ವಯನಾಡೋ… ಭಯನಾಡೋ…! ಮರೆಯಲಾಗದ ನೆನಪುಗಳು

ಇವತ್ತಿಗೆ ಸರಿಯಾಗಿ ಎರಡು ವರ್ಷಗಳ ಹಿಂದೆ ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ ಅನುಭವವೊಂದು ಎದುರಾಯಿತು. ಬಹುಶಃ ಪ್ರತಿಯೊಬ್ಬರ ಬದುಕಿಗೂ ಇಂತಹ ಅನುಭವ ಸಿಗುವುದಿಲ್ಲ. ವಯನಾಡಿನ ಭೂಕುಸಿತ ದುರಂತದ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗುವ ಅವಕಾಶ ನನಗೆ ದೊರಕಿತ್ತು. ಆ ದಿನ ಕಂಡ ದೃಶ್ಯಗಳು ಇಂದಿಗೂ ಮನಸ್ಸಿನಲ್ಲಿ ಅಚ್ಚೊತ್ತಿದಂತಿವೆ.

ದುರಂತ ನಡೆದ ದಿನ ಮಧ್ಯಾಹ್ನ ನಾವು ಆರು ಜನರ ತಂಡವಾಗಿ ವಯನಾಡಿನತ್ತ ಹೊರಟೆವು. ಸಂಜೆ ವೇಳೆಗೆ ಮೇಪಾಡಿ ತಲುಪಿದೆವು. ದುರಂತ ಸಂಭವಿಸಿದ ಮುಂಡಕೈ–ಚೂರಲ್‌ಮಲೆ ಪ್ರದೇಶದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಮೇಪಾಡಿಯ ಸರ್ಕಾರಿ ಆಸ್ಪತ್ರೆ, ಅಬ್ದುಲ್ ಕಲಾಂ ಸಮುದಾಯ ಭವನ ಹಾಗೂ ಸುತ್ತಮುತ್ತಲಿನ ಕಾಲೇಜುಗಳಲ್ಲಿ ತಾತ್ಕಾಲಿಕ ಶವಾಗಾರಗಳು ಮತ್ತು ನಿರಾಶ್ರಿತರ ಶಿಬಿರಗಳನ್ನು ಸ್ಥಾಪಿಸಲಾಗಿತ್ತು.

ಆ ರಾತ್ರಿ ರಕ್ಷಣಾ ಕಾರ್ಯ ಸ್ಥಗಿತಗೊಂಡಿದ್ದರಿಂದ ಅಲ್ಲೇ ಉಳಿಯಬೇಕಾಯಿತು. ರೆಸ್ಕ್ಯೂ ತಂಡದೊಂದಿಗೆ ಇದ್ದ ಕಾರಣ ಆಂಬುಲೆನ್ಸ್‌ಗಳಲ್ಲಿ ಬರುತ್ತಿದ್ದ ಮೃತದೇಹಗಳನ್ನು ಇಳಿಸಿ ವಿಶೇಷ ಫ್ರೀಜರ್‌ಗಳಲ್ಲಿ ಇರಿಸುವ ಕೆಲಸದಲ್ಲಿ ನಾವೂ ಕೈಜೋಡಿಸಿದೆವು.

ನಾವು ತಲುಪುವಷ್ಟರಲ್ಲಿ 91 ಮೃತದೇಹಗಳು ಪತ್ತೆಯಾಗಿದ್ದವು. ಆದರೆ ಆಂಬುಲೆನ್ಸ್‌ಗಳು ಇನ್ನೂ ಬರುತ್ತಲೇ ಇದ್ದವು. ತಮ್ಮ ಬಂಧುಗಳ ಫೋಟೋ ಹಿಡಿದು “ಇವರು ಇಲ್ಲಿ ಇದ್ದಾರೆಯೇ?” ಎಂದು ಕೇಳುತ್ತಾ ಅಲೆದಾಡುತ್ತಿದ್ದವರನ್ನು ನೋಡಿದಾಗ ಮನಸ್ಸು ಕರಗುತ್ತಿತ್ತು.

ಒಬ್ಬ ತಂದೆ ತನ್ನ ಮಗಳ ಫೋಟೋ ತೋರಿಸಿದಾಗ, ಶವಾಗಾರದಲ್ಲಿದ್ದ ಒಂದು ಮೃತದೇಹವನ್ನು ತೋರಿಸಲು ಕರೆದುಕೊಂಡು ಹೋದೆ. ಬಿಳಿ ಬಟ್ಟೆ ತೆರೆದು ನೋಡಿದಾಗ ಆ ಮೃತದೇಹದ ಮುಖವೇ ಇರಲಿಲ್ಲ. ಇನ್ನೊಂದು ಫ್ರೀಜರ್‌ನಲ್ಲಿ ದೇಹದ ಭಾಗಗಳು ಮಾತ್ರ ಇದ್ದವು. ತಲೆ ಇದ್ದರೆ ದೇಹವಿಲ್ಲ, ದೇಹ ಇದ್ದರೆ ತಲೆಯಿಲ್ಲ. ಅಂತಹ ದೃಶ್ಯಗಳನ್ನು ಕಂಡ ನಂತರ ಅಲ್ಲಿ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ.

