ಸರಳತೆಯ ಹಾದಿ ಬಿಟ್ಟ ಇಂದಿನ ಮದುವೆಗಳು: ಅನಾಚಾರದ ಕವಲುದಾರಿಯಲ್ಲಿ ಸಮುದಾಯ: ಮಾದರಿ ಮದುವೆ ಎಂಬ ಹೊಸದೊಂದು ಸಂಗ್ರಾಮ

ಮದುವೆ ಎಂಬುದು ಒಂದು ಪವಿತ್ರ ಬಂಧ ಮತ್ತು ಎರಡು ಆತ್ಮಗಳು ಒಂದಾಗುವ ಸುಂದರ ಕ್ಷಣವಾಗಿದೆ. ಇಸ್ಲಾಂ ಧರ್ಮದ ದೃಷ್ಟಿಯಲ್ಲಿ ಅತ್ಯಂತ ಶ್ರೇಷ್ಠವಾದ ಮದುವೆಯೆಂದರೆ ಅದು ಅತ್ಯಂತ ಕಡಿಮೆ ಖರ್ಚಿನಲ್ಲಿ ಮತ್ತು ಸರಳವಾಗಿ ನಡೆಯುವಂತದ್ದು. ಆದರೆ ಇಂದು ನಮ್ಮ ಕಣ್ಣೆದುರೇ ಮದುವೆಗಳು ಹಬ್ಬಕ್ಕಿಂತ ಹೆಚ್ಚಾಗಿ ಒಂದು ಅಹಂಕಾರದ ಪ್ರದರ್ಶನವಾಗಿ ಮಾರ್ಪಡುತ್ತಿವೆ.

ಮಲಬಾರು, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಇಂದು ಮದುವೆಯ ಹೆಸರಿನಲ್ಲಿ ನಡೆಯುತ್ತಿರುವ ಘಟನೆಗಳು ಸಮುದಾಯದ ನೈತಿಕ ಅಧಃಪತನಕ್ಕೆ ಸಾಕ್ಷಿಯಾಗುತ್ತಿವೆಯೇ ಎಂಬ ಆತಂಕ ಮೂಡುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಹಳದಿ ಮದುವೆ, ಗ್ರೂಮ್ ಟು ಬಿ, ಬ್ರೈಡ್ ಟು ಬಿ ಎಂಬ ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಮಿತಿಮೀರಿದೆ. ಗೆಳೆಯರ ಪಾರ್ಟಿ ಮತ್ತು ಫ್ಯಾಮಿಲಿ ಪಾರ್ಟಿಗಳ ಹೆಸರಿನಲ್ಲಿ ನಡೆಯುವ ಮೋಜು ಮಸ್ತಿಗಳಲ್ಲಿ ಧರ್ಮದ ಮೌಲ್ಯಗಳೇ ಮಾಯವಾಗುತ್ತಿವೆ. ಮೊಯಿಲಾಂಜಿ ಎಂಬ ಸುಂದರ ಸಂಪ್ರದಾಯವನ್ನೇ ಇಂದು ಬಣ್ಣದ ಲೋಕದಂತೆ ಮಾರ್ಪಡಿಸಲಾಗಿದೆ.

ಅತ್ಯಂತ ಬೇಸರದ ಸಂಗತಿಯೆಂದರೆ, ಮದುಮಗನನ್ನು ಹಾಸ್ಯದ ವಸ್ತುವಾಗಿಸಿ ವಿವಿಧ ವೇಷಗಳನ್ನು ಹಾಕಿಸಿ ಬೀದಿಗಳಲ್ಲಿ ಸುತ್ತಾಡಿಸುವುದು. ಅಷ್ಟೇ ಅಲ್ಲದೆ, ಇಲ್ಲಿನ ಸಹೋದರ ಧರ್ಮದ ಪೂಜ್ಯ ದೈವ ದೇವರುಗಳ ವೇಷವನ್ನು ಧರಿಸಿ ವಿಕೃತಿ ಮೆರೆಯುವುದು ಕೇವಲ ಅನಾಚಾರವಷ್ಟೇ ಅಲ್ಲ, ಪರಧರ್ಮದ ಭಾವನೆಗಳಿಗೂ ತರುತ್ತಿರುವ ಘೋರ ಧಕ್ಕೆಯಾಗಿದೆ. ಇಂತಹ ವರ್ತನೆಗಳು ಸೌಹಾರ್ದತೆಯ ನೆಲದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ.

ಒಂದು ಕಾಲದಲ್ಲಿ ಮದುವೆಯೆಂದರೆ ಸಂಭ್ರಮವಾಗಿತ್ತು ಆದರೆ ಇಂದು ಮದುವೆ ಎಂದರೆ ಸಾಲದ ಸುಳಿ. ಒಂದು ಮದುವೆ ಮಾಡಬೇಕಾದರೆ ಮನುಷ್ಯ ತನ್ನ ಜೀವಮಾನದ ಇಡೀ ದುಡಿಮೆಯನ್ನು ಸುರಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಮನೆ ಮಾರಿ, ಆಭರಣ ಗಿರವಿ ಇಟ್ಟು, ಪ್ರತಿಷ್ಠೆಗಾಗಿ ಲಕ್ಷಾಂತರ ರೂಪಾಯಿಗಳನ್ನು ಪಟಾಕಿ, ಊಟದ ವೈಭವ ಮತ್ತು ಮೆರವಣಿಗೆಗೆ ವ್ಯರ್ಥ ಮಾಡಲಾಗುತ್ತಿದೆ. ಈ ದುಂದುವೆಚ್ಚದ ಬೆಂಕಿಯಲ್ಲಿ ಎಷ್ಟೋ ಬಡ ಕುಟುಂಬಗಳು ಸುಟ್ಟು ಕರಕಲಾಗುತ್ತಿವೆ.

