ತಮಿಳುನಾಡು ರಾಜಕೀಯದ ಇಂದಿನ ಬೆಳವಣಿಗೆಗಳನ್ನು ಗಮನಿಸಿದರೆ ರಜನಿಕಾಂತ್ ಅವರಿಗೆ ಅತೀವ ಬೇಸರವಾಗುವುದು ಸಹಜ. ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷವು ಸಾಧಿಸುತ್ತಿರುವ ಅಭೂತಪೂರ್ವ ಯಶಸ್ಸನ್ನು ನೋಡಿದಾಗ, ರಜನಿಕಾಂತ್ ಅವರು ಸರಿಯಾದ ಸಮಯದಲ್ಲಿ ರಾಜಕೀಯ ನಿರ್ಧಾರ ತೆಗೆದುಕೊಂಡಿದ್ದರೆ ಇಂದು ತಮಿಳುನಾಡಿನ ಮುಖ್ಯಮಂತ್ರಿ ಕುರ್ಚಿಯ ಮೇಲೆ ಅವರೇ ಇರುತ್ತಿದ್ದರು ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ ತಮಿಳರ ಪಲ್ಸ್ ತಿಳಿದವರಿಗೆ ಅದು ಅಷ್ಟು ಸುಲಭ ಇರಲಿಲ್ಲ ಅನ್ನುವುದು ಗೊತ್ತಿರುತ್ತದೆ.
ವಿಜಯ್ ಅವರಿಗಿಂತ ದಶಕಗಳ ಕಾಲ ತಮಿಳುನಾಡಿನಲ್ಲಿ ಅತ್ಯುನ್ನತ ಜನಪ್ರಿಯತೆ ಅನುಭವಿಸಿದವರು ರಜನಿಕಾಂತ್. ಕನಿಷ್ಠಪಕ್ಷ ಎಂತಿರನ್ ಸಿನಿಮಾ ಬಿಡುಗಡೆಯಾದ ಸಮಯದಲ್ಲಾದರೂ ಅವರು ರಾಜಕೀಯ ಪಕ್ಷ ಘೋಷಿಸಿದ್ದರೆ ತಮಿಳುನಾಡಿನ ಇತಿಹಾಸವೇ ಬೇರೆಯಾಗಿರುತ್ತಿತ್ತು ಎಂದು ಹೇಳಲಾಗುತ್ತಿದೆ. ಆದರೆ ವಿಧಿಯಾಟ ಮತ್ತು ಹದಗೆಟ್ಟ ಆರೋಗ್ಯದ ಕಾರಣದಿಂದ ಅವರು ಅನಿವಾರ್ಯವಾಗಿ ರಾಜಕೀಯದಿಂದ ಹಿಂದೆ ಸರಿಯಬೇಕಾಯಿತು. ಅದರ ಜತೆ ಮಹತ್ವದ್ದು ಇನ್ನೊಂದಿದೆ.



ರಜನಿಕಾಂತ್ ಅವರ ರಾಜಕೀಯ ಹಿನ್ನಡೆಗೆ ಕೇವಲ ಆರೋಗ್ಯವಷ್ಟೇ ಕಾರಣವಲ್ಲ, ಅವರ ಸೈದ್ಧಾಂತಿಕ ಗೊಂದಲಗಳು ಕೂಡ ಪ್ರಮುಖ ಪಾತ್ರ ವಹಿಸಿವೆ. ಒಂದು ಕಡೆ ಬಲಪಂಥೀಯರನ್ನು ಮತ್ತು ಅವರ ನೀತಿಗಳನ್ನು ಬಹಿರಂಗವಾಗಿ ಹೊಗಳುವ ರಜನಿ, ಮತ್ತೊಂದೆಡೆ ಆರೆಸ್ಸೆಸ್ ಮತ್ತು ಬಿಜೆಪಿಗೆ ಸಹ್ಯವಾಗದ ದ್ರಾವಿಡ ನೆಲದ ಬಗ್ಗೆ ಅಭಿಮಾನ ಮತ್ತು ಕಾಳಜಿಯನ್ನು ವ್ಯಕ್ತಪಡಿಸುತ್ತಿದ್ದರು. ಈ ರೀತಿಯ ದ್ವಂದ್ವ ನಿಲುವುಗಳು ತಮಿಳುನಾಡಿನ ದ್ರಾವಿಡ ರಾಜಕಾರಣದ ನೆಲದಲ್ಲಿ ಜನರಿಗೆ ಸ್ಪಷ್ಟವಾದ ಸಂದೇಶ ನೀಡಲು ವಿಫಲವಾದವು. ಇದು ಅವರು ರಾಜಕೀಯವಾಗಿ ಬೆಳಗದೆ ಇರಲು ಮುಖ್ಯ ಕಾರಣವಾಯಿತು.



ಈಗ ವಿಜಯ್ ಮತ್ತು ರಜನಿ ನಡುವಿನ ಚರ್ಚೆಗಳಿಗೆ ಯಾವುದೇ ಪ್ರಸ್ತುತಿ ಇಲ್ಲ. ಏಕೆಂದರೆ ಅಂಕಿಅಂಶಗಳೇ ಎಲ್ಲವನ್ನೂ ಸಾಬೀತುಪಡಿಸಿವೆ. ತಮಿಳುನಾಡಿನ ಇತಿಹಾಸದ ದಂತಕಥೆ ಎಂಜಿಆರ್ ಅವರು ಗಳಿಸಿದ್ದು ಶೇಕಡಾ 33 ರಷ್ಟು ಮತಗಳಾದರೆ, ವಿಜಯ್ ಅದನ್ನು ಶೇಕಡಾ 35 ಕ್ಕೆ ಏರಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ತಮಿಳುನಾಡು ಇತಿಹಾಸದಲ್ಲಿ ಅತ್ಯಂತ ಪ್ರಭಾವಿ ತಾರೆಯಾಗಿ ಹೊರಹೊಮ್ಮಿರುವ ವಿಜಯ್ ಅವರ ಈ ಪ್ರವೇಶವನ್ನು ನೋಡಿದರೆ ಯಾರು ಅಸಲಿ ಬಾಸ್ ಎಂಬುದು ಸ್ಪಷ್ಟವಾಗಿದೆ. ಇನ್ನು ಮುಂದೆ ತಮಿಳುನಾಡು ಜೋಸೆಫ್ ವಿಜಯ್ ಆಡಳಿತದಲ್ಲಿ ಹೇಗಿರಲಿದೆ ಕಾದು ನೋಡಬೇಕು




