ಖ್ಯಾತ ಜವಳಿ‌ ಉದ್ಯಮಿ ಅಂತ್ಯ ಸಂಸ್ಕಾರ: ವಿಡಿಯೋ ಕಾಲ್ ಮೂಲಕ ವೀಕ್ಷಿಸಿ ಇನ್ನೂ ಮುಗಿದಿಲ್ಲವೇ ಎಂದ ಮಗಳು

ಕೋಟಿ ಕೋಟಿ ಒಡೆಯನಾಗಿದ್ದು ಏನು ಪ್ರಯೋಜನ? ಜನ್ಮ ನೀಡಿದ ತಂದೆ ಕೊನೆಯುಸಿರೆಳೆದಾಗ ಮುಖ ನೋಡಲು ಬಾರದೆ, ಆನ್‌ಲೈನ್‌ನಲ್ಲೇ ಹಣ ಕಳುಹಿಸಿ ‘ಅಂತ್ಯಕ್ರಿಯೆ ಮುಗಿಸಿ’ ಎಂದ ಮಕ್ಕಳ ಹೈಟೆಕ್ ಕ್ರೌರ್ಯಕ್ಕೆ ಮುಂಬೈನ ಮಾಜಿ ಉದ್ಯಮಿಯೊಬ್ಬರ ಸಾವು ಸಾಕ್ಷಿಯಾಗಿದೆ.

ಮುಂಬೈನ ಜವಳಿ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದ್ದ 74 ವರ್ಷದ ಶಿವಚರಣ್ ಗುಪ್ತಾ ಅವರ ಅಂತ್ಯ ಹೀಗಾಗಿದ್ದು ಇಂದಿನ ಸ್ವಾರ್ಥ ಸಮಾಜಕ್ಕೆ ಹಿಡಿದ ದರ್ಪಣ. ಪತ್ನಿ ತೀರಿಕೊಂಡ ಮೇಲೆ ಸಂಪೂರ್ಣ ಒಂಟಿಯಾದ ಇವರು ಕಳೆದ ಕೆಲವು ವರ್ಷಗಳಿಂದ ಹರಿಯಾಣದ ಸೋನಿಪತ್‌ನಲ್ಲಿರುವ ವೃದ್ಧಾಶ್ರಮದಲ್ಲಿ ಕಾಲ ದೂಡುತ್ತಿದ್ದರು.

ಜ್ಞಾನ ಧಾರೆ ಎರೆಯುವ ಶಿಕ್ಷಕಿಯರು, ಕಲ್ಲಾದ ಕರುಳು ಶಿವಚರಣ್ ಅವರಿಗೆ ಮೂವರು ಹೆಣ್ಣುಮಕ್ಕಳು—ಅನಿತಾ, ನಿಶಾ ಮತ್ತು ಪ್ರಿಯಾ. ಇವರು ನೇಪಾಳ, ಉತ್ತರ ಪ್ರದೇಶ ಹಾಗೂ ಮುಂಬೈನಲ್ಲಿ ಶಿಕ್ಷಕಿಯರಾಗಿ ಉದ್ಯೋಗದಲ್ಲಿದ್ದಾರೆ. ಸಮಾಜಕ್ಕೆ ನೀತಿ ಬೋಧಿಸುವ ಇವರ ಕರುಳು ಹೆತ್ತ ತಂದೆಯ ವಿಷಯದಲ್ಲಿ ಸಂಪೂರ್ಣವಾಗಿ ಕಲ್ಲಾಗಿತ್ತು. ತಂದೆಯ ಗಂಭೀರ ಅನಾರೋಗ್ಯದ ವಿಷಯ ತಿಳಿಸಿದರೂ ಯಾರೂ ಬರಲಿಲ್ಲ. ಆಶ್ರಮದಲ್ಲೇ ಶಿವಚರಣ್ ಕೊನೆಯುಸಿರೆಳೆದಾಗ ವೃದ್ಧಾಶ್ರಮದವರು ಸುದ್ದಿ ತಲುಪಿಸಿದರೂ, ಒಬ್ಬ ಮಗಳೂ ಅಂತಿಮ ದರ್ಶನಕ್ಕೆ ಬರಲು ಸಿದ್ಧರಿರಲಿಲ್ಲ.

