ಮೊದಲ ವಾಗಿ ಹೇಳುವಂತೆ ಕೇರಳದ ರಾಜಕೀಯ ಸಮೀಕರಣಗಳು ಮೇಲ್ನೋಟಕ್ಕೆ ಪ್ರಗತಿಪರವಾಗಿ ಕಂಡರೂ, ಅಧಿಕಾರದ ಆಳದಲ್ಲಿ ಅಡಗಿರುವ ಅಸಮಾನತೆ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟಿರುವ ಮುಸ್ಲಿಂ ಸಮುದಾಯ ಮತ್ತು ದೊಡ್ಡ ಸಂಖ್ಯೆಯಲ್ಲಿರುವ ಈಳವ ಸಮುದಾಯಗಳು ಅಧಿಕಾರದ ಕೇಂದ್ರಬಿಂದುವಿನಿಂದ ದೂರ ಉಳಿದಿರುವುದು ಪ್ರಜಾಪ್ರಭುತ್ವದ ಆಶಯಗಳ ಮೇಲೆ ಪ್ರಶ್ನೆಗಳನ್ನು ಮೂಡಿಸಿದೆ.

ನಾಯಕತ್ವದ ರೇಸ್ ಮತ್ತು ಮೇಲ್ವರ್ಗದ ಪ್ರಾಬಲ್ಯ
ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟದಲ್ಲಿ ಮುಖ್ಯಮಂತ್ರಿ ಸ್ಥಾನದ ಚರ್ಚೆ ಬಂದಾಗಲೆಲ್ಲಾ ಕೇವಲ ನಾಯರ್ ಸಮುದಾಯದ ನಾಯಕರ ಹೆಸರುಗಳು ಮಾತ್ರ ಮುಂಚೂಣಿಗೆ ಬರುತ್ತಿವೆ. ಶೇಕಡಾ 60ಕ್ಕೂ ಅಧಿಕ ಇರುವ ಹಿಂದುಳಿದ ವರ್ಗಗಳು ಮತ್ತು ಮುಸ್ಲಿಮ್ ಸಮುದಾಯಗಳಿಂದ ಒಬ್ಬೇ ಒಬ್ಬ ನಾಯಕನೂ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹತೆ ಪಡೆದಿಲ್ಲ ಎಂಬಂತೆ ಬಿಂಬಿತವಾಗುತ್ತಿರುವುದು ದುರದೃಷ್ಟಕರ. ದೆಹಲಿ ಮಟ್ಟದಲ್ಲಿ ನಡೆಯುವ ತೀರ್ಮಾನಗಳು ಕೇವಲ 12 ರಿಂದ 15 ಪ್ರತಿಶತ ಇರುವ ಮೇಲ್ವರ್ಗದ ಹಿತಾಸಕ್ತಿಯನ್ನು ಕಾಪಾಡುತ್ತಿವೆಯೇ ಎಂಬ ಸಂಶಯ ರಾಜಕೀಯ ವಲಯದಲ್ಲಿ ದಟ್ಟವಾಗಿದೆ.

ಈಳವ ಸಮುದಾಯದ ಪ್ರಬಲ ಧ್ವನಿಗಳಾದ ಕೆ. ಸುಧಾಕರನ್ ಮತ್ತು ಮುಲ್ಲಪಳ್ಳಿ ರಾಮಚಂದ್ರನ್ ಅವರಂತಹ ಹಿರಿಯ ನಾಯಕರನ್ನು ಯೋಜಿತವಾಗಿ ಮೂಲೆಗುಂಪು ಮಾಡಲಾಗುತ್ತಿದೆ. ಸುಧಾಕರನ್ ಅವರನ್ನು ದೆಹಲಿ ರಾಜಕಾರಣಕ್ಕೆ ಸೀಮಿತಗೊಳಿಸಿರುವುದು ಒಂದು ರೀತಿಯಲ್ಲಿ ಅವರ ನಾಯಕತ್ವಕ್ಕೆ ಹಾಕಿದ ಬೇಲಿಯಂತಿದೆ. ಜನಬಲವಿರುವ ನಾಯಕರನ್ನು ಪಕ್ಕಕ್ಕೆ ಸರಿಸಿ, ಪ್ರಭಾವಿ ಸಮುದಾಯಗಳ ಪ್ರಾತಿನಿಧ್ಯವನ್ನು ಕುಂದಿಸುವ ಇಂತಹ ಧೋರಣೆಗಳು ಪಕ್ಷದ ಪುನರುಜ್ಜೀವನಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ.



