ಬೆಂಗಳೂರು: 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯ ಫಲಿತಾಂಶ ಪ್ರಕಟಣೆಯಲ್ಲಿ ಸರ್ಕಾರ ಜಾರಿಗೆ ತಂದಿದ್ದ ‘ಗ್ರೇಡ್’ ಪದ್ಧತಿಗೆ ಹೈಕೋರ್ಟ್ ತಡೆ ನೀಡಿದೆ. ಗ್ರೇಡ್‌ಗಳ ಬದಲಿಗೆ ವಿದ್ಯಾರ್ಥಿಗಳಿಗೆ ಅವರು ಪಡೆದ ನಿಖರವಾದ ‘ಅಂಕಗಳನ್ನು’ ನೀಡುವಂತೆ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರಿದ್ದ ಏಕಸದಸ್ಯ ಪೀಠವು ರಾಜ್ಯ ಸರ್ಕಾರಕ್ಕೆ ಮಹತ್ವದ ಆದೇಶ ನೀಡಿದೆ.



ರಾಜ್ಯ ಸರ್ಕಾರವು ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಒಂದು ವಿಷಯದಲ್ಲಿ ಅಂದರೆ ತೃತೀಯ ಬಾಷೆಯಲ್ಲಿ ಅಂಕಗಳ ಬದಲು ಗ್ರೇಡ್ ನೀಡಲು ನಿರ್ಧರಿಸಿತ್ತು. ಆದರೆ, ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಚಿಕ್ಕಮಗಳೂರಿನ ಸಹನಾ ಸೇರಿದಂತೆ ಒಟ್ಟು ಮೂವರು ವಿದ್ಯಾರ್ಥಿಗಳು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಕೇವಲ ಗ್ರೇಡ್ ನೀಡುವುದರಿಂದ ವಿದ್ಯಾರ್ಥಿಗಳ ನಡುವಿನ ನೈಜ ಪ್ರತಿಭೆ ಮತ್ತು ಸ್ಪರ್ಧಾತ್ಮಕತೆಯನ್ನು ಗುರುತಿಸಲು ಕಷ್ಟವಾಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.
ಅರ್ಜಿದಾರರ ವಾದವನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳು, ವಿದ್ಯಾರ್ಥಿಗಳ ಭವಿಷ್ಯ ಮತ್ತು ಮುಂದಿನ ಉನ್ನತ ವ್ಯಾಸಂಗದ ಪ್ರವೇಶ ಪ್ರಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ಅಂಕಗಳನ್ನೇ ನೀಡಬೇಕು ಎಂದು ಸೂಚಿಸಿದ್ದಾರೆ.



ಪ್ರತಿಶತ ಅಂಕಗಳು ವಿದ್ಯಾರ್ಥಿಯ ಶೈಕ್ಷಣಿಕ ಅರ್ಹತೆಯನ್ನು ನಿಖರವಾಗಿ ತೋರಿಸುವುದರಿಂದ, ಗ್ರೇಡ್ ಪದ್ಧತಿಯು ಗೊಂದಲಕ್ಕೆ ಕಾರಣವಾಗಬಹುದು ಎಂದು ಅಭಿಪ್ರಾಯಪಡಲಾಗಿದೆ.
ಹೈಕೋರ್ಟ್‌ನ ಈ ತೀರ್ಪಿನಿಂದಾಗಿ ಅಂಕಗಳ ಆಧಾರದ ಮೇಲೆ ಮೆರಿಟ್ ಸೀಟು ಪಡೆಯಲು ಬಯಸುವ ಸಾವಿರಾರು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಗೆಲುವಾಗಿದೆ. ಈಗ ಸರ್ಕಾರವು ತನ್ನ ಈ ಹಿಂದಿನ ಆದೇಶವನ್ನು ಬದಲಿಸಿ, ಮಾರ್ಕ್‌ಶೀಟ್‌ನಲ್ಲಿ ಅಂಕಗಳನ್ನು ನಮೂದಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಮತ್ತು ಹಿಂದಿ ಹೇರಿಕೆ ವಿರುದ್ಧ ದನಿ ಎತ್ತಿದವರಿಗೆ ಈ ತೀರ್ಪು ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.




