಇಲ್ಲದೆ ವಿಡಿಯೋ ಮಾಡಿದರೆ ತಕ್ಷಣವೇ ಪ್ರತಿಭಟಿಸಬೇಕು. ಪೋಷಕರು ಕೂಡ ತಮ್ಮ ಮಕ್ಕಳ ಆನ್‌ಲೈನ್ ಚಟುವಟಿಕೆಗಳ ಮೇಲೆ ನಿಗಾ ಇಡಬೇಕು ಮತ್ತು ಅಪರಿಚಿತರ ಸ್ನೇಹದಿಂದ ಉಂಟಾಗುವ ತೊಂದರೆಗಳ ಬಗ್ಗೆ ಅವರಿಗೆ ತಿಳಿಹೇಳಬೇಕು.
ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಪುಂಡಾಟಿಕೆಗಳು ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣವೇ ಪೊಲೀಸ್ ಸಹಾಯವಾಣಿ 112 ಅಥವಾ ಮಂಗಳೂರು ಸಿಟಿ ಪೊಲೀಸ್ ಕಂಟ್ರೋಲ್ ರೂಮ್ ಸಂಖ್ಯೆ 0824 2220500 ಗೆ ಕರೆ ಮಾಡಿ ಮಾಹಿತಿ ನೀಡುವ ಮೂಲಕ ಸುರಕ್ಷತೆಗೆ ಸಹಕರಿಸಬೇಕೆಂದು ಸಾಕಾರ ನ್ಯೂಸ್ ವಿನಂತಿಸುತ್ತದೆ. ಒಂದು ಸಣ್ಣ ಉಡುಗೊರೆಗಾಗಿ ಜೀವನವನ್ನು ಸಂಕಷ್ಟಕ್ಕೆ ದೂಡಿಕೊಳ್ಳದೆ, ಎಚ್ಚರಿಕೆಯಿಂದ ಇರುವುದು ಇಂದಿನ ಅಗತ್ಯವಾಗಿದೆ.

