ಆ ಬೀದಿನಾಯಿ ಉಳಿಸಿ ಹೋದದ್ದು ಮೂವತ್ತು ಮುಗ್ಧ ಕಂದಮ್ಮಗಳನ್ನು..

ನಮ್ಮ ಸಮಾಜದಲ್ಲಿ ಬೀದಿ ನಾಯಿಗಳೆಂದರೆ ಒಂದು ರೀತಿಯ ತಾತ್ಸಾರ ಭಾವನೆ ಎದ್ದುಕಾಣುತ್ತದೆ. ರಸ್ತೆಯಲ್ಲಿ ಹೋಗುವಾಗ ಅವುಗಳನ್ನು ಕಂಡರೆ ಕಲ್ಲು ಹೊಡೆಯುವುದು, ಅಸಹ್ಯ ಪಡುವುದು ಅಥವಾ ಅವು ಕೇವಲ ಉಪಟಳ ನೀಡುವ ಪ್ರಾಣಿಗಳೆಂದು ನಿರ್ಲಕ್ಷಿಸುವುದು ಸಾಮಾನ್ಯವಾಗಿದೆ. ಆದರೆ ಕಾಳಿ ಎಂಬ ಈ ಸಾಮಾನ್ಯ ಬೀದಿ ನಾಯಿ ತೋರಿಸಿದ ಅಪ್ರತಿಮ ಸಾಹಸವು ಪ್ರೀತಿ ಮತ್ತು ನಿಷ್ಠೆಗೆ ಯಾವುದೇ ಬೆಲೆ ಕಟ್ಟಲಾಗದು ಎಂಬುದನ್ನು ಸಾಬೀತುಪಡಿಸಿದೆ.

ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಧೀರಾಕುಲ ಎಂಬ ಪುಟ್ಟ ಹಳ್ಳಿಯಲ್ಲಿ ನಡೆದ ಈ ಘಟನೆ ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಅವಿನಾಭಾವ ಸಂಬಂಧಕ್ಕೆ ಹಿಡಿದ ಕನ್ನಡಿಯಾಗಿದೆ. ಆ ಹಳ್ಳಿಯ ಶ್ರೀ ಜಗನ್ನಾಥ ಶಿಶು ವಿದ್ಯಾ ಮಂದಿರದ ಆವರಣದಲ್ಲಿ ಸುಮಾರು ಮೂವತ್ತು ಪುಟ್ಟ ಮಕ್ಕಳು ಕುಳಿತು ಪಾಠ ಕೇಳುತ್ತಿದ್ದಾಗ ಯಮನಂತೆ ಬಂದ ನಾಗರ ಹಾವಿನಿಂದ ಮಕ್ಕಳನ್ನು ರಕ್ಷಿಸಲು ಕಾಳಿ ಎಂಬ ಶ್ವಾನ ತನ್ನ ಪ್ರಾಣವನ್ನೇ ಅರ್ಪಿಸಿದೆ.

ಮಕ್ಕಳತ್ತ ಹಾವು ನುಗ್ಗಿ ಬರುತ್ತಿರುವುದನ್ನು ಕಂಡ ತಕ್ಷಣ ಕಾಳಿ ಕ್ಷಣಾರ್ಧವೂ ಯೋಚಿಸದೆ ಅದರ ಮೇಲೆರಗಿತು. ಇದು ಕೇವಲ ಒಂದು ಪ್ರಾಣಿ ಮತ್ತು ಹಾವಿನ ನಡುವಿನ ಕಾಳಗವಾಗಿರಲಿಲ್ಲ, ಬದಲಾಗಿ ಮೂವತ್ತು ಮುಗ್ಧ ಜೀವಗಳನ್ನು ಉಳಿಸಲು ಕಾಳಿ ನಡೆಸಿದ ಹೋರಾಟವಾಗಿತ್ತು. ಹಾವಿನ ವಿಷಕಾರಿ ಕಡಿತಕ್ಕೆ ಒಳಗಾದರೂ ಛಲ ಬಿಡದ ಆ ಶ್ವಾನ ಹಾವನ್ನು ಕೊಂದ ನಂತರವೇ ಮಕಾಡೆ ಮಲಗಿತು. ಯಾರೋ ಹಾಕಿದ ಅಲ್ಪ ಸ್ವಲ್ಪ ಅನ್ನದ ಋಣ ತೀರಿಸಲು ಅದು ತನ್ನ ಇಡೀ ಜೀವವನ್ನೇ ಬಲಿ ಕೊಟ್ಟಿತು.

