



ಬಿಸಿರೋಡ್: ಇಲ್ಲಿನ ಪ್ರಮುಖ ಸರ್ಕಲ್‌ನಲ್ಲಿ ಇಂದು ಬೆಳಿಗ್ಗೆ ಟಿಪ್ಪರ್ ಹಾಗೂ ಹೋಂಡಾ ಆಕ್ಟಿವಾ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಕೂಟರ್ ಸವಾರರು ಮೃತಪಟ್ಟಿದ್ದಾರೆ.
ಸ್ಥಳೀಯ ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಬೆಳಿಗ್ಗೆ ಸರ್ಕಲ್ ಬಳಿ ಪೋಲೀಸರು ಕರ್ತವ್ಯದಲ್ಲಿದ್ದು, ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಆಕ್ಟಿವಾ ಸವಾರರು ಪೋಲೀಸರ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿ, ದಿಢೀರನೆ ಸ್ಕೂಟರ್ ಚಲಾಯಿಸಿದ್ದಾರೆ. ಆ ಸಂದರ್ಭದಲ್ಲಿ ವೇಗವಾಗಿ ಬಂದ ಟಿಪ್ಪರ್ ಲಾರಿಯ ಅಡಿಗೆ ಸ್ಕೂಟರ್ ಸಿಲುಕಿದ್ದು, ಸವಾರರ ಮೇಲೆ ಟಿಪ್ಪರ್ ಚಕ್ರಗಳು ಹರಿದು ಪರಿಣಾಮವಾಗಿ ಇಬ್ಬರೂ ಕೊನೆಯುಸಿರೆಳೆದಿದ್ದಾರೆ.
ಅಪಘಾತದ ತೀವ್ರತೆಗೆ ಸ್ಕೂಟರ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟರೆ ಮತ್ತೊಬ್ಬ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.ಘಟನೆ ನಡೆದ ತಕ್ಷಣವೇ ಸ್ಥಳದಲ್ಲಿ ಸಾರ್ವಜನಿಕರು ಹಾಗೂ ಹತ್ತಿರದ ಅಂಗಡಿಯವರು ಜಮಾಯಿಸಿದರು. ಪೋಲೀಸರು ಸರ್ಕಲ್ ನಲ್ಲಿ ನಡೆಸುವ ತಪಾಸಣಾ ವೈಖರಿಯೂ ಈ ದುರಂತಕ್ಕೆ ಕಾರಣವೆಂದು ಆರೋಪಿಸಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಘಟನಾ ಸ್ಥಳಕ್ಕೆ ಪೋಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು,ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು, ಅಪಘಾತಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತನಿಖೆ ಮುಂದುವರಿಸಿದ್ದಾರೆ.