₹5001 ಆನ್‌ಲೈನ್ ವರ್ಗಾವಣೆ, ವೀಡಿಯೊ ಕರೆಯಲ್ಲಿ ತರಾತುರಿ! ಕೊನೆಗೆ ಶಿವಚರಣ್ ಅವರ ಅಂತ್ಯಕ್ರಿಯೆಗೆ ಆನ್‌ಲೈನ್ ಮೂಲಕ ಕೇವಲ 5001 ರೂಪಾಯಿ ಯುಪಿಐ ವರ್ಗಾವಣೆ ಮಾಡಿದ ಮಕ್ಕಳು, “ಅಂತ್ಯಕ್ರಿಯೆಯನ್ನು ಅಲ್ಲೇ ಮುಗಿಸಿಬಿಡಿ” ಎಂದು ಕೈತೊಳೆದುಕೊಂಡರು. ಕೊನೆಗೆ ವೃದ್ಧಾಶ್ರಮದ ನಿರ್ದೇಶಕ ಆನಂದ್ ಕುಮಾರ್ ಅವರೇ ಧರ್ಮಪಿತನ ಸ್ಥಾನದಲ್ಲಿ ನಿಂತು ಅಂತಿಮ ವಿಧಿವಿಧಾನ ನೆರವೇರಿಸಿದರು. ಶಿವಚರಣ್ ಅವರ ಚಿತೆ ಉರಿಯುತ್ತಿರುವಾಗ, ವೀಡಿಯೊ ಕರೆಯಲ್ಲಿ ನೋಡುತ್ತಿದ್ದ ಮಗಳು “ಇನ್ನೂ ಎಷ್ಟು ಸಮಯ ಬೇಕು?” ಎಂದು ಜಟಾಪಟಿ ನಡೆಸಿದ್ದು ಅಲ್ಲಿದ್ದವರ ಕಣ್ಣಲ್ಲಿ ನೀರು ತರಿಸಿತು.

ಸಾಕ್ಷಾತ್ಕರಿಸಿದ ನೇತ್ರದಾನ, ಕತ್ತಲಾದ ಮಾನವೀಯತೆ ತಮ್ಮ ಕೊನೆಯ ಕ್ಷಣದಲ್ಲೂ ಶಿವಚರಣ್ ಅವರು ತಮ್ಮ ಕಣ್ಣುಗಳನ್ನು ದಾನ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದರು. ಆಶ್ರಮದವರು ಅವರ ಆಸೆಯಂತೆ ನೇತ್ರದಾನ ನೆರವೇರಿಸಿದರು. ಹೆತ್ತ ತಂದೆ ಸಾವು ಹತ್ತಿರ ಬಂದಾಗಲೂ ಕಣ್ಣುಗಳನ್ನು ದಾನ ಮಾಡಿ ಮತ್ತೊಬ್ಬರ ಬಾಳಿಗೆ ಬೆಳಕಾದರು, ಆದರೆ ಸುಶಿಕ್ಷಿತರಾಗಿದ್ದ ಮಕ್ಕಳು ಮಾತ್ರ ತಂದೆಯ ಪ್ರೀತಿಯನ್ನೇ ಮರೆತು ಮಾನವೀಯತೆಯಿಲ್ಲದ ಕತ್ತಲಲ್ಲಿ ಉಳಿದರು.

ಹಣ, ಉದ್ಯೋಗ ಮತ್ತು ತಂತ್ರಜ್ಞಾನದ ಗಡಿಬಿಡಿಯಲ್ಲಿ ಹೆತ್ತವರ ಅಂತ್ಯಸಂಸ್ಕಾರಕ್ಕೂ ಸಮಯವಿಲ್ಲದಂತೆ ಬದುಕುತ್ತಿರುವ ಇಂದಿನ ಪೀಳಿಗೆಗೆ ಶಿವಚರಣ್ ಅವರ ಕಥೆ ಒಂದು ಎಚ್ಚರಿಕೆಯ ಗಂಟೆ. ಆನ್‌ಲೈನ್ ವ್ಯವಹಾರಗಳ ನಡುವೆ ಸಂಬಂಧಗಳ ಕರುಳು ಬಳ್ಳಿ ಹೀಗೆ ಕಡಿದುಬೀಳುತ್ತಿರುವುದು ಸಮಾಜದ ದೊಡ್ಡ ದುರಂತ.

ನಿಮ್ಮದೊಂದು ಉತ್ತರ