ಪ್ರೀತಿಸಿ ವಂಚನೆ, ನೆರವಿಗೆ ಬಾರದ ಸಂಘಟನೆಗಳು: ಡೆತ್ ನೋಟ್ ಬರೆದಿಟ್ಟು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಸಾಕಾರ ನ್ಯೂಸ್: ಪ್ರೀತಿಯ ಹೆಸರಿನಲ್ಲಿ ಯುವಕನೊಬ್ಬ ಮಾಡಿದ ವಂಚನೆಗೆ ಮನನೊಂದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಧೃತಿಗೆಡಿಸುವ ಘಟನೆ ಮಂಗಳೂರಿನ ಕಾಟಿಪಳ್ಳದಲ್ಲಿ ನಡೆದಿದೆ.

ಕಾಟಿಪಳ್ಳದ ಮೂರನೇ ಬ್ಲಾಕ್ ನಿವಾಸಿ ಸಂತೋಷ್ ಡಿ ಸೋಜಾ ಅವರ ಪುತ್ರಿ ಮನೀಷಾ ಡಿ ಸೋಜಾ (17) ಆತ್ಮಹತ್ಯೆಗೆ ಶರಣಾದ ದುರ್ದೈವಿ.ಮೃತ ಮನೀಷಾ ಸ್ಥಳೀಯ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು ಎನ್ನಲಾಗಿದೆ. ಯುವಕನೊಬ್ಬ ಈಕೆಯನ್ನು ಪ್ರೀತಿಸುವುದಾಗಿ ನಂಬಿಸಿ, ಗರ್ಭಿಣಿ ಮಾಡಿ ಬಳಿಕ ಮೋಸ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಇದರಿಂದ ತೀವ್ರ ಮಾನಸಿಕ ನೊಂದಿದ್ದ ಯುವತಿ, ಕಾಲೇಜಿನಿಂದ ಮನೆಗೆ ಮರಳಿದ ನಂತರ ಈ ಕಠಿಣ ನಿರ್ಧಾರ ಕೈಗೊಂಡಿದ್ದಾಳೆ.

ಆತ್ಮಹತ್ಯೆಗೂ ಮುನ್ನ ಯುವತಿ ಬರೆದಿಟ್ಟಿರುವ ಡೆತ್‌ನೋಟ್ ಪತ್ತೆಯಾಗಿದ್ದು, ಅದರಲ್ಲಿ ತನ್ನ ಅಸಹಾಯಕತೆ ಮತ್ತು ನೋವನ್ನು ತೋಡಿಕೊಂಡಿದ್ದಾಳೆ.“ಅಮ್ಮಾ ನನ್ನನ್ನು ಕ್ಷಮಿಸಿ… ನಾನು ಈ ವಿಷಯವಾಗಿ ಅವರಿವರಲ್ಲಿ ಹೇಳಿಕೊಂಡು ಸಹಾಯ ಬೇಡಿದೆ. ಆದರೆ ಯಾರೂ ನನ್ನ ನೆರವಿಗೆ ಬರಲಿಲ್ಲ. ಪ್ರಭಾವಿ ಹಿಂದೂ ಸಂಘಟನೆಗಳ ಬಳಿ ತಿಳಿಸಿದ್ದರೂ  ಅವರೂ ಕೂಡ ನನ್ನ ಸಹಾಯಕ್ಕೆ ಧಾವಿಸಲಿಲ್ಲ” ಎಂದು ಯುವತಿ ತನ್ನ ಡೆತ್‌ನೋಟ್‌ನಲ್ಲಿ ಅಳಲು ತೋಡಿಕೊಂಡಿದ್ದಾಳೆ ಎನ್ನಲಾಗಿದೆ.

ಯಾರಿಂದಲೂ ಸೂಕ್ತ ಬೆಂಬಲ ಸಿಗದ ಕಾರಣ ತೀವ್ರ ನಿರಾಶೆಗೊಳಗಾದ ಆಕೆ, ಕೊನೆಯದಾಗಿ ಸಾವು ಸಂಭವಿಸುವ ದಾರಿಯನ್ನು ಆಯ್ದುಕೊಂಡಿದ್ದಾಳೆ ಎಂದು ತಿಳಿದುಬಂದಿದೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯುವತಿಯ ಸಾವಿಗೆ ಕಾರಣನಾದ ವಂಚಕ ಯುವಕನ ಪತ್ತೆಗಾಗಿ ಮತ್ತು ಘಟನೆಯ ಸಂಪೂರ್ಣ ತನಿಖೆಗಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆಯ ನಂತರವಷ್ಟೇ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.

Leave a Reply

Discover more from

Subscribe now to keep reading and get access to the full archive.

Continue reading