ಅಮೇರಿಕಾದ ನೂತನ ಸೆನೆಟರ್ ಅಬ್ದುಲ್ ಎಲ್-ಸಯ್ಯದ್ ಗೆ ಕರ್ನಾಟಕದ ನಂಟು.

ಇಂದು ಫಲಿತಾಂಶ ಪ್ರಕಟವಾದ ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಗೆದ್ದು ಮೊದಲ ಮುಸ್ಲಿಂ ಸೆನೇಟರ್ ಎಂಬ ಖ್ಯಾತಿಗೆ ಪಾತ್ರರಾದ ಡೆಮಾಕ್ರೆಟಿಕ್ ಪಕ್ಷದ ಅಬ್ದುಲ್ ಎಲ್-ಸಯ್ಯದ್ ರವರ ಪತ್ನಿ ಕರ್ನಾಟಕದ ಭಟ್ಕಳ ಮೂಲದವರು.

ಕರ್ನಾಟಕದ ಭಟ್ಕಳದಿಂದ ಅಮೆರಿಕದ ರಾಜಕೀಯ ಅಂಗಳದವರೆಗೆ: ಅಬ್ದುಲ್ ಎಲ್-ಸಯೀದ್ ಅವರ ಕುಟುಂಬದ ಕರ್ನಾಟಕದ ನಂಟು

ಮೂಲ ಲೇಖನ: ದಿ ಅಮೆರಿಕನ್ ಬಜಾರ್ | ಲೇಖಕಿ: ರಾಜ್ವಾ ಕ್ವಾಸಿಮ್ | ಅನುವಾದ: ಬಶೀರ್ ಅರಂಬೂರು

ಅಮೆರಿಕದ ಮಿಚಿಗನ್ ರಾಜ್ಯದ ಡೆಮಾಕ್ರಟಿಕ್ ಪಕ್ಷದ ನೂತನ ಸೆನೆಟರ್ ಅಬ್ದುಲ್ ಎಲ್-ಸಯೀದ್ ಅವರ ಕುಟುಂಬಕ್ಕೆ ಕರ್ನಾಟಕದೊಂದಿಗೆ ವಿಶೇಷವಾದ ನಂಟಿದೆ. ಅವರ ಪತ್ನಿ ಡಾ. ಸಾರಾ ಜುಕಾಕು ಅವರ ಪೂರ್ವಜರ ಮೂಲ ಕರ್ನಾಟಕದ ಕರಾವಳಿ ಪ್ರದೇಶದಲ್ಲಿರುವ ಐತಿಹಾಸಿಕ ಭಟ್ಕಳ ಪಟ್ಟಣವಾಗಿದೆ. ಈ ಕುಟುಂಬದ ಮೂರು ತಲೆಮಾರುಗಳ ಪಯಣವು ಭಾರತದಿಂದ ಅಮೆರಿಕದವರೆಗೆ ವಿಸ್ತರಿಸಿದ್ದು, ಶಿಕ್ಷಣ, ವೈದ್ಯಕೀಯ ವೃತ್ತಿ, ಸಮಾಜಸೇವೆ ಮತ್ತು ಸಾಂಸ್ಕೃತಿಕ ಪರಂಪರೆಯ ಸುಂದರ ಕಥೆಯನ್ನು ಸಾರುತ್ತದೆ.

