ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ರಾಜ್ಯದಲ್ಲಿ ಎದುರಾಗಿದ್ದ ರಾಜಕೀಯ ಅನಿಶ್ಚಿತತೆ ಈಗ ಸುಖಾಂತ್ಯ ಕಂಡಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷವು ಚುನಾವಣೆಯಲ್ಲಿ 107 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೂ ಸಹ ಸ್ಪಷ್ಟ ಬಹುಮತಕ್ಕೆ ಅಗತ್ಯವಿದ್ದ 118 ಸ್ಥಾನಗಳ ಗುರಿ ತಲುಪಲು ಇನ್ನು 11 ಸ್ಥಾನಗಳ ಕೊರತೆ ಉಂಟಾಗಿತ್ತು. ಈ ಸಂದರ್ಭದಲ್ಲಿ ರಾಜ್ಯಪಾಲರು ಕಟ್ಟುನಿಟ್ಟಿನ ಸೂಚನೆ ನೀಡಿ, 118 ಶಾಸಕರ ಬೆಂಬಲದ ಸ್ಪಷ್ಟ ದಾಖಲೆ ನೀಡದ ಹೊರತು ಸರ್ಕಾರ ರಚಿಸಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದರು.

ಈ ಅಗ್ನಿಪರೀಕ್ಷೆಯು ವಿಜಯ್ ಅವರಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಆದರೆ ಕೊನೆಗೂ ಜಾತ್ಯಾತೀತ ನಿಲುವಿನಡಿಯಲ್ಲಿ ಕೆಲವು ಪಕ್ಷಗಳು ಬೆಂಬಲಿಸಲು ಒಪ್ಪಿಕೊಂಡ ಕಾರಣ ಈ ಬಿಕ್ಕಟ್ಟು ಬಗೆಹರಿದಿದೆ. ಕಾಂಗ್ರೆಸ್ ಪಕ್ಷದ 5 ಶಾಸಕರು, ಸಿಪಿಐ ಪಕ್ಷದ 2 ಶಾಸಕರು, ಸಿಪಿಐಎಂ ಪಕ್ಷದ 2 ಶಾಸಕರು ಹಾಗೂ ವಿಸಿಕೆ ಪಕ್ಷದ ಇಬ್ಬರು ಶಾಸಕರು ವಿಜಯ್ ಅವರಿಗೆ ಅಧಿಕೃತವಾಗಿ ಬೆಂಬಲ ಘೋಷಿಸಿದ್ದಾರೆ. ಇದರಿಂದಾಗಿ ವಿಜಯ್ ಅವರ ಮೈತ್ರಿಕೂಟದ ಸಂಖ್ಯಾಬಲವು 118ಕ್ಕೆ ಏರಿಕೆಯಾಗಿದ್ದು, ಬಹುಮತದ ಗಡಿಯನ್ನು ದಾಟಿದಂತಾಗಿದೆ.


ಶಾಸಕರ ಬೆಂಬಲದೊಂದಿಗೆ ವಿಜಯ್ ಅವರ ಸರ್ಕಾರ ರಚನೆಯ ಹಾದಿ ಸುಗಮವಾಗಿದೆ. ಕೊನೆ ಕ್ಷಣದಲ್ಲಿ ಬೇರೇನಾದರೂ ಡ್ರಾಮಾ ಶುರುಆಗದೇ ಹೋದರೆ ನಾಳೆ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ಖಚಿತ ಎನ್ನಲಾಗಿದೆ. ಈ ಮೂಲಕ ಸಿನಿಮಾದ ಯಶಸ್ಸಿನ ಬಳಿಕ ರಾಜಕೀಯ ರಂಗದಲ್ಲೂ ಅಧಿಕಾರದ ಚುಕ್ಕಾಣಿ ಹಿಡಿಯುವ ಅವರ ಕನಸು ನನಸಾಗುತ್ತಿದೆ.






