ಎಲಿಮಲೆ ಬದ್ರಿಯಾ ಜಮಾಅತ್ ಕಮಿಟಿ ವತಿಯಿಂದ ನಡೆಯುವ ಮಾಸಿಕ ಸ್ವಲಾತ್ ಕಾರ್ಯಕ್ರಮದ ವಾರ್ಷಿಕ ಮಹಾಸಂಗಮವು ಎಲಿಮಲೆ ಮಸೀದಿ ವಠಾರದಲ್ಲಿ ಅತ್ಯಂತ ಭಕ್ತಿಭಾವ ಹಾಗೂ ಸಡಗರದಿಂದ ಸಂಪನ್ನಗೊಂಡಿತು. ಸಯ್ಯದ್ ಮುಹ್ಸಿನ್ ಸಯ್ಯದಲವಿ ಕೋಯ ತಂಙಳ್ ಎಲಿಮಲೆ ಅವರ ಪವಿತ್ರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮವು ಆಧ್ಯಾತ್ಮಿಕ ಚೈತನ್ಯದೊಂದಿಗೆ ಜನಮನ ಸೆಳೆಯಿತು.

ತಮ್ಮ ದೈನಂದಿನ ಜೀವನದ ಕಷ್ಟಕಾರ್ಪಣ್ಯಗಳ ನಿವಾರಣೆಗಾಗಿ ಮತ್ತು ನೆಮ್ಮದಿಯ ಪ್ರಾರ್ಥನೆಗಾಗಿ ಎಲಿಮಲೆಗೆ ನಾನಾ ಭಾಗಗಳಿಂದ ಸಯ್ಯದರ ಅಭಿಮಾನಿಗಳು ಹಾಗೂ ಪ್ರೀತಿಪಾತ್ರರು ಆಗಮಿಸಿದ್ದರು. ಸ್ಥಳೀಯ ಜಮಾಅತಿನ ಬಾಂಧವರು ಈ ಭಕ್ತಿಪೂರ್ವಕ ಸಮಾರಂಭದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.



ಕಾರ್ಯಕ್ರಮದ ಆರಂಭದಲ್ಲಿ ಎಲಿಮಲೆ ಮಸೀದಿಯ ಸದರ್ ಉಸ್ತಾದರಾದ ಸಿದ್ದೀಕ್ ಹಿಮಮಿ ನೆರೆದಿದ್ದ ಗಣ್ಯರನ್ನು ಮತ್ತು ಸಾರ್ವಜನಿಕರನ್ನು ಆತ್ಮೀಯವಾಗಿ ಸ್ವಾಗತಿಸಿದರು. ತದನಂತರ ಜೀರ್ಮುಕ್ಕಿಯ ಉಸ್ತಾದರಾದ ಜಲೀಲ್ ಮುಈನಿ ಫೈಝಾನಿ ಉಸ್ತಾದರು ಸಮಾರಂಭವನ್ನು ಉದ್ಘಾಟಿಸಿ ಆಧ್ಯಾತ್ಮಿಕ ಚಿಂತನೆಗಳ ಮಹತ್ವವನ್ನು ವಿವರಿಸಿದರು. ಹಾರಿಸ್ ಸುರೈಜಿ ಉಸ್ತಾದರು ಪ್ರಾಸ್ತಾವಿಕವಾಗಿ ಮಾತನಾಡಿ, ಈ ಮಾಸಿಕ ಸ್ವಲಾತ್ ಸಭೆಯು ಕಳೆದ ಒಂದು ವರ್ಷದಲ್ಲಿ ಸಮಾಜದ ಮೇಲೆ ಬೀರಿದ ಸಕಾರಾತ್ಮಕ ಪ್ರಭಾವದ ಬಗ್ಗೆ ಮಾಹಿತಿ ನೀಡಿದರು. ಹಾಫಿಳ್ ಹಾಶಿರ್ ಸಖಾಫಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಮಾಯನಾಡು ಸಮದ್ ಸಖಾಫಿ ಉಸ್ತಾದರು ಮುಖ್ಯ ಪ್ರಭಾಷಣ ಮಾಡಿದರು. ಅವರು ತಮ್ಮ ಭಾಷಣದಲ್ಲಿ ಪ್ರಸ್ತುತ ಸಮಾಜವು ಧಾರ್ಮಿಕ ಚೌಕಟ್ಟಿನಿಂದ ದೂರ ಸರಿಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಯುವ ಪೀಳಿಗೆ ಹಾಗೂ ಸಮುದಾಯದ ಬಾಂಧವರು ಧರ್ಮದ ನೈಜ ತತ್ವಗಳನ್ನು ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕೆಂದು ಎಚ್ಚರಿಸಿದರು.