ಭಟ್ಕಳ: ಕುಟುಂಬದ ಬೇರುಗಳು

ಅರಬ್ಬೀ ಸಮುದ್ರ ಮತ್ತು ಪಶ್ಚಿಮ ಘಟ್ಟಗಳ ನಡುವಿನ ಸುಂದರ ಕರಾವಳಿ ಪಟ್ಟಣವಾದ ಭಟ್ಕಳವು ತನ್ನ ಐತಿಹಾಸಿಕ ವ್ಯಾಪಾರ ಪರಂಪರೆ ಮತ್ತು ನವಾಯತ್ ಸಮುದಾಯದ ವಿಶಿಷ್ಟ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಡಾ. ಸಾರಾ ಜುಕಾಕು ಅವರ ತಂದೆ ಡಾ. ಜುಕಾಕು ಎಸ್. ತಯ್ಯಬ್ ಅವರು ಭಟ್ಕಳದಲ್ಲಿ ಬೆಳೆದವರು. ಅವರ ತಾತ ಜೆ.ಎಚ್. ಶಮ್ಸುದ್ದೀನ್ ಜುಕಾಕು ಅವರು ಪ್ರಸಿದ್ಧ ವಕೀಲ, ಶಿಕ್ಷಣತಜ್ಞ ಮತ್ತು ರಾಜಕೀಯ ವ್ಯಕ್ತಿಯಾಗಿದ್ದರು. ಅವರು ಹಿಂದಿನ ಮೈಸೂರು ರಾಜ್ಯದ ಉಪ ಹಣಕಾಸು ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಭಟ್ಕಳದ ಜನರ ನೆನಪಿನಲ್ಲಿ ಶಮ್ಸುದ್ದೀನ್ ಜುಕಾಕು ಅವರ ಹೆಸರು ಇಂದಿಗೂ ಗೌರವದಿಂದ ಉಳಿದಿದೆ. ಶಿಕ್ಷಣ ಮತ್ತು ಸಮಾಜದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಗಳು ವಿಶೇಷವಾಗಿ ಸ್ಮರಣೀಯವಾಗಿವೆ.

ಸ್ಥಳೀಯರ ಪ್ರಕಾರ, ಭಟ್ಕಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ತರುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಶಿಕ್ಷಣದ ಅವಕಾಶಗಳು ಸೀಮಿತವಾಗಿದ್ದ ಕಾಲದಲ್ಲಿ ಶೈಕ್ಷಣಿಕ ಮತ್ತು ಸಮುದಾಯ ಸಂಸ್ಥೆಗಳ ಬೆಳವಣಿಗೆಗೂ ಶ್ರಮಿಸಿದ್ದರು. ಅಂಜುಮನ್ ಹಾಮಿ-ಎ-ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯೊಂದಿಗೂ ಅವರು ನಿಕಟವಾಗಿ ಸಂಬಂಧ ಹೊಂದಿದ್ದರು. ಅವರ ಹೆಸರಿನಲ್ಲಿ ಭಟ್ಕಳದ ಪ್ರಮುಖ ವೃತ್ತವೊಂದಕ್ಕೆ ‘ಶಮ್ಸುದ್ದೀನ್ ಸರ್ಕಲ್’ ಎಂದು ಹೆಸರಿಡಲಾಗಿತ್ತು. ರಸ್ತೆ ಅಭಿವೃದ್ಧಿಗಾಗಿ ಅಲ್ಲಿನ ಹಳೆಯ ಕಟ್ಟಡವನ್ನು ತೆರವುಗೊಳಿಸಿದ್ದರೂ, ಆ ಹೆಸರು ಇಂದಿಗೂ ಅವರ ಕೊಡುಗೆಗಳನ್ನು ನೆನಪಿಸುತ್ತದೆ.