ಕಾಳಿಯ ಈ ಮಹಾತ್ಯಾಗವನ್ನು ಕಂಡು ಗ್ರಾಮಸ್ಥರು ಕಂಬನಿ ಮಿಡಿದರು. ತಾವು ದಿನನಿತ್ಯ ನಿರ್ಲಕ್ಷ್ಯದಿಂದ ನೋಡುತ್ತಿದ್ದ ಜೀವ ಇಂದು ತಮ್ಮ ಮನೆಗಳ ದೀಪಗಳು ಆರದಂತೆ ಕಾಪಾಡಿದೆ ಎಂಬ ಸತ್ಯ ಅರಿವಾದಾಗ ಅವರಲ್ಲಿ ಪಶ್ಚಾತ್ತಾಪದ ಭಾವನೆ ಮೂಡಿತ್ತು. ಗ್ರಾಮಸ್ಥರೆಲ್ಲರೂ ಸೇರಿ ಆ ವೀರ ಶ್ವಾನದ ಮೃತದೇಹಕ್ಕೆ ಹೂವಿನ ಹಾರ ಹಾಕಿ, ಬಿಳಿ ಬಟ್ಟೆ ಹೊದಿಸಿ, ಸಕಲ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಿದರು.

ಒಂದು ಮೂಕ ಪ್ರಾಣಿ ತೋರಿದ ಈ ನಿಷ್ಕಲ್ಮಶ ಪ್ರೇಮವು ನಮಗೆ ದೊಡ್ಡ ಪಾಠವನ್ನು ಕಲಿಸಿದೆ. ಪ್ರೀತಿ ಮತ್ತು ಕರುಣೆ ತೋರಿದರೆ ಪ್ರಾಣವನ್ನೇ ನೀಡಬಲ್ಲ ಶಕ್ತಿ ಈ ಪ್ರಾಣಿಗಳಲ್ಲಿದೆ. ಕೆಲವೊಂದು ಬೀದಿನಾಯಿಗಳು ಮಕ್ಕಳನ್ನು ಹಿರಿಯರನ್ನು ಅಕ್ರಮಿಸುವ ಮೂಲಕ ಕ್ರೌರ್ಯ ತೋರಿದರೂ ಎಲ್ಲಾ ಬೀದಿ ನಾಯಿಗಳನ್ನು ಕೀಳಾಗಿ ಕಾಣುವ ಮೊದಲು ಅವುಗಳಲ್ಲೂ ಒಂದು ಜೀವವಿದೆ ಮತ್ತು ಅವು ನಮಗಿಂತ ಮಿಗಿಲಾದ ನಿಷ್ಠೆ ಹೊಂದಿರಬಲ್ಲವು ಎಂಬ ಸತ್ಯವನ್ನು ನಾವೆಲ್ಲರೂ ಅರಿತುಕೊಳ್ಳಬೇಕಿದೆ. ಕಾಳಿಯ ತ್ಯಾಗ ಆ ಗ್ರಾಮದ ಜನರ ಮನಸ್ಸಿನಲ್ಲಿ ಎಂದಿಗೂ ಅಚ್ಚಳಿಯದೆ ಉಳಿಯಲಿದೆ.

ಸಾಕಾರ ನ್ಯೂಸ್

Leave a Reply

Discover more from

Subscribe now to keep reading and get access to the full archive.

Continue reading