ಭೀಕರ ಅಪಘಾತದಲ್ಲಿ ಇಬ್ಬರು ಯುವಕರ ದುರ್ಮರಣ

ಸವಣೂರು ಸಮೀಪದ ಚಾಪಳ್ಳ ತಿರುವಿನಲ್ಲಿ ಇಂದು ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಮುಗೆರೋಡಿ ಕನ್ಸ್‌ಟ್ರಕ್ಷನ್‌ಗೆ ಸೇರಿದ ನೀರಿನ ಟ್ಯಾಂಕರ್ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಈ ಡಿಕ್ಕಿಯಿಂದಾಗಿ ಬಂಟ್ವಾಳ ತಾಲೂಕಿನ ಮಿತ್ತೂರು ಬೊಳ್ಳರಮಜಲು ನಿವಾಸಿ ಯಜ್ನೇಶ್ (21) ಹಾಗೂ ಗೋಳ್ತಮಜಲು ನಿವಾಸಿ ಜಗನ್ (20) ಸಾವನ್ನಪ್ಪಿದ್ದಾರೆ.

ಕಡಬ ತಾಲೂಕಿನ ಅಲಂಕಾರಿಗೆ ಕೆಲಸದ ನಿಮಿತ್ತ ತೆರಳಿದ್ದ ಇವರು, ಸಂಜೆ 5 ಗಂಟೆ ಸುಮಾರಿಗೆ ವಾಪಸ್ ಬರುತ್ತಿದ್ದಾಗ ಚಾಪಳ್ಳ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಸವಾರ ಯಜ್ನೇಶ್ ಸ್ಥಳದಲ್ಲೇ ಮೃತಪಟ್ಟರೆ, ಪುತ್ತೂರಿನ ಅಕ್ಷಯ ಕಾಲೇಜಿನ ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಯಾಗಿದ್ದ ಜಗನ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ದಾರಿಯಲ್ಲಿ ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ. ಮೃತ ಜಗನ್ ಇತ್ತೀಚೆಗಷ್ಟೇ ಆಸ್ಟ್ರೇಲಿಯಾದಲ್ಲಿ ಇಂಟರ್ನ್‌ಶಿಪ್ ಮುಗಿಸಿ ಕೆಲ ದಿನಗಳ ಹಿಂದೆಯಷ್ಟೇ ತವರಿಗೆ ಆಗಮಿಸಿದ್ದರು.

ಅಲಂಕಾರಿನಲ್ಲಿ ನಡೆಯುತ್ತಿದ್ದ ಕಾಮಗಾರಿಗೆ ನೀರು ಪೂರೈಸುತ್ತಿದ್ದ ಟ್ಯಾಂಕರ್ ಚಾಲಕ ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ವಾಹನವನ್ನು ಎಡಕ್ಕೆ ತಿರುಗಿಸಿದ್ದಾನೆ. ಆದರೂ ನಿಯಂತ್ರಣ ತಪ್ಪಿ ಬೈಕ್ ಟ್ಯಾಂಕರ್ ಚಕ್ರದ ಅಡಿಗೆ ಸಿಲುಕಿದೆ. ಇದೇ ವೇಳೆ ಟ್ಯಾಂಕರ್ ರಸ್ತೆ ಪಕ್ಕದ ಕಂದಕಕ್ಕೆ ಉರುಳಿದೆ. ಇವರ ಹಿಂದೆಯೇ ಬರುತ್ತಿದ್ದ ಮತ್ತೊಂದು ಬೈಕ್ ಕೂಡ ಅಪಘಾತದ ತೀವ್ರತೆ ಕಂಡು ಗಾಬರಿಯಿಂದ ಬ್ರೇಕ್ ಹಾಕಿದಾಗ ಸ್ಕಿಡ್ ಆಗಿ ಬಿದ್ದಿದ್ದು, ಅದರಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ವಿದ್ಯಾರ್ಥಿ ಜಗನ್ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಶೋಕಾಚರಣೆ ನಿಮಿತ್ತ ಅಕ್ಷಯ ಕಾಲೇಜಿಗೆ ನಾಳೆ ರಜೆ ಘೋಷಿಸಲಾಗಿದೆ. ಆಸ್ಪತ್ರೆ ಆವರಣದಲ್ಲಿ ಜಮಾಯಿಸಿದ್ದ ಮೃತರ ಕುಟುಂಬಸ್ಥರ ಹಾಗೂ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತ್ತು.

Leave a Reply

Discover more from

Subscribe now to keep reading and get access to the full archive.

Continue reading