ಭಟ್ಕಳದಿಂದ ಅಮೆರಿಕದವರೆಗೆ: ಮೂರು ತಲೆಮಾರುಗಳ ಸಾಧನೆ

ಶಮ್ಸುದ್ದೀನ್ ಜುಕಾಕು ಅವರ ಕುಟುಂಬದಲ್ಲಿ ಶಿಕ್ಷಣಕ್ಕೆ ವಿಶೇಷ ಮಹತ್ವ ನೀಡಲಾಗುತ್ತಿತ್ತು. ಅವರ ಪುತ್ರ ಡಾ. ಜುಕಾಕು ಎಸ್. ತಯ್ಯಬ್ ಅವರು ವೈದ್ಯಕೀಯ ಶಿಕ್ಷಣ ಪಡೆದು ವೈದ್ಯರಾದರು. ಮತ್ತೊಬ್ಬ ಪುತ್ರ ಅಬ್ದುಲ್ ರಹೀಮ್ ಜುಕಾಕು ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್ ಶಿಕ್ಷಣ ಪಡೆದು ನಂತರ ಅಂಜುಮನ್ ಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಡಾ. ತಯ್ಯಬ್ ಅವರು 1976ರಲ್ಲಿ ಬೆಂಗಳೂರಿನ ವೈದ್ಯಕೀಯ ಕಾಲೇಜಿನಿಂದ ಪದವಿ ಪಡೆದರು. ನಂತರ ಸೌದಿ ಅರೇಬಿಯಾದ ಕಿಂಗ್ ಫೈಸಲ್ ಆಸ್ಪತ್ರೆಯಲ್ಲಿ ಕೆಲಸ ಮಾಡಿದ ಬಳಿಕ, 1980ರ ದಶಕದಲ್ಲಿ ವೃತ್ತಿಪರ ಅವಕಾಶಗಳನ್ನು ಅರಸಿ ಅಮೆರಿಕಕ್ಕೆ ತೆರಳಿದರು.

ಅಮೆರಿಕದ ಬೊನ್ ಸೆಕೋರ್ಸ್ ಆಸ್ಪತ್ರೆಯಲ್ಲಿ ಇಂಟರ್ನಲ್ ಮೆಡಿಸಿನ್‌ನಲ್ಲಿ ರೆಸಿಡೆನ್ಸಿ ಪೂರ್ಣಗೊಳಿಸಿ, ಹೆನ್ರಿ ಫೋರ್ಡ್ ಆಸ್ಪತ್ರೆಯಲ್ಲಿ ನೆಫ್ರಾಲಜಿಯಲ್ಲಿ ಫೆಲೋಶಿಪ್ ಪಡೆದರು. ನಂತರ ಡೆಟ್ರಾಯಿಟ್ ಪ್ರದೇಶದಲ್ಲಿ ವೈದ್ಯಕೀಯ ವೃತ್ತಿಯನ್ನು ಸ್ಥಾಪಿಸಿದರು. ಅವರ ಪುತ್ರಿ ಸಾರಾ ಜುಕಾಕು ಕೂಡ ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದರು. ಕೊಲಂಬಿಯಾ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನಿಂದ 2015ರಲ್ಲಿ ವೈದ್ಯಕೀಯ ಪದವಿ ಪಡೆದು ಮನೋವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಿದರು. ಮಿಚಿಗನ್ ವಿಶ್ವವಿದ್ಯಾಲಯದಲ್ಲಿಯೂ ಮನೋವೈದ್ಯಕೀಯ ಕ್ಷೇತ್ರದಲ್ಲಿ ನಾಯಕತ್ವದ ಜವಾಬ್ದಾರಿ ನಿರ್ವಹಿಸಿದ್ದಾರೆ.

ಅಬ್ದುಲ್ ಎಲ್-ಸಯೀದ್ ಮತ್ತು ಕರ್ನಾಟಕದ ಸಾಂಸ್ಕೃತಿಕ ನಂಟು

ಈ ಕುಟುಂಬದ ಕರ್ನಾಟಕದ ನಂಟು ಅಬ್ದುಲ್ ಎಲ್-ಸಯೀದ್ ಅವರ ವೈಯಕ್ತಿಕ ಜೀವನದಲ್ಲಿಯೂ ವಿಶೇಷ ಸ್ಥಾನ ಪಡೆದಿದೆ. ಈಜಿಪ್ಟ್ ಮೂಲದ ಅಬ್ದುಲ್ ಎಲ್-ಸಯೀದ್ ಅವರು ಸುಮಾರು ಎರಡು ದಶಕಗಳಿಂದ ಸಾರಾ ಜುಕಾಕು ಅವರೊಂದಿಗೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಾಗಿದ್ದಾಗ ಇವರ ಪರಿಚಯವಾಯಿತು. 2006ರ ಮೇ ತಿಂಗಳಲ್ಲಿ ವಿವಾಹವಾದರು. ಅಬ್ದುಲ್ ಅವರು ತಮ್ಮ ಪತ್ನಿಯ ಭಾರತೀಯ ಸಂಸ್ಕೃತಿ ಮತ್ತು ದಕ್ಷಿಣ ಭಾರತದ ಕುಟುಂಬ ಜೀವನದ ಪ್ರಭಾವದ ಬಗ್ಗೆ ಹಲವು ಸಂದರ್ಭಗಳಲ್ಲಿ ಹಾಸ್ಯಮಿಶ್ರಿತವಾಗಿ ಮಾತನಾಡಿದ್ದಾರೆ.