ನಂತರ ನಿರಾಶ್ರಿತರ ಶಿಬಿರದತ್ತ ಹೋದೆವು. ಅಲ್ಲಿ ಮತ್ತೊಂದು ನೋವಿನ ಲೋಕವೇ ಕಾಣಿಸಿತು. ಕೆಲವರು ಗೋಡೆಯನ್ನು ನೋಡುತ್ತಾ ಮೌನವಾಗಿ ಕುಳಿತಿದ್ದರು. ಕೆಲವರು ಊಟದ ತಟ್ಟೆ ಮುಂದೆ ಇಟ್ಟುಕೊಂಡೇ ತಿನ್ನದೆ ಕುಳಿತಿದ್ದರು. ಸಣ್ಣ ಮಕ್ಕಳ ಅಳುವಿನ ಜೊತೆ ದೊಡ್ಡವರ ಆಕ್ರಂದನವೂ ಕೇಳಿಸುತ್ತಿತ್ತು.

ಗೋಡೆಗೆ ಮುಖಕೊಟ್ಟು ಅಳುತ್ತಿದ್ದ ಬಾಲಕನೊಬ್ಬ ತನ್ನ ತಂದೆಯ ಮೃತದೇಹ ನೋಡಿ ಬಂದಿದ್ದ. “ಎಲ್ಲಾಮ್ ಪೋಯಿ ಮೋನೇ…” ಎಂದು ಅಳುತ್ತಾ ಅವನ ಕೈ ಹಿಡಿದಿದ್ದ ತಾಯಿಯ ಸ್ಪರ್ಶ ಇಂದಿಗೂ ಮರೆತಿಲ್ಲ.

ಇನ್ನೊಬ್ಬ ಹದಿಹರೆಯದ ಹುಡುಗ ತನ್ನ ಕೈಯಲ್ಲಿ ಪುಟ್ಟ ಮಗುವನ್ನು ಹಿಡಿದು ನಿಂತಿದ್ದ. “ಹಲವರು ನನ್ನ ಕೈ ಹಿಡಿದು ರಕ್ಷಿಸಿ ಎಂದು ಕೂಗುತ್ತಿದ್ದರು. ಆದರೆ ನನ್ನ ಕೈಗೆ ಸಿಕ್ಕಿದ್ದು ಈ ಮಗು ಮಾತ್ರ. ಉಳಿದವರನ್ನು ಉಳಿಸಲಾಗಲಿಲ್ಲ” ಎಂದು ಅಳುತ್ತಿದ್ದ ಅವನ ನೋವು ಮನಸ್ಸನ್ನು ಕಲುಕಿತ್ತು.

ಆ ರಾತ್ರಿ ಪಕ್ಕದ ಮಸೀದಿಯಲ್ಲಿ ವಿಶ್ರಾಂತಿ ಪಡೆದು ಮರುದಿನ ಬೆಳಿಗ್ಗೆ ದುರಂತ ಸ್ಥಳಕ್ಕೆ ಹೊರಟೆವು. ಖಾಸಗಿ ವಾಹನಗಳಿಗೆ ಪ್ರವೇಶ ಇರಲಿಲ್ಲ. ಕೊನೆಗೆ ಎಸ್‌ವೈಎಸ್ ಸಾಂತ್ವನ ತಂಡದ ಆಂಬುಲೆನ್ಸ್‌ನಲ್ಲಿ ಚೂರಲ್‌ಮಲೆ ತಲುಪಿದೆವು.

ಅಲ್ಲಿ ಕಂಡ ದೃಶ್ಯಗಳು ಮಾತಿನಲ್ಲಿ ಹೇಳಲಾಗದು. ಮನೆಗಳು ನೆಲಸಮವಾಗಿದ್ದವು. ದುಬಾರಿ ವಾಹನಗಳು ಗುರುತೇ ಸಿಗದಂತೆ ನಜ್ಜುಗುಜ್ಜಾಗಿದ್ದವು. ವರ್ಷಗಳ ಪರಿಶ್ರಮದಿಂದ ಕಟ್ಟಿದ ಮನೆಗಳು ಕ್ಷಣಾರ್ಧದಲ್ಲಿ ಮಣ್ಣಿನಡಿ ಹೂತುಹೋಗಿದ್ದವು.

ರೋಪ್‌ವೇ ಮೂಲಕ ಮೃತದೇಹಗಳನ್ನು ಹೊತ್ತು ತರುವ ಕಾರ್ಯದಲ್ಲಿ ನಾವು ಸಹಕರಿಸಿದೆವು. ಅಷ್ಟರಲ್ಲಿ ಒಂದು ಸಾಕುನಾಯಿ ನಿರಂತರವಾಗಿ ಒಂದೇ ಜಾಗದಲ್ಲಿ ನಿಂತು ಅಳುತ್ತಿರುವುದು ಗಮನಕ್ಕೆ ಬಂತು. ಅಲ್ಲಿನವರು ಹೇಳಿದಂತೆ ಅದು ತನ್ನ ಮನೆಯಿದ್ದ ಜಾಗದಲ್ಲೇ ನಿಂತಿತ್ತು. ಅದರ ಯಜಮಾನರು ಮಣ್ಣಿನಡಿ ಸಿಲುಕಿಕೊಂಡಿರಬಹುದೆಂಬ ಯೋಚನೆ ಮನಸ್ಸನ್ನು ತಟ್ಟಿತು.

ನಂತರ ಮುಂಡಕೈ ಭಾಗಕ್ಕೆ ತೆರಳಿ ಮಣ್ಣು, ಮರಗಳು ಮತ್ತು ಕಟ್ಟಡಗಳಡಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯುವ ಕಾರ್ಯದಲ್ಲಿ ಪಾಲ್ಗೊಂಡೆವು. ಒಂದೇ ಒಂದು ಮನೆಯೂ ಉಳಿದಿರಲಿಲ್ಲ. ಸಂಪೂರ್ಣ ಊರೇ ಮಣ್ಣಿನಡಿ ಹೂತುಹೋಗಿತ್ತು.

ಒಬ್ಬ ಸ್ಥಳೀಯರು, “ನೀವು ಈಗ