ಅಂಬುಲನ್ಸ್ ಚಾಲಕ ಮಾಲಕರ ಸಂಘದ ವತಿಯಿಂದ ಮಾನವೀಯ ಕಾರ್ಯ: ಅಶಕ್ತರಿಗೆ ವಾಕರ್ ಕೊಡುಗೆ

ಸಮಾಜದ ಕಷ್ಟ ಕಾಲದಲ್ಲಿ ಸದಾ ಸ್ಪಂದಿಸುವ ಸುಳ್ಯ ತಾಲೂಕು ಅಂಬುಲನ್ಸ್ ಚಾಲಕ ಮತ್ತು ಮಾಲಕರ ಸಂಘವು ಮಾನವೀಯ ಕಾರ್ಯವೊಂದನ್ನು ಮಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಸುಳ್ಯದ ಜೂನಿಯರ್ ಕಾಲೇಜು ಬಳಿಯ ನಿವಾಸಿಯಾದ ರಾಜು ಎಂಬವರಿಗೆ ಸಂಘದ ವತಿಯಿಂದ ಉಚಿತವಾಗಿ ವಾಕರ್ ನೀಡುವ ಮೂಲಕ ಅವರ ಚೇತರಿಕೆಗೆ ನೆರವಾಗಿದ್ದಾರೆ.

ಕೆಲವು ದಿನಗಳ ಹಿಂದೆ ರಾಜು ಅವರು ತಮ್ಮ ಮನೆಯಲ್ಲಿ ಆಕಸ್ಮಿಕವಾಗಿ ಬಿದ್ದು ಸೊಂಟಕ್ಕೆ ಗಂಭೀರವಾದ ಗಾಯ ಮಾಡಿಕೊಂಡಿದ್ದರು. ವಿಷಯ ತಿಳಿದ ಸುಳ್ಯ ಅಂಬುಲನ್ಸ್ ಚಾಲಕ ಮತ್ತು ಮಾಲಕರ ಸಂಘದ ಸದಸ್ಯರು, ತಕ್ಷಣವೇ ಸ್ಪಂದಿಸಿ ತಮ್ಮ ಸಂಘದ ಅಂಬುಲನ್ಸ್ ಮೂಲಕ ಅವರನ್ನು ಉಚಿತವಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಬಡ ಕುಟುಂಬದ ಸ್ಥಿತಿಯನ್ನು ಅರಿತ ಸಂಘದವರು ಅಂದು ಸಾರಿಗೆ ವೆಚ್ಚವನ್ನು ಭರಿಸುವ ಮೂಲಕ ಸಮಯ ಪ್ರಜ್ಞೆ ಮೆರೆದಿದ್ದರು.

ಮಂಗಳೂರಿನ ಆಸ್ಪತ್ರೆಯಲ್ಲಿ ರಾಜು ಅವರಿಗೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದು, ಪ್ರಸ್ತುತ ಚಿಕಿತ್ಸೆಯು ಯಶಸ್ವಿಯಾಗಿದೆ. ಚಿಕಿತ್ಸೆಯ ನಂತರ ರೋಗಿಯು ಕ್ರಮೇಣ ನಡೆದಾಡಲು ಪ್ರಯತ್ನಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದರು. ಅವರ ಚೇತರಿಕೆಗೆ ಪೂರಕವಾಗಿ ಮತ್ತು ನಡೆದಾಡಲು ಅನುಕೂಲವಾಗುವಂತೆ ಸಂಘದ ವತಿಯಿಂದ ವಾಕರ್ ಒಂದನ್ನು ಖರೀದಿಸಿ ಅವರಿಗೆ ಉಚಿತವಾಗಿ ಹಸ್ತಾಂತರಿಸಲಾಯಿತು.

ಅಪಘಾತ ಅಥವಾ ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವುದು ಮಾತ್ರವಲ್ಲದೆ, ಚಿಕಿತ್ಸೆಯ ನಂತರವೂ ಅವರ ಕ್ಷೇಮ ವಿಚಾರಿಸಿ ನೆರವಾಗುವ ಅಂಬುಲನ್ಸ್ ಚಾಲಕರ ಈ ಕಾಳಜಿಯು ಎಲ್ಲರಿಗೂ ಮಾದರಿಯಾಗಿದೆ. ಸಂಘದ ಈ ನಿಸ್ವಾರ್ಥ ಸೇವೆಯನ್ನು ಸ್ಥಳೀಯ ನಿವಾಸಿಗಳು ಮತ್ತು ರಾಜು ಅವರ ಕುಟುಂಬಸ್ಥರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading