ಅಕ್ಕೋಜಿಪಾಲ್–ಶೇಣಿ ರಸ್ತೆ ಅಭಿವೃದ್ಧಿಗಾಗಿ ಹೋರಾಟ ಸಮಿತಿ ರಚನೆ

ಶನಿವಾರ ಚೊಕ್ಕಾಡಿ ವಠಾರದಲ್ಲಿ ಶಾಂತಿಯುತ ಸಾಂಕೇತಿಕ ಪ್ರತಿಭಟನೆ

ಕುಕ್ಕುಜಡ್ಕ: ಅಕ್ಕೋಜಿಪಾಲ್–ಜೋಗಿಯಡ್ಕ–ಅಜ್ಜನಗದ್ದೆ–ಚೊಕ್ಕಾಡಿ–ಶೇಣಿ ರಸ್ತೆಯ ಅಭಿವೃದ್ಧಿಗಾಗಿ ಸಾರ್ವಜನಿಕರ ಒಗ್ಗಟ್ಟಿನ ಹೋರಾಟಕ್ಕೆ ಚಾಲನೆ ನೀಡುವ ಉದ್ದೇಶದಿಂದ ನವೆಂಬರ್ 5ರಂದು ಗುರುವಾರ ಕುಕ್ಕುಜಡ್ಕದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಸಭಾಂಗಣದಲ್ಲಿ ಅಮರ ಪಡ್ನೂರು ಹಾಗೂ ಅಮರಮುಡ್ನೂರು ಗ್ರಾಮದ ವಿವಿಧ ಸಂಘ-ಸಂಸ್ಥೆಗಳು, ಸಮಿತಿಗಳು ಹಾಗೂ ಸಾರ್ವಜನಿಕರ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಸುಮಾರು 300 ಮಂದಿ ಸಾರ್ವಜನಿಕರು ಭಾಗವಹಿಸಿದ್ದರು.

ಅಕ್ಕೋಜಿಪಾಲ್‌ನಿಂದ ಶೇಣಿವರೆಗಿನ ಪ್ರಮುಖ ಸಂಪರ್ಕ ರಸ್ತೆಯು ಕಳೆದ 15 ವರ್ಷಗಳಿಗೂ ಹೆಚ್ಚು ಕಾಲದಿಂದ ಸಮರ್ಪಕ ದುರಸ್ತಿ ಹಾಗೂ ಮರುಡಾಮರೀಕರಣ ಕಾಣದೆ ಹೊಂಡಗುಂಡಿಗಳಿಂದ ಕೂಡಿದ್ದು, ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ರಸ್ತೆ ಅಭಿವೃದ್ಧಿಗಾಗಿ ಕಳೆದ 2ರಿಂದ 2.5 ವರ್ಷಗಳಿಂದ ಶಾಸಕರು, ಸಂಸದರು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಗಮನಾರ್ಹ ಪ್ರಗತಿ ಕಂಡುಬಂದಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಒಗ್ಗಟ್ಟಾಗಿ ಹೋರಾಟ ನಡೆಸುವ ಅನಿವಾರ್ಯತೆಯ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.

ಸಭೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ, ರಸ್ತೆ ಅಭಿವೃದ್ಧಿಗಾಗಿ ಪಕ್ಷ, ಜಾತಿ, ಧರ್ಮದ ಭೇದಭಾವವಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸುವ ಅಗತ್ಯವನ್ನು ಪ್ರತಿಪಾದಿಸಿದರು.

ಹೋರಾಟ ಸಮಿತಿಯ ಪದಾಧಿಕಾರಿಗಳ ಆಯ್ಕೆ

ರಸ್ತೆ ಅಭಿವೃದ್ಧಿ ಹೋರಾಟವನ್ನು ಸಂಘಟಿತವಾಗಿ ಮುನ್ನಡೆಸುವ ನಿಟ್ಟಿನಲ್ಲಿ ನೂತನ ಹೋರಾಟ ಸಮಿತಿಯನ್ನು ರಚಿಸಲಾಯಿತು.

ಸಮಿತಿಯ ಅಧ್ಯಕ್ಷರಾಗಿ ಹರ್ಷ ಕುಮಾರ್ ಎಂ.ಎಸ್., ಉಪಾಧ್ಯಕ್ಷರಾಗಿ ಪವನ್ ಮುಂಡ್ರಾಜೆ, ಹೇಮಲತಾ ತಂಟೆಪ್ಪಾಡಿ, ಹರಿಪ್ರಸಾದ್ ರೈ ಶೇಣಿ, ಜಯಂತ ನಾಯರ್ ಕಲ್ಲು ಹಾಗೂ ಗಂಗಾಧರ ಹಿರಿಯಡ್ಕ, ಕಾರ್ಯದರ್ಶಿಯಾಗಿ ಅರುಣ ಕುಮಾರ್ ಮುಂಡಾಜೆ, ಜೊತೆ ಕಾರ್ಯದರ್ಶಿಯಾಗಿ ಪುನೀತ್ ಸಂಕೇಶ, ಖಜಾಂಜಿಯಾಗಿ ಶಶಿಕಾಂತ್ ಮಿತ್ತೂರು ಹಾಗೂ ಸಂಚಾಲಕರಾಗಿ ಚೈತನ್ಯ ಭಟ್ ಪಾರೆ ಆಯ್ಕೆಯಾದರು.

ಇದಲ್ಲದೆ, ಹೋರಾಟಕ್ಕೆ ಸಹಕಾರ ನೀಡಿದ 20 ಸಂಘ-ಸಂಸ್ಥೆಗಳಿಂದ ತಲಾ ಐವರು ಪ್ರತಿನಿಧಿಗಳನ್ನು ಸಮಿತಿಯ ಸದಸ್ಯರನ್ನಾಗಿ ಸೇರಿಸಿಕೊಳ್ಳಲು ತೀರ್ಮಾನಿಸಲಾಯಿತು.

ಹೋರಾಟಕ್ಕೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಗೌರವ ಸಲಹೆಗಾರರಾಗಿ ರಾಧಾಕೃಷ್ಣ ಭಟ್ ಜೋಗಿಯಡ್ಕ, ತಿರುಮಲೇಶ್ವರ ದಾಂಬೆತೋಟ, ಎಂ.ಜಿ. ಸತ್ಯನಾರಾಯಣ ಭಟ್, ಶಿವಶಂಕರ ಭಟ್, ಜಯರಾಮ ಪಿ.ಕೆ., ಪದ್ಮನಾಭ ಬೊಳ್ಳೂರು, ವಸಂತ ಮಾಡಬಾಗಿಲು, ಪುರುಷೋತ್ತಮ ಮೂಕಮಲೆ, ವೆಂಕಟ್ರಮಣ ಇಟ್ಟಿಗುಂಡಿ, ಚಂದ್ರಶೇಖರ ಸುಬ್ಬಯಮೂಲೆ, ಆನಂದ ಗೌಡ ಕೇನಡ್ಕ, ಸುಪ್ರೀತ್ ಮೊಂಟಡ್ಕ, ಯಶವಂತ ಪಿಲಿಕಜೆ, ಪದ್ಮಯ ಗೌಡ ಬೊಳ್ಳೂರು, ವಿವೇಕ್ ರೈ ಶೇಣಿ, ಜಯಪ್ರಕಾಶ್ ಅನೇಕರ್ ಹಾಗೂ ಲಕ್ಷ್ಮೀಶ ನಡುಗಲ್ಲು ಅವರನ್ನು ಆಯ್ಕೆ ಮಾಡಲಾಯಿತು.

ನವೆಂಬರ್ 7ರಂದು ಶಾಂತಿಯುತ ಸಾಂಕೇತಿಕ ಪ್ರತಿಭಟನೆ

ಮುಂದಿನ ಹೋರಾಟದ ಮೊದಲ ಹಂತವಾಗಿ ದಿನಾಂಕ 07-11-2026ರ ಶನಿವಾರ ಚೊಕ್ಕಾಡಿ ವಠಾರದಲ್ಲಿ ಶಾಂತಿಯುತ ಸಾಂಕೇತಿಕ ಪ್ರತಿಭಟನೆ ನಡೆಸಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಗ್ರಾಮದ ಬಹುದಿನಗಳ ಬೇಡಿಕೆಯಾಗಿರುವ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಒಗ್ಗಟ್ಟಿನ ಧ್ವನಿಯನ್ನು ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ತಲುಪಿಸುವುದು ಹೋರಾಟದ ಮುಖ್ಯ ಉದ್ದೇಶವಾಗಿದೆ.

“ನಮ್ಮ ರಸ್ತೆ – ನಮ್ಮ ಹಕ್ಕು” ಎಂಬ ಆಶಯದೊಂದಿಗೆ ಸಾರ್ವಜನಿಕರ ಒಗ್ಗಟ್ಟಿನ ಹೋರಾಟಕ್ಕೆ ಜಯವಾಗಲಿ ಎಂದು ಸಭೆ ಆಶಯ ವ್ಯಕ್ತಪಡಿಸಿತು.

ನಿಮ್ಮದೊಂದು ಉತ್ತರ