ಲೋನ್ ಆಪ್ ಗಳ ಕರಾಳಮುಖ: ಬಲಿಯಾಗದಿರಿ

ಕೇರಳದ ಕಣ್ಣೂರಿನಲ್ಲಿ ನಡೆದ ದಂತವೈದ್ಯಕೀಯ ವಿದ್ಯಾರ್ಥಿ ನಿತಿನ್ ರಾಜ್ ಅವರ ಆತ್ಮಹತ್ಯೆ ಪ್ರಕರಣವು ಆನ್‌ಲೈನ್ ಲೋನ್ ಆಪ್‌ಗಳ ಕರಾಳ ಮುಖವನ್ನು ಮತ್ತೊಮ್ಮೆ ಅನಾವರಣಗೊಳಿಸಿದೆ.

ಕಣ್ಣೂರಿನ ಡೆಂಟಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ನಿತಿನ್ ರಾಜ್ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಆರಂಭದಲ್ಲಿ ಇದು ಮಾನಸಿಕ ಒತ್ತಡದ ಕಾರಣ ಎಂದು ಭಾವಿಸಲಾಗಿತ್ತು, ಆದರೆ ನಂತರದ ತನಿಖೆಯಲ್ಲಿ ಅವರು ಆನ್‌ಲೈನ್ ಲೋನ್ ಆಪ್‌ಗಳ ವಂಚನೆಗೆ ಬಲಿಯಾಗಿರುವುದು ಬೆಳಕಿಗೆ ಬಂದಿದೆ.

ನಿತಿನ್ ಕೆಲವು ಮೊಬೈಲ್ ಲೋನ್ ಆಪ್‌ಗಳ ಮೂಲಕ ಸಣ್ಣ ಮೊತ್ತದ ಸಾಲ ಪಡೆದಿದ್ದರು ಎನ್ನಲಾಗಿದೆ. ಸಾಲದ ಹಣವನ್ನು ಮರುಪಾವತಿಸಿದ ನಂತರವೂ, ವಂಚಕರು ಅವರ ಫೋನ್‌ನಲ್ಲಿದ್ದ ಸಂಪರ್ಕ ಸಂಖ್ಯೆಗಳು ಮತ್ತು ವೈಯಕ್ತಿಕ ಫೋಟೋಗಳನ್ನು ಕದ್ದು, ಅವುಗಳನ್ನು ಮಾರ್ಫಿಂಗ್ ಮಾಡಿ ಬೆದರಿಕೆ ಹಾಕಲು ಶುರು ಮಾಡಿದ್ದರು.

ಸಾಲ ನೀಡುವ ಹೆಸರಿನಲ್ಲಿ ಗ್ರಾಹಕರ ಗ್ಯಾಲರಿ ಮತ್ತು ಕಾಂಟ್ಯಾಕ್ಟ್ ಲಿಸ್ಟ್‌ಗೆ ಪ್ರವೇಶ ಪಡೆಯುವ ಈ ಆಪ್‌ಗಳು, ನಂತರ ಸಾಲಗಾರನ ಅಶ್ಲೀಲವಾಗಿ ಮಾರ್ಪಡಿಸಿದ ಫೋಟೋಗಳನ್ನು ಅವರ ಸ್ನೇಹಿತರು ಮತ್ತು ಸಂಬಂಧಿಕರಿಗೆ ಕಳುಹಿಸುವುದಾಗಿ ಬೆದರಿಸಿ ಹಣ ವಸೂಲಿ ಮಾಡುತ್ತವೆ.

ಈ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಅನಧಿಕೃತ ಲೋನ್ ಆಪ್‌ಗಳನ್ನು ಡೌನ್‌ಲೋಡ್ ಮಾಡಬಾರದು ಮತ್ತು ಇಂತಹ ಬೆದರಿಕೆಗಳಿಗೆ ಮಣಿಯದೆ ತಕ್ಷಣ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಬೇಕು ಎಂದು ತಿಳಿಸಿದ್ದಾರೆ.

ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಸ್ಟೋರ್‌ನಲ್ಲಿ ಇಲ್ಲದ ಅಥವಾ ಅಪರಿಚಿತ ಮೂಲದ ಲೋನ್ ಆಪ್‌ಗಳನ್ನು ಬಳಸಬೇಡಿ.ಆಪ್‌ಗಳಿಗೆ ನಿಮ್ಮ ಗ್ಯಾಲರಿ ಮತ್ತು ಕಾಂಟ್ಯಾಕ್ಟ್ ಲಿಸ್ಟ್ ಬಳಸಲು ಅನುಮತಿ ನೀಡುವ ಮುನ್ನ ಎಚ್ಚರವಿರಲಿ.
ಒಂದು ವೇಳೆ ವಂಚನೆಗೆ ಒಳಗಾದರೆ ಭಯಪಡದೆ ಅಧಿಕೃತ ಸೈಬರ್ ಸಂಖ್ಯೆಗೆ ಕರೆ ಮಾಡಿ ಅಥವಾ ಸೈಬರ್ ಕ್ರೈಂ ಪೋರ್ಟಲ್‌ನಲ್ಲಿ ದೂರು ದಾಖಲಿಸಿ ಎಂದು ಸೈಬರ್ ಕ್ರೈಮ್ ಅಧಿಕಾರಿಗಳು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading