ಕರ್ನಾಟಕ ಸರ್ಕಾರವು ರಾಜ್ಯದ ಸರ್ಕಾರಿ ಶಾಲೆ ಮತ್ತು ಕಾಲೇಜುಗಳ ಅಭಿವೃದ್ಧಿಗಾಗಿ ‘ಶಿಕ್ಷಣ ಗ್ಯಾರಂಟಿ’ ಎಂಬ ವಿಶೇಷ ಯೋಜನೆಯನ್ನು ಜಾರಿಗೆ ತಂದಿದೆ. ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದ ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ದೇಶದಲ್ಲೇ ಅತ್ಯುತ್ತಮವಾಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.
ಈ ಯೋಜನೆಯಡಿ ಸರ್ಕಾರವು ಪ್ರಮುಖವಾಗಿ ಎಂಟು ಭರವಸೆಗಳನ್ನು ನೀಡಿದೆ. ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯನ್ನು ನೀಗಿಸುವುದು, ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳೊಂದಿಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಿಕ್ಷಣವನ್ನು ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ (ಕೆ.ಎಸ್.ಆರ್.ಟಿ.ಸಿ ಬಸ್ ಸೌಲಭ್ಯ) ಹಾಗೂ ಡಿಜಿಟಲ್ ಶಿಕ್ಷಣದ ಭಾಗವಾಗಿ ಕಂಪ್ಯೂಟರ್ ಮತ್ತು ಎ.ಐ ತರಗತಿಗಳನ್ನು ಪರಿಚಯಿಸಲು ಸರ್ಕಾರ ನಿರ್ಧರಿಸಿದೆ.

ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಕಲೆ, ಸಂಗೀತ ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗೆ ಒತ್ತು ನೀಡಲಾಗುತ್ತಿದೆ. ಶಿಕ್ಷಕರಿಗೆ ಬೋಧಕೇತರ ಕೆಲಸಗಳ ಹೊರೆ ಕಡಿಮೆ ಮಾಡಿ, ಬೋಧನೆಗೆ ಹೆಚ್ಚಿನ ಸಮಯ ಸಿಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಮೌಲ್ಯಮಾಪನ ಪದ್ಧತಿಯಲ್ಲಿ ಸುಧಾರಣೆ ತರಲು ವಾರ್ಷಿಕ ಎರಡು ಬಾರಿ ಪರೀಕ್ಷೆಗಳನ್ನು ನಡೆಸುವ ವ್ಯವಸ್ಥೆ ಜಾರಿಗೆ ಬರಲಿದೆ. ಅಲ್ಲದೆ, ಶಾಲಾ ಮುಖ್ಯಸ್ಥರಿಗೆ ಮತ್ತು ಶಿಕ್ಷಕರಿಗೆ ವೃತ್ತಿಪರ ತರಬೇತಿಯನ್ನು ನೀಡಲು ಯೋಜನೆ ರೂಪಿಸಲಾಗಿದೆ.





ಕಳೆದ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಶಾಲೆಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 94.10 ರಷ್ಟು ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 86.48 ರಷ್ಟು ಫಲಿತಾಂಶ ದಾಖಲಿಸಿರುವುದು ಈ ಬದಲಾವಣೆಯ ಹಾದಿಯಲ್ಲಿನ ಮಹತ್ವದ ಮೈಲಿಗಲ್ಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಸುಮಾರು 50 ಲಕ್ಷಕ್ಕೂ ಹೆಚ್ಚು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಬದಲಾವಣೆಗಳು ಈಗಾಗಲೇ ಆರಂಭವಾಗಿದ್ದು, ಮುಂದಿನ ಕೆಲವೇ ವರ್ಷಗಳಲ್ಲಿ ಸಂಪೂರ್ಣ ಫಲಿತಾಂಶ ನಿರೀಕ್ಷಿಸಲಾಗಿದೆ.
ಸಾಕಾರ ನ್ಯೂಸ್