ಈ ಹಿಂದೆ ಸಮುದಾಯವನ್ನು ಕಾಡುತ್ತಿದ್ದ ವರದಕ್ಷಿಣೆ ಎಂಬ ಪಿಡುಗಿನ ವಿರುದ್ಧ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರು ಕರೆ ನೀಡಿದ್ದರು. ಅಂದು ಸುನ್ನಿ ವಿದ್ಯಾರ್ಥಿ ಸಂಘ ಬೀದಿಗಿಳಿದು ಜಾಗೃತಿ ಮೂಡಿಸಿದ ಫಲವಾಗಿ ವರದಕ್ಷಿಣೆ ಎಂಬ ಮಾರಕ ಪದ್ಧತಿ ಗಣನೀಯವಾಗಿ ಕುಸಿಯಿತು. ಈಗ ಕಾಲ ಬದಲಾಗಿದೆ ಮತ್ತು ರೋಗದ ರೂಪವೂ ಬದಲಾಗಿದೆ. ವರದಕ್ಷಿಣೆಯ ಜಾಗವನ್ನು ಇಂದು ದುಂದುವೆಚ್ಚ ಆಕ್ರಮಿಸಿದೆ. ಇದನ್ನು ಹತ್ತಿಕ್ಕಲು ಈಗ ಸುಲ್ತಾನುಲ್ ಉಲಮಾರು ಸುನ್ನಿ ಯುವಜನ ಸಂಘಕ್ಕೆ ಜವಾಬ್ದಾರಿಯನ್ನು ವಹಿಸಿದ್ದಾರೆ. ಯುವಶಕ್ತಿ ಎಚ್ಚೆತ್ತುಕೊಂಡರೆ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂಬುದನ್ನು ಅರಿತು ಈ ಮಹತ್ತರ ಹೆಜ್ಜೆ ಇಡುತ್ತಿದೆ ಎಂದು ಕರ್ನಾಟಕ ಎಸ್ ವೈ ಎಸ್ ತಿಳಿಸಿದೆ.

ಮದುವೆಯ ಹೆಸರಿನಲ್ಲಿ ನಡೆಯುವ ಅನಾಚಾರಗಳನ್ನು ತಡೆಯಲು ಮತ್ತು ಸರಳ ಮದುವೆಗೆ ಪ್ರೇರಣೆ ನೀಡಲು ಎಸ್‌ವೈಎಸ್ ಕರ್ನಾಟಕ ರಾಜ್ಯಾದ್ಯಂತ ಬೃಹತ್ ಜಾಗೃತಿ ಜಾಥಾವನ್ನು ಹಮ್ಮಿಕೊಂಡಿದೆ. ಈ ಸರಣಿ ಕಾರ್ಯಕ್ರಮಗಳ ಭವ್ಯ ಸಮಾರೋಪ ಸಮಾರಂಭವು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ. ಇದು ಕೇವಲ ಒಂದು ಸಂಘಟನೆಯ ಕಾರ್ಯಕ್ರಮವಲ್ಲ, ಬದಲಾಗಿ ಇದು ಸಮುದಾಯದ ಆತ್ಮಗೌರವವನ್ನು ಉಳಿಸುವ ಹೋರಾಟವಾಗಿದೆ. ನಮ್ಮ ಮಕ್ಕಳಿಗೆ ನಾವು ನೀಡಬೇಕಾದುದು ವೈಭವದ ಮದುವೆಯನ್ನಲ್ಲ, ಬದಲಾಗಿ ಸಂಸ್ಕಾರಯುತವಾದ ಸುಂದರ ಜೀವನವನ್ನು. ಅನಾಚಾರಗಳಿಗೆ ಅಂತ್ಯ ಹಾಡೋಣ ಮತ್ತು ಧರ್ಮದ ಚೌಕಟ್ಟಿನಲ್ಲಿ ಸರಳತೆಯನ್ನು ಅಪ್ಪಿಕೊಳ್ಳೋಣ. ಪುತ್ತೂರಿನ ಕಿಲ್ಲೆ ಮೈದಾನಕ್ಕೆ ಸಾಕ್ಷಿಯಾಗಿ ಬದಲಾವಣೆಯತ್ತ ಹೆಜ್ಜೆ ಹಾಕುವಂತೆ ಎಸ್ ವೈ ಎಸ್ ಸುಳ್ಯ ಝೋನ್ ಸಮಿತಿ ಸಾರ್ವಜನಿಕರಲ್ಲಿ ವಿನಂತಿಸಿದೆ.

Leave a Reply

Discover more from

Subscribe now to keep reading and get access to the full archive.

Continue reading