ಬದ್ಧತೆ ಮೆರೆದ ತ್ರಿಕರಿಪುರದ ಜನರು: ಸಂದೀಪ್ ವಾರ್ಯರ್ ಬದಲಾವಣೆಗೆ ತೆರೆದುಕೊಂಡಾದ ಜನ ಸ್ವೀಕರಿಸಿದರು

ಸಂದೀಪ್ ವಾರಿಯರ್ ಎಂಬ ಹೆಸರು ಕೇಳಿದ ಕೂಡಲೇ ಒಂದು ಕಾಲದಲ್ಲಿ ನೆನಪಾಗುತ್ತಿದ್ದುದು ಕೋಪ, ತೀಕ್ಷ್ಣ ಮಾತುಗಳು ಮತ್ತು ಒಂದು ನಿರ್ದಿಷ್ಟ ಸಮುದಾಯದ ವಿರುದ್ಧದ ತೀವ್ರ ವಾಗ್ದಾಳಿ. ಮುಸ್ಲಿಂ ಸಮುದಾಯದ ಬಗ್ಗೆ ಅವರು ಆಡುತ್ತಿದ್ದ ಮಾತುಗಳು ಎಂತಹವರಿಗೂ ಆಘಾತ ತರುವಂತಿರುತ್ತಿದ್ದವು. ಸಮಾಜದಲ್ಲಿ ಸಿದ್ಧಾಂತಗಳ ಹೆಸರಿನಲ್ಲಿ ಬಿರುಕು ಮೂಡಿಸುವುದೇ ರಾಜಕೀಯದ ಪರಮೋಚ್ಚ ಗುರಿ ಎಂಬಂತೆ ಅವರು ಅಬ್ಬರಿಸುತ್ತಿದ್ದರು. ಆದರೆ, ಕಾಲಚಕ್ರ ಉರುಳಿದಂತೆ ಸಂದೀಪ್ ವಾರಿಯರ್ ಎಂಬ ವ್ಯಕ್ತಿಯೊಳಗಿನ ಮನುಷ್ಯ ಜಾಗೃತಗೊಂಡಿದ್ದೇ ಒಂದು ವಿಸ್ಮಯ.

ತಮ್ಮ ಹಳೆಯ ಸಿದ್ಧಾಂತಗಳನ್ನು ಮತ್ತು ಪಕ್ಷದ ಬೆಂಬಲವನ್ನು ಬದಿಗೊತ್ತಿ ಹೊರಬಂದಾಗ ಅವರು ಹೇಳಿದ ಮಾತುಗಳು ಅತ್ಯಂತ ಮಾರ್ಮಿಕವಾಗಿದ್ದವು. ತಾನು ಇದುವರೆಗೆ ಸೃಷ್ಟಿಸಿದ ಬಿರುಕುಗಳನ್ನು ಸರಿಪಡಿಸಿ, ಎಲ್ಲರನ್ನೂ ಪ್ರೀತಿಯಿಂದ ಅಪ್ಪಿಕೊಳ್ಳುವ ಮನುಷ್ಯನಾಗಿ ಬದುಕುತ್ತೇನೆ ಎಂಬ ಅವರ ನಿರ್ಧಾರ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿತ್ತು. ಪಕ್ಷವೊಂದರ ಉನ್ನತ ಸ್ಥಾನದಿಂದ ಹೊರಬಂದು ಎಲ್ಲರನ್ನೂ ಒಳಗೊಳ್ಳುವ ಪ್ರೀತಿಯ ಹಾದಿಯನ್ನು ಆರಿಸಿಕೊಂಡಾಗ, ಅದು ಕೇವಲ ಅಧಿಕಾರಕ್ಕಾಗಿ ಮಾಡಿದ ಬದಲಾವಣೆ ಎಂದು ಹಲವರು ಟೀಕಿಸಿದ್ದರು. ಆದರೆ ಸಂದೀಪ್ ವಾರಿಯರ್ ಅವರ ನಡೆ ಆ ಟೀಕೆಗಳಿಗೆ ಮೌನವಾಗಿಯೇ ಉತ್ತರಿಸುತ್ತಾ ಹೋದವು.