ಒಂದು ಸಂದರ್ಶನದಲ್ಲಿ, ಸುಮಾರು 20 ವರ್ಷಗಳಿಂದ ದಕ್ಷಿಣ ಭಾರತೀಯ ಕುಟುಂಬದ ಭಾಗವಾಗಿರುವುದರಿಂದ ತಾನು ಅರಬ್‌ಗಿಂತ ಭಾರತೀಯ ಸಂಸ್ಕೃತಿಗೆ ಹೆಚ್ಚು ಹತ್ತಿರವಾಗಿದ್ದೇನೆ ಎಂಬ ಅರ್ಥದಲ್ಲಿ ಹೇಳಿಕೊಂಡಿದ್ದರು. ಅವರು ತಮ್ಮ ಮನೆಯಲ್ಲಿ ಪತ್ನಿ ಮತ್ತು ಇಬ್ಬರು ಪುತ್ರಿಯರ ಮೂಲಕ ಭಾರತೀಯ ಸಂಸ್ಕೃತಿಯ ಪ್ರಭಾವ ಸದಾ ಇರುತ್ತದೆ ಎಂದೂ ಉಲ್ಲೇಖಿಸಿದ್ದಾರೆ. ಇವರ ಕುಟುಂಬವು ಈಜಿಪ್ಟ್ ಮತ್ತು ಭಾರತದ ಎರಡು ವಿಭಿನ್ನ ಸಾಂಸ್ಕೃತಿಕ ಪರಂಪರೆಗಳನ್ನು ಒಟ್ಟುಗೂಡಿಸಿಕೊಂಡಿದೆ.

ಕರ್ನಾಟಕದ ಪರಂಪರೆ ಮತ್ತು ಅಮೆರಿಕದ ರಾಜಕೀಯ

ಸಾರಾ ಜುಕಾಕು ಅವರು ಅಮೆರಿಕದ ಮಿಚಿಗನ್‌ನಲ್ಲಿ ಭಾರತೀಯ ವಲಸಿಗರ ಕುಟುಂಬದಲ್ಲಿ ಜನಿಸಿ ಬೆಳೆದವರು. ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುವಾಗಲೇ ಅಬ್ದುಲ್ ಅವರನ್ನು ಭೇಟಿಯಾದರು. ನಂತರ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಉನ್ನತ ಅಧ್ಯಯನ ಮುಂದುವರಿಸಿದರು. ಅಬ್ದುಲ್ ಎಲ್-ಸಯೀದ್ ಅವರು ಅಮೆರಿಕದ ಸೆನೆಟ್ ಗೆ ತಮ್ಮ ಚೊಚ್ಚಲ ಪ್ರಯತ್ನದಲ್ಲಿಯೇ ಆಯ್ಕೆ ಆಗುವ ಮೂಲಕ ರಾಜಕೀಯದಲ್ಲಿ ಪ್ರಮುಖ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಮೆರಿಕದ ಸೆನೆಟ್‌ನಲ್ಲಿ ಸೇವೆ ಸಲ್ಲಿಸುವ ಮೊದಲ ಮುಸ್ಲಿಂ ವ್ಯಕ್ತಿಯಾಗುವ ಐತಿಹಾಸಿಕ ಅವಕಾಶ ಪಡೆದಿದ್ದಾರೆ.