ಕೇರಳದ ಚುನಾವಣಾ ಫಲಿತಾಂಶವನ್ನು ಬುಡಮೇಲು ಮಾಡುವ ಶಕ್ತಿ ಹೊಂದಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML), ಯುಡಿಎಫ್ ಮೈತ್ರಿಕೂಟದ ಬೆನ್ನೆಲುಬಾಗಿ ನಿಂತಿದೆ. ಮೈತ್ರಿಕೂಟ ಪಡೆಯುವ ಒಟ್ಟು ಸ್ಥಾನಗಳಲ್ಲಿ ಮೂರನೇ ಒಂದು ಭಾಗ ಲೀಗ್ ಪಾಲಿನದ್ದೇ ಆಗಿರುತ್ತದೆ. ಈ ಅಂಕಿ-ಅಂಶಗಳ ಪ್ರಕಾರ, ಕನಿಷ್ಠ ಪ್ರತಿ ಮೂರು ಅವಧಿಗೆ ಒಮ್ಮೆಯಾದರೂ ಮುಸ್ಲಿಂ ಲೀಗ್ ಮುಖ್ಯಮಂತ್ರಿ ಸ್ಥಾನವನ್ನು ಪಡೆಯಲು ಸಂಪೂರ್ಣ ಅರ್ಹತೆ ಹೊಂದಿದೆ. ಆದರೆ, 1979ರಲ್ಲಿ ಸಿ.ಎಚ್. ಮಹಮ್ಮದ್ ಕೋಯ ಅವರು ಕೇವಲ 13 ದಿನ ಮುಖ್ಯಮಂತ್ರಿಯಾಗಿದ್ದನ್ನು ಹೊರತುಪಡಿಸಿದರೆ ಆ ಸಮುದಾಯಕ್ಕೆ ಉನ್ನತ ಸ್ಥಾನ ಸಿಕ್ಕಿಲ್ಲ. ಯುಡಿಎಫ್‌ಗೆ ಅಂಟಿಕೊಂಡು ಮೇಲ್ವರ್ಗದ ನಾಯಕತ್ವಕ್ಕೆ ಮಣಿಯುತ್ತಿರುವ ಮುಸ್ಲಿಂ ಲೀಗ್‌ನ ಧೋರಣೆಯು ಒಂದು ರೀತಿಯಲ್ಲಿ ಸ್ವಾಭಿಮಾನ ಶೂನ್ಯ ರಾಜಕಾರಣದಂತೆ ಕಾಣುತ್ತಿದೆ. ಗಟ್ಟಿಯಾದ ಚೌಕಾಶಿ ನಡೆಸುವ ಶಕ್ತಿ ಇದ್ದರೂ ಕೇವಲ ಅಸ್ತಿತ್ವಕ್ಕಾಗಿ ಸುಮ್ಮನಿರುವುದು ಮತ್ತು ತಮ್ಮ ಗಂಟು ಭದ್ರಪಡಿಸಿಕೊಂಡು ಆರಾಮಾಗಿದ್ದುಬಿಡುವ ಮುಸ್ಲಿಮ್ ಲೀಗ್ ನಾಯಕರುಗಳ ಮೌನ ಸಮುದಾಯದ ಹಿತಾಸಕ್ತಿಗೆ ಮಾರಕವಾಗಿದೆ.
ಈ ಬಿಕ್ಕಟ್ಟು ಕೇವಲ ಕೇರಳಕ್ಕೆ ಸೀಮಿತವಾಗಿಲ್ಲ. ಕರ್ನಾಟಕದ ರಾಜಕಾರಣವನ್ನು ಗಮನಿಸಿದರೆ, ಅಲ್ಲಿಯೂ ಮುಸ್ಲಿಂ ಸಮುದಾಯದ ಪ್ರತಿನಿಧಿಗಳಿದ್ದರೂ ನಾಯಕತ್ವದ ನೈಜ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಸ್ಪೀಕರ್, ಸಚಿವರು ಅಥವಾ ಶಾಸಕರಾಗಿ ಆಯ್ಕೆಯಾದವರು ಕೇವಲ ಪಕ್ಷದ ಹೈಕಮಾಂಡ್ ಅಥವಾ ಮೇಲ್ವರ್ಗದ ನಾಯಕತ್ವಕ್ಕೆ ಡೊಗ್ಗು ಸಲಾಮು ಹೊಡೆಯುವ ಸಂಸ್ಕೃತಿಯನ್ನು ಅಳವಡಿಸಿಕೊಂಡಿದ್ದಾರೆ. ಇದರಿಂದ ಸಮುದಾಯದ ಮೂಲಭೂತ ಏಳಿಗೆಗೆ ಯಾವುದೇ ಗಮನಾರ್ಹ ಲಾಭವಾಗಿಲ್ಲ ಎನ್ನುವುದು ಜಗಜ್ಜಾಹೀರಾದ ಸತ್ಯ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರವು ಸಮಾನವಾಗಿ ಹಂಚಿಕೆಯಾಗಬೇಕು. ಪ್ರತಿಯೊಂದು ಸಮುದಾಯವೂ ಅಧಿಕಾರಕ್ಕಾಗಿ ಹಠ ಹಿಡಿಯುವುದು ವ್ಯವಸ್ಥೆಗೆ ಸವಾಲಾಗಬಹುದಾದರೂ, ಜನಸಂಖ್ಯೆಯಲ್ಲಿ ದೊಡ್ಡ ಪಾಲನ್ನು ಹೊಂದಿರುವ ವರ್ಗಗಳನ್ನು ಕಡೆಗಣಿಸಿ ಕೇವಲ ಮೇಲ್ವರ್ಗಕ್ಕೆ ಮಣೆ ಹಾಕುವುದು ಕೇರಳದಂತಹ ಪ್ರಗತಿಪರ ರಾಜ್ಯದ ಪಾಲಿಗೆ ಕಪ್ಪುಚುಕ್ಕೆಯಾಗಿದೆ. ಇತರ ಸಮುದಾಯದವರು ಬಂದು ಜನಹಿತ ಕಾರ್ಯ ಮಾಡುವುದರಲ್ಲಿ ಅಭ್ಯಂತರವಿಲ್ಲದಿದ್ದರೂ, ಪ್ರಾತಿನಿಧ್ಯದ ಪ್ರಶ್ನೆ ಬಂದಾಗ ಮಾತ್ರ ಪಕ್ಷಪಾತ ಎಸಗುವುದು ಸಾಮಾಜಿಕ ನ್ಯಾಯದ ಕೊಲೆಯಂತಾಗುತ್ತದೆ. ಈ ಅಸಮತೋಲನವು ಮುಂದುವರಿದರೆ ಜನಸಾಮಾನ್ಯರಲ್ಲಿ ಮತ್ತು ಪ್ರಭಾವಿ ಸಮುದಾಯಗಳಲ್ಲಿ ಅಸಮಾಧಾನ ಸ್ಫೋಟಗೊಳ್ಳುವುದು ಖಚಿತ.

