
ಮಾದರಿ ಮದುವೆ ಅಭಿಯಾನ ಎಂದು ಪ್ರಸ್ತುತ ದಿನಗಳ ಸಾಮಾನ್ಯ ಜನ ಮೌನವಾಗಿ ನರಳುವ ಅತೀ ದೊಡ್ಡ ಪಿಡುಗಿನ ವಿರುದ್ಧ ಸಮರ ಸಾರಿದ ಎಸ್ ವೈ ಎಸ್ ಕರ್ನಾಟಕ ಇದರ ರಾಜ್ಯಾದ್ಯಂತ ನಡೆದ ಅಭಿಯಾನದ ಸಮಾರೋಪ ಸಮಾರಂಭ ಪುತ್ತೂರಿನಲ್ಲಿ ಬಹಳ ಸಡಗರದಿಂದ ಸಂಪನ್ನಗೊಂಡಿತು. ಜನಜಂಗುಳಿಯೇ ನೆರೆದಿದ್ದ ಬೃಹತ್ ಕಿಲ್ಲೆ ಮೈದಾನ ತುಂಬಿ ತುಳುಕಿದ್ದ ಈ ಸಮ್ಮೇಳನ ನಗರಿಗೆ ಸುನ್ನಿ ಮುಸ್ಲಿಮರ ಪರಮೋನ್ನತ ನಾಯಕ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ ಪಿ ಉಸ್ತಾದರು ಆಗಮಿಸುವ ಹೊತ್ತಿಗೆ ವೇದಿಕೆಯಿಂದ ಮೊಳಗಿದ ಮತ್ತು ಸಹಸ್ರ ಜನರು ಅನುಮೋದಿಸಿ ಹಾಡಿದ ಹಾಡಿನ ಸಾಲುಗಳಿಗೆ ಪದಗಳನ್ನು ಹೊಸೆದದ್ದು ನಮ್ಮ ಸುಳ್ಯದ ಹುಡುಗ.



ಕರ್ನಾಟಕದಾದ್ಯಂತ ಯಾವುದೇ ದೊಡ್ಡ ದೊಡ್ಡ ಸಮಾರಂಭಗಳಿರಲಿ ಅಲ್ಲೆಲ್ಲ ಮೊಳಗುವುದು ಹಾಫಿಳ್ ಶುಹೈಬ್ ಜೀರ್ಮುಕ್ಕಿ ಎಂಬ ಸುಳ್ಯ ತಾಲೂಕಿನ ಎಲಿಮಲೆಯ ಜೀರ್ಮುಕ್ಕಿ ಎಂಬ ಸಣ್ಣ ಊರಿನ ಪುಟ್ಟ ಪ್ರತಿಭೆಯ ಸಾಲುಗಳು.
ಇದೀಗ ಕೆ ಜಿ ಎನ್ ಮಿತ್ತೂರು ಕ್ಯಾಂಪಸ್ ನಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವ ಇವರು ದಿವಂಗತ ಜೀರ್ಮುಕ್ಕಿ ಅಹಮ್ಮದ್ ಕುಂಞಿ ಮತ್ತು ಆಸ್ಯಮ್ಮ ದಂಪತಿಗಳ ಪುತ್ರ. ಪುತ್ತೂರು ಅರಿಕ್ಕಿಲ ಮಾಡಾವು ಇಲ್ಲಿಯ ಮುದರ್ರಿಸ್ ಲೇಖಕ ಜುನೈದ್ ಸಖಾಫಿ ಜೀರ್ಮುಕ್ಕಿ, ಉದ್ಯಮಿ ಪತ್ರಕರ್ತ ಸಾಹುಕಾರ್ ಅಚ್ಚು, ಬೆಂಗಳೂರಿನ ಉದ್ಯಮಿ ಖಲೀಲ್ ಜಿಎಕೆ ಮತ್ತು ಖಾದರ್ ಜಿಎಕೆ ಅವರ ಸಹೋದರ.
ಜ್ಞಾನ ಎನ್ನುವುದು ಗಗನಕುಸುಮ ಎಂಬಂತಿದ್ದ ಲಕ್ಷಲಕ್ಷ ಮಕ್ಕಳಿಗೆ ವಿದ್ಯೆಯ ಬೆಳಕು ತೋರಿದ, ಉನ್ನತ ವಿದ್ಯೆ ದೊರಕಿಸಿಕೊಡುವ ಮೂಲಕ ಸಮುದಾಯದ ಸ್ವಾವಲಂಬನೆಗೆ ಮೌನ ಕ್ರಾಂತಿ ಮಾಡುತ್ತಿರುವ ಉಲಮಾಗಳ ಬಗ್ಗೆ ‘ಮುತ್ತಿನ ನಗರಿಯ ನೆತ್ತಿಯಲರಳಿದ ಸುಜ್ಞಾನದ ಕುಸುಮ’ ಎಂಬಂತೆ ಸಾಗುವ ಸಾಲುಗಳ ಬರೆದ ಯುವಕನ ಸಾಹಿತ್ಯದ ಝಲಕ್ ಈ ಕೆಳಗೆ ಕೊಡಲಾಗಿದೆ.




ಅಕ್ಷರದಲಿ ಅರಿವಿನ ವೃಕ್ಷವ
ಬೆಳೆದಿಹ ಗುರುವೇ
ಅಕ್ಕರೆಯಿಂದ ಜಗವನು ಬೆಳಗಿಹ
ಸುನ್ನಿ ಕ್ರಾಂತಿಯ ಸಾರಥಿಯೇ||2||
ರಹ್ಬನ್ ಸುಲ್ತಾನಲ್ ಉಲಮಾ
ಅಹ್ಲನ್ ಯಾ ಅಬಲ್ ಐತಾಮ್||2||
ಪುತ್ತೂರಿನಲಿ ಖಮರಿನ ಉದಯ
ಅಹ್ಲನ್ ಸಹ್ಲನ್ ಖಮರ ಝಮಾನ್||2||
ಮಾದರಿ ಮದುವೆಯ ಸಂಭ್ರಮಕೆ
ಮಾಧುರ್ಯವ ನೀಡುವ ಸುದಿನ
ಎಸ್ ವೈ ಎಸ್ಸಿನ ಸಂಗಮಕೆ
ಚೆಲುವಿನ ಚಂದ್ರನ ಆಗಮನ
ಮಾನವೀಯತೆಯ ಉದ್ಯಾನದಲಿ
ಪ್ರೀತಿಯ ಗಿಡವನು ನೆಟ್ಟವರು
ಜ್ಞಾನದ ಘಮವನು ಜಗದೊಳು ಪಸರಿಸಿ
ಭೀತಿಯ ಬುಡವನು ಕಡಿದವರು||2||
ಮುತ್ತಿನ ನಗರಿಯ ನೆತ್ತಿಯಲರಳಿತು
ಸುಜ್ಞಾನದ ಕುಸುಮ
ಬತ್ತಿದ ಎದೆಯಲಿ ಅಕ್ಷರ ಬಿತ್ತಿದ
ಸುಲ್ತಾನುಲ್ ಉಲಮಾ||2||
ಚಂದಿರನಂತೆ ಕತ್ತಲ ಬಯಲನು
ಬೆಳಗಿದ ಅರಿವಿನ ದೀವಿಗೆಯೇ
ಸುಂದರ ಬಾಳಿಗೆ ಸುಜ್ಞಾನದ ಹೊಸ
ದಿಶೆಯನು ತೋರಿದ ನಾಯಕರೇ||2||
ಬಡವರ ಬದುಕಿಗೆ ಭರವಸೆಯಾಗಿಹ
ಉಲಮಾಗಳ ದೊರೆಯೇ
ಚಂದಿರನಿಲ್ಲದ ಮುಗಿಲಿಗೆ
ಚಂದ್ರಿಕೆಯಾಗಿರುವ ಪ್ರಭೆಯೇ
ಸುಜ್ಞಾನದ ಪ್ರಭುವೇ