ಆದರೆ, ಸಾರಾ ಜುಕಾಕು ಅವರು ಪತಿಯ ರಾಜಕೀಯ ಜೀವನದಿಂದ ಹೆಚ್ಚಿನ ಪ್ರಚಾರವನ್ನು ಪಡೆಯದೆ ತಮ್ಮ ವೈದ್ಯಕೀಯ ವೃತ್ತಿ ಮತ್ತು ಕುಟುಂಬ ಜೀವನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

ಭಟ್ಕಳದ ಜನಮನದಲ್ಲಿ ಉಳಿದಿರುವ ಕುಟುಂಬದ ಹೆಸರು

ಇಂದು ಜುಕಾಕು ಕುಟುಂಬದ ಹೆಚ್ಚಿನ ಸದಸ್ಯರು ಭಟ್ಕಳದಿಂದ ದೂರವಾಗಿ ಭಾರತ ಮತ್ತು ವಿದೇಶಗಳ ವಿವಿಧ ನಗರಗಳಲ್ಲಿ ನೆಲೆಸಿದ್ದರೂ, ಅವರ ಕುಟುಂಬದ ಹೆಸರು ಭಟ್ಕಳದ ಹಿರಿಯ ನಾಗರಿಕರು ಮತ್ತು ಶಿಕ್ಷಣ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿರುವವರಲ್ಲಿ ಇಂದಿಗೂ ಪರಿಚಿತವಾಗಿದೆ. ಭಟ್ಕಳದ ಜನರಿಗೆ ಈ ಕುಟುಂಬದ ಇತಿಹಾಸವು ಕೇವಲ ಅಮೆರಿಕದ ರಾಜಕೀಯದೊಂದಿಗೆ ಬೆಸೆದುಕೊಂಡ ಕಥೆಯಲ್ಲ. ಅದು ಶಿಕ್ಷಣದ ಮಹತ್ವ, ವೃತ್ತಿಪರ ಸಾಧನೆ, ಸಮಾಜದ ಅಭಿವೃದ್ಧಿ ಮತ್ತು ತಲೆಮಾರುಗಳಿಂದ ಮುಂದುವರಿದ ಮೌಲ್ಯಗಳ ಕಥೆಯಾಗಿದೆ.

ಒಂದು ಕಾಲದಲ್ಲಿ ಕರ್ನಾಟಕದ ಕರಾವಳಿಯಲ್ಲಿ ಶಿಕ್ಷಣ ಮತ್ತು ಸಾರ್ವಜನಿಕ ಸೇವೆಯ ಮೂಲಕ ಗುರುತಿಸಿಕೊಂಡ ಕುಟುಂಬದ ಮುಂದಿನ ತಲೆಮಾರು ವೈದ್ಯಕೀಯ ಕ್ಷೇತ್ರದಲ್ಲಿ ಅಮೆರಿಕದಲ್ಲಿ ಸಾಧನೆ ಮಾಡಿದೆ. ಈಗ ಆ ಕುಟುಂಬದ ಮಗಳು ಸಾರಾ ಅವರ ಪತಿ ಅಬ್ದುಲ್ ಎಲ್-ಸಯೀದ್ ಅಮೆರಿಕದ ರಾಷ್ಟ್ರೀಯ ರಾಜಕೀಯದಲ್ಲಿ ಗಮನ ಸೆಳೆಯುತ್ತಿದ್ದಾರೆ. ಭಟ್ಕಳದಿಂದ ಮಿಚಿಗನ್‌ವರೆಗೆ ಸಾಗಿದ ಈ ಪಯಣವು ಕರ್ನಾಟಕದ ಒಂದು ಕುಟುಂಬದ ಪರಂಪರೆ, ಭಾರತೀಯ ವಲಸಿಗರ ಸಾಧನೆ ಮತ್ತು ಎರಡು ವಿಭಿನ್ನ ಸಂಸ್ಕೃತಿಗಳ ನಡುವಿನ ಬಾಂಧವ್ಯವನ್ನು ಪ್ರತಿಬಿಂಬಿಸುತ್ತದೆ.

ನಿಮ್ಮದೊಂದು ಉತ್ತರ