ಇದೇ ವೇದಿಕೆಯಲ್ಲಿ ಎಲಿಮಲೆ ಪ್ರೌಢಶಾಲೆಯಲ್ಲಿ ಎಸ್ಸೆಸೆಲ್ಸಿಯಲಿ ಪ್ರಥಮಸ್ಥಾನ ಪಡೆದ ಬುಸ್ತಾನಾ, ಡಿಸ್ಟಿಂಕ್ಷನ್ ನಲ್ಲಿ ಪಾಸಾದ ನೂರಾ ಮತ್ತು ಸನಾ ಇವರಿಗೆ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.
ಎಲಿಮಲೆಯ ಪ್ರಮುಖ ಉಮರಾ ನಾಯಕ ಹಾಗೂ ಸಮಾಜ ಸೇವಕ ಅಬ್ದುಲ್ ಲತೀಫ್ ಹರ್ಲಡ್ಕ ಅವರಿಗೆ ಹಜ್ ಯಾತ್ರೆಗೆ ಗೌರವಪೂರ್ಣ ಬೀಳ್ಕೊಡುಗೆ ನೀಡಲಾಯಿತು. ಈ ವರ್ಷ ಪತ್ನಿ ಜತೆ ಮಕ್ಕಾಗೆ ತೆರಳುತ್ತಿರುವ ಅವರಿಗೆ ಎಲಿಮಲೆ ಬದ್ರಿಯಾ ಜಮಾಅತ್ ಕಮಿಟಿ, ನುಸ್ರತುಲ್ ಇಸ್ಲಾಮ್ ಎಸೋಸಿಯೇಷನ್ ಹಾಗೂ ಇಕ್ರಾಮುಸುನ್ನ ದರ್ಸ್ ಸಮಿತಿಗಳ ವತಿಯಿಂದ ಹಾರ್ದಿಕವಾಗಿ ಸನ್ಮಾನಿಸಲಾಯಿತು. ಅವರ ಪವಿತ್ರ ಹಜ್ ಯಾತ್ರೆಯು ನಿರ್ವಿಘ್ನವಾಗಿ ಸುಸೂತ್ರವಾಗಿ ನೆರವೇರಲಿ ಎಂದು ಸಯ್ಯದ್ ಮುಹ್ಸಿನ್ ತಂಙಳ್ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಇಡೀ ಕಾರ್ಯಕ್ರಮವು ಶಿಸ್ತುಬದ್ಧವಾಗಿ ನೆರವೇರಿದ್ದು, ನೆರೆದಿದ್ದ ಭಕ್ತಾದಿಗಳಿಗೆ ಆಧ್ಯಾತ್ಮಿಕ ತೃಪ್ತಿಯನ್ನು ನೀಡಿತು. ಕಾರ್ಯಕ್ರಮದ ಕೊನೆಯಲ್ಲಿ ಸಮುದಾಯದ ಏಳಿಗೆ ಹಾಗೂ ಸರ್ವರ ಸುಖ ಶಾಂತಿಗಾಗಿ ವಿಶೇಷ ದುವಾ ಮಜ್ಲಿಸ್ ಕೂಡ ನಡೆಯಿತು. ಅನ್ನದಾನದ ಜತೆ ಕಾರ್ಯಕ್ರಮ ಕೊನೆಗೊಂಡಿತು.





