
ದರ್ಗಾ ಪ್ರವಾಸಕ್ಕೆಂದು ಕೊಡಗು ಜಿಲ್ಲೆಯ ಎಮ್ಮೆಮಾಡು ಗ್ರಾಮಕ್ಕೆ ಬಂದಿದ್ದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಾವಿನಕಟ್ಟೆ ಕುರ್ಕಂಜೆ ನಿವಾಸಿ ಹಸೈನಾರ್ ಸಾಹೇಬ್ (65) ಅವರು ಕಾವೇರಿ ನದಿ ದಡದಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತ ಹಸೈನಾರ್ ಅವರು ಏಪ್ರಿಲ್ 13ರಂದು ಕುಂದಾಪುರದಿಂದ ತಮ್ಮ ಸಂಬಂಧಿಕರೊಂದಿಗೆ ದರ್ಗಾ ಪ್ರವಾಸಕ್ಕೆ ಹೊರಟಿದ್ದರು. ಏಪ್ರಿಲ್ 15ರಂದು ರಾತ್ರಿ ಸುಮಾರು 11:30ರ ವೇಳೆಗೆ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಎಮ್ಮೆಮಾಡು ಗ್ರಾಮಕ್ಕೆ ತಲುಪಿದ್ದರು. ಅಲ್ಲಿ ತಂಗಲು ಕೊಠಡಿ ಲಭ್ಯವಿಲ್ಲದ ಕಾರಣ, ಅವರು ಮಸೀದಿಯ ಆವರಣದಲ್ಲೇ ಮಲಗಿದ್ದರು.






ರಾತ್ರಿ ಮಲಗಿದ್ದ ಹಸೈನಾರ್ ಅವರು ಇದ್ದಕ್ಕಿದ್ದಂತೆ ಕಾಣೆಯಾದ ಕಾರಣ ಗಾಬರಿಗೊಂಡ ಸಂಬಂಧಿಕರು ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ನಂತರ ಮಸೀದಿಯ ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲಿಸಿದಾಗ, ಹಸೈನಾರ್ ಅವರು ಮಸೀದಿಯ ಮುಖ್ಯ ದ್ವಾರದ ಮೂಲಕ ಹೊರಗೆ ನಡೆದು ಹೋಗುತ್ತಿರುವುದು ಕಂಡುಬಂದಿದೆ. ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದ ಇವರಿಗಾಗಿ ಗ್ರಾಮಸ್ಥರು ಮತ್ತು ಸಂಬಂಧಿಕರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಕ ಶೋಧ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈ ಸಂಬಂಧ ಏಪ್ರಿಲ್ 16ರಂದು ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ದಾಖಲಿಸಲಾಗಿತ್ತು.
ಪೊಲೀಸರು ಮತ್ತು ಸ್ಥಳೀಯರು ಸತತವಾಗಿ ಹುಡುಕಾಟ ನಡೆಸುತ್ತಿದ್ದಾಗ, ಏಪ್ರಿಲ್ 19ರಂದು ಎಮ್ಮೆಮಾಡು ಗ್ರಾಮದ ಕಾವೇರಿ ನದಿ ದಡದ ಪೊದೆಯೊಂದರಲ್ಲಿ ಹಸೈನಾರ್ ಅವರ ಶವ ಪತ್ತೆಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಾವಿನ ನಿಖರ ಕಾರಣಕ್ಕಾಗಿ ತನಿಖೆ ಮುಂದುವರಿಸಿದ್ದಾರೆ.

