ಈ ಒಂದು ಸುದ್ದಿ ಕೇಳುಗರ ಕಣ್ಣಾಲಿಗಳನ್ನು ಒದ್ದೆ ಮಾಡದೇ ಇರಲಾರದು. ಪ್ರತಿದಿನದಂತೆ ನಿನ್ನೆಯೂ ಮುಂಜಾನೆ ಸೂರ್ಯ ಮೂಡುತ್ತಿದ್ದಾಗ ಆ ತಂದೆ ತನ್ನ ಮಗಳ ಕೈಹಿಡಿದು ಹೆಜ್ಜೆ ಹಾಕಿದ್ದರು. ಎಂದಿನಂತೆ ಮಗಳ ಶಾಲೆಯ ಬ್ಯಾಗು, ಟಿಫಿನ್ ಬಾಕ್ಸ್ ಹಿಡಿದುಕೊಂಡು ಮನೆ ಪಕ್ಕದ ಬಸ್ ನಿಲ್ದಾಣದ ಕಡೆಗೆ ಸಾಗಿದ್ದರು. ಆದರೆ, ವಿಧಿಯ ಆಟ ಯಾರಿಗೂ ತಿಳಿಯದಂತಿತ್ತು.
ಇನ್ನು ಮುಂದೆ ಕೇರಳದ ಕೊಲ್ಲಮ್ ನ ಆ ಬಸ್ ನಿಲ್ದಾಣಕ್ಕೆ ಅಜಯನ್ ತನ್ನ ಮಗಳ ಬ್ಯಾಗ್ ಹಿಡಿದುಕೊಂಡು ಶಾಲೆ ಬಸ್ ಹತ್ತಿಸಲು ಬರುವುದಿಲ್ಲ ಎಂಬ ಕಹಿ ಸತ್ಯವನ್ನು ಜೀರ್ಣಿಸಿಕೊಳ್ಳಲು ಸ್ವತಃ ಅವನಿ ಬಿಡಿ ಯಾರಿಂದಲೂ ಸಾಧ್ಯವಾಗುತ್ತಿಲ್ಲ.

ಶಾಲೆ ವ್ಯಾನ್ ಬರುವವರೆಗೆ ಮಗಳು ಆವನಿಯನ್ನು ಬಸ್ ನಿಲ್ದಾಣದಲ್ಲಿ ಸುರಕ್ಷಿತವಾಗಿ ಕೂರಿಸಿ, ಅಜಯನ್ ಕಾಯುತ್ತಾ ನಿಂತಿದ್ದರು. ಮಗಳು ಶಾಲೆಯ ಯೋಚನೆಯಲ್ಲಿದ್ದರೆ, ತಂದೆ ಮಗಳ ಸುರಕ್ಷಿತ ಭವಿಷ್ಯದ ಕನಸು ಕಾಣುತ್ತಿದ್ದರು. ಆದರೆ ಅದೇ ಕ್ಷಣದಲ್ಲಿ ಅಮಿತ ವೇಗದಲ್ಲಿ ಬಂದ ಟಿಪ್ಪರ್ ಲಾರಿಯೊಂದು ಆ ಬಸ್ ನಿಲ್ದಾಣದ ಬಳಿಯೇ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಯಿತು. ಲಾರಿಯಲ್ಲಿದ್ದ ಭಾರೀ ಪ್ರಮಾಣದ ಲೋಡ್ ನಡುವೆ ಸಿಲುಕಿದ ಅಜಯನ್, ಅಲ್ಲಿಂದ ಹೊರಬರಲಾರದೆ ಜೀವಕ್ಕಾಗಿ ಒದ್ದಾಡಿದರು.

ಅಲ್ಲಿ ಸೇರಿದ್ದ ಜನರ ಎದೆಯನ್ನು ಸೀಳಿದ್ದು ಆ ಪುಟ್ಟ ಮಗಳ ಆಕ್ರಂದನ. ಕಣ್ಣೆದುರೇ ಉಸಿರಾಡಲು ಒದ್ದಾಡುತ್ತಿದ್ದ ತನ್ನ ತಂದೆಯನ್ನು ರಕ್ಷಿಸುವಂತೆ, ಆ ಪುಟ್ಟ ಕಂದಮ್ಮ ಅಲ್ಲಿ ಸೇರಿದ್ದ ಜನರ ಬಳಿ ಕೈಮುಗಿದು ಬೇಡುತ್ತಿದ್ದಳು. “ನನ್ನ ಪಪ್ಪನನ್ನು ಬದುಕಿಸಿ” ಎಂದು ಆಕೆ ಕಣ್ಣೀರಿಡುತ್ತಾ ಯೋಚನೆಗೂ ಸಿಗದ ಆಘಾತದಲ್ಲಿದ್ದ ದೃಶ್ಯ ನೆರೆದಿದ್ದವರ ಕರುಳು ಹಿಂಡುವಂತಿತ್ತು. ಆದರೆ ಆ ಪುಟ್ಟ ಕೈಗಳ ಪ್ರಾರ್ಥನೆ, ನೆರೆದವರ ಪ್ರಯತ್ನ ಯಾವುದೂ ಆ ತಂದೆಯ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ.

ಪ್ರತಿದಿನ ಮಗಳನ್ನು ನಗುತ್ತಾ ಶಾಲೆಗೆ ಕಳುಹಿಸುತ್ತಿದ್ದ ತಂದೆ, ಇಂದು ಆಕೆಯನ್ನು ಶಾಶ್ವತವಾಗಿ ತಬ್ಬಲಿಯನ್ನಾಗಿ ಮಾಡಿ ಹೋಗಿದ್ದಾರೆ. ರಸ್ತೆ ಬದಿಯಲ್ಲಿ ಕಾಯುತ್ತಿದ್ದ ನಿರಪರಾಧಿ ಜೀವವೊಂದು ಹೀಗೆ ಮಣ್ಣಾಗಿ ಹೋದದ್ದು, ಆ ಮಗಳ ಕಣ್ಣೆದುರೇ ಅವಳ ಸರ್ವಸ್ವವೂ ಇಲ್ಲದಾದದ್ದು ಇಡೀ ನಾಡನ್ನೇ ಮೌನಕ್ಕೆ ತಳ್ಳಿದೆ. ತಂದೆಯ ಪ್ರೀತಿಯ ನೆರಳಿನಲ್ಲಿ ಬೆಳೆಯಬೇಕಿದ್ದ ಆ ಪುಟ್ಟ ಜೀವಕ್ಕೆ ಕಾಲ ತಂದಿಟ್ಟ ಈ ನೋವು ಎಂದಿಗೂ ಮಾಸದ ಒಂದು ಕಪ್ಪು ಚುಕ್ಕೆಯಾಗಿ ಉಳಿದುಬಿಟ್ಟಿದೆ.





