ಸುಳ್ಯ: ತಾಲೂಕಿನಾದ್ಯಂತ ಮಳೆಯ ಅಬ್ಬರ ಮುಂದುವರಿದಿದ್ದು, ಸುಳ್ಯ ನಗರ ಸೇರಿದಂತೆ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿ ಹಾಗೂ ಪ್ರಮುಖ ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ. ರಸ್ತೆಗಳೆಲ್ಲವೂ ಮಳೆನೀರು ಹರಿಯುವ ತೋಡುಗಳಾಗಿ ಮಾರ್ಪಟ್ಟಿದ್ದು, ಸಾರ್ವಜನಿಕರು ಮತ್ತು ವಾಹನ ಸವಾರರು ಪರದಾಡುವಂತಾಗಿದೆ.ಮಳೆಯ ಆರ್ಭಟಕ್ಕೆ ಸರಿಯಾಗಿ ನೀರು ಹರಿದುಹೋಗಲು ಸೂಕ್ತ ವ್ಯವಸ್ಥೆ ಇಲ್ಲದೆ, ರಸ್ತೆಗಳ ಮೇಲೆಯೇ ಗಂಟೆಗಟ್ಟಲೆ ನೀರು ನಿಲ್ಲುತ್ತಿದೆ. ಪ್ರಮುಖವಾಗಿ ರಾಷ್ಟ್ರೀಯ ಹೆದ್ದಾರಿಯ ಕೆಲವು ಭಾಗಗಳಲ್ಲಿ ಮಳೆನೀರು ನಿಂತುಹೋಗಿ, ವಾಹನಗಳು ಸಂಚರಿಸಲು ಹರಸಾಹಸಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನ ಸವಾರರು ಗುಂಡಿಗಳು ಕಾಣದೆ ಪ್ರಾಣಾಪಾಯದ ಅಂಜಿಕೆಯಲ್ಲಿ ಸಂಚರಿಸುವಂತಾಗಿದೆ. ಪಾದಚಾರಿಗಳಂತೂ ರಸ್ತೆ ದಾಟಲು ಹರಸಾಹಸಪಡುವ ಪರಿಸ್ಥಿತಿ ಇದೆ.ಈ ಎಲ್ಲಾ ಅವಾಂತರಗಳಿಗೆ ಸ್ಥಳೀಯ ಆಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಸಮರ್ಪಕ ಚರಂಡಿ ವ್ಯವಸ್ಥೆಯೇ ನೇರ ಕಾರಣ ಎಂದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ಹಾಗೂ ಟೀಕೆಗಳು ವ್ಯಕ್ತವಾಗಿವೆ. ಚರಂಡಿಗಳು ಹೂಳುತುಂಬಿ ಗಂಟೇಮುಟ್ಟಿಕೊಂಡಿರುವುದು ಮತ್ತು ವೈಜ್ಞಾನಿಕವಾಗಿ ಚರಂಡಿಗಳನ್ನು ನಿರ್ಮಿಸದಿರುವುದು ಅಥವಾ ಇರುವ ಚರಂಡಿಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸದಿರುವುದೇ ಈ ದುಸ್ಥಿತಿಗೆ ಪ್ರಮುಖ ಕಾರಣ ಎಂದು ನಾಗರಿಕರು ಆರೋಪಿಸಿದ್ದಾರೆ. ಮಳೆಗಾಲ ಆರಂಭಕ್ಕೂ ಮುನ್ನ ಕೈಗೊಳ್ಳಬೇಕಿದ್ದ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಚರಂಡಿ ಹೂಳು ತೆಗೆಯುವ ಕಾಮಗಾರಿಗಳು ಕೇವಲ ಕಾಗದಕ್ಕಷ್ಟೇ ಸೀಮಿತವಾಗಿವೆ ಎಂಬ ಬೇಸರ ವ್ಯಕ್ತವಾಗಿದೆ.ಮಳೆಗಾಲ ಬಂತೆಂದರೆ ಪ್ರತಿವರ್ಷವೂ ಸುಳ್ಯದ ರಸ್ತೆಗಳು ಜಲಾವೃತಗೊಂಡು ಸಾರ್ವಜನಿಕರು ತೊಂದರೆ ಅನುಭವಿಸುವುದು ಮಾಮೂಲಿಯಾಗಿದೆ. ಆದರೆ, ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೇವಲ ತಾತ್ಕಾಲಿಕ ರಿಪೇರಿಗಳಿಗೆ ಸೀಮಿತವಾಗದೆ, ಕೂಡಲೇ ಎಚ್ಚೆತ್ತುಕೊಂಡು ಸಮರ್ಪಕ ಚರಂಡಿ ವ್ಯವಸ್ಥೆ ಹಾಗೂ ರಸ್ತೆ ಅಭಿವೃದ್ಧಿಗೆ ವಿಶೇಷ ಗಮನ ಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.








