ಸುಳ್ಯ ಮತ್ತು ಸುಬ್ರಹ್ಮಣ್ಯ ಪರಿಸರದಲ್ಲಿ ಹಲವು ವರ್ಷಗಳ ಕಾಲ ಆಂಬುಲನ್ಸ್ ಚಾಲಕರಾಗಿ ಸಾರ್ವಜನಿಕ ಸೇವೆಯಲ್ಲಿ ಗುರುತಿಸಿಕೊಂಡಿದ್ದ ಮಾಧವ (ಸುಮಾರು 50 ವರ್ಷ) ಅವರು ಬುಧವಾರ ಬೆಳಿಗ್ಗೆ ಹತ್ತರ ಆಸುಪಾಸಿಗೆ ಹೃದಯಾಘಾತದಿಂದ ನಿಧನರಾದರು.
ಕಳೆದ ಹಲವಾರು ವರ್ಷಗಳಿಂದ ಸುಳ್ಯದಲ್ಲಿ ಸರಕಾರೀ ಆಂಬುಲನ್ಸ್ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಆಸ್ಪತ್ರೆಗೆ ತಲುಪಿಸುವ ಮೂಲಕ ಸಾವಿರಾರು ಜೀವಗಳ ಉಳಿವಿಗೆ ಶ್ರಮಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಸುಬ್ರಹ್ಮಣ್ಯ ಪರಿಸರದಲ್ಲಿ ಅವರು ತಮ್ಮ ಕಾಯಕವನ್ನು ಮುಂದುವರಿಸಿದ್ದರು.








ಎಂದಿನಂತೆ ಇಂದು ಬೆಳಿಗ್ಗೆ ಅವರು ತೋಟದ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಹಠಾತ್ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಲಾಯಿತಾದರೂ, ಆಸ್ಪತ್ರೆಗೆ ತಲುಪುವ ದಾರಿ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಮಾಧವಣ್ಣ ಎಂದೇ ಚಿರಪರಿಚಿತರಾಗಿದ್ದ ಇವರು ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದರು. ಕಷ್ಟದ ಸಮಯದಲ್ಲಿ ಜನರ ನೆರವಿಗೆ ಧಾವಿಸುತ್ತಿದ್ದ ಅವರ ಗುಣವನ್ನು ಸ್ಥಳೀಯರು ಸ್ಮರಿಸಿದ್ದಾರೆ. ಅವರ ನಿಧನಕ್ಕೆ ಆಂಬುಲನ್ಸ್ ಚಾಲಕ ಮತ್ತು ಮಾಲಕರ ಸಂಘವು ತೀವ್ರ ಸಂತಾಪ ವ್ಯಕ್ತಪಡಿಸಿದೆ. ಸಂಘದ ಪರವಾಗಿ ಪದಾಧಿಕಾರಿಗಳು ಮಾತನಾಡಿ, ಒಬ್ಬ ದಕ್ಷ ಮತ್ತು ಅನುಭವೀ ಚಾಲಕನನ್ನು ನಾವು ಕಳೆದುಕೊಂಡಿದ್ದೇವೆ ಎಂದು ಕಂಬನಿ ಮಿಡಿದಿದ್ದಾರೆ. ಮೃತರು ಕುಟುಂಬಸ್ಥರು ಹಾಗೂ ಅಪಾರ ಸಂಖ್ಯೆಯ ಹಿತೈಷಿಗಳನ್ನು ಅಗಲಿದ್ದಾರೆ.