ತ್ರಿಕರಿಪುರ ಕ್ಷೇತ್ರದ ಇತ್ತೀಚಿನ ಫಲಿತಾಂಶ ಈ ಬದಲಾವಣೆಗೆ ಸಿಕ್ಕ ಅತಿದೊಡ್ಡ ಮಾನ್ಯತೆ. ಎಲ್‌ಡಿಎಫ್‌ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ ಸಂದೀಪ್ ವಾರಿಯರ್ ಗೆಲುವು ಸಾಧಿಸಿರುವುದು ಒಂದು ಐತಿಹಾಸಿಕ ಘಟನೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಅವರ ಎದುರಾಳಿಯಾಗಿದ್ದವರು ಮುಸ್ತಫಾ ಎಂಬ ಮುಸ್ಲಿಂ ಅಭ್ಯರ್ಥಿ. ಅಲ್ಲಿನ ಮುಸ್ಲಿಂ ಮತದಾರರು ಮತ್ತು ಮುಸ್ಲಿಂ ಲೀಗ್ ಕೇವಲ ಧರ್ಮವನ್ನು ನೋಡಿ ಮತ ಹಾಕುವುದಾಗಿದ್ದರೆ ಸಂದೀಪ್ ಗೆಲ್ಲುವುದು ಅಸಾಧ್ಯವಿತ್ತು. ಆದರೆ ಅಲ್ಲಿ ಸಂಭವಿಸಿದ್ದೇ ಬೇರೆ. ಜನರು ಒಬ್ಬ ವ್ಯಕ್ತಿಯ ಭೂತಕಾಲದ ದ್ವೇಷಕ್ಕಿಂತ ಹೆಚ್ಚಾಗಿ, ಆತ ಇಂದು ತೋರುತ್ತಿರುವ ಬದಲಾವಣೆ ಮತ್ತು ಪ್ರಾಮಾಣಿಕತೆಯನ್ನು ನಂಬಿದರು.

ಬಿಜೆಪಿಯ ನಾಯಕರು ಪದೇ ಪದೇ ಆರೋಪಿಸುವಂತೆ ಅಲ್ಲಿನ ಸಮುದಾಯ ಕೇವಲ ಮತೀಯ ನೆಲೆಯಲ್ಲಿ ಯೋಚಿಸುತ್ತಿದ್ದರೆ, ಸಂದೀಪ್ ಅವರಂತಹ ಒಬ್ಬ ಮಾಜಿ ಬಿಜೆಪಿ ನಾಯಕನಿಗೆ ಅಲ್ಲಿ ಜಾಗವಿರುತ್ತಿರಲಿಲ್ಲ. ಆದರೆ ತ್ರಿಕರಿಪುರದ ಜನರು ದ್ವೇಷದ ಭಾಷಣಗಳನ್ನು ಮರೆತು, ಮನುಷ್ಯತ್ವದ ಹೆಸರಿನಲ್ಲಿ ನೀಡಿದ ಈ ಗೆಲುವು ಭಾರತದ ರಾಜಕೀಯಕ್ಕೆ ಹೊಸ ಭರವಸೆಯನ್ನು ನೀಡಿದೆ. ಇದು ಕೇವಲ ಸಂದೀಪ್ ವಾರಿಯರ್ ಎಂಬ ವ್ಯಕ್ತಿಯ ಗೆಲುವಲ್ಲ, ಇದು ದ್ವೇಷದ ಗೋಡೆಗಳನ್ನು ಕೆಡವಿ ಪ್ರೀತಿಯ ಸೇತುವೆ ಕಟ್ಟಬಹುದು ಎಂಬುದಕ್ಕೆ ಸಿಕ್ಕ ಸಾಕ್ಷಿ. ಒಬ್ಬ ಮನುಷ್ಯ ತನ್ನ ತಪ್ಪುಗಳನ್ನು ತಿದ್ದಿಕೊಂಡು ಸಮಾಜದ ಮುಖ್ಯವಾಹಿನಿಗೆ ಬಂದಾಗ, ಈ ನಾಡು ಆತನನ್ನು ತೆರೆದ ಮನಸ್ಸಿನಿಂದ ಸ್ವಾಗತಿಸುತ್ತದೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ನಿರೂಪಿಸಿದೆ.

Leave a Reply

Discover more from

Subscribe now to keep reading and get access to the full archive.

Continue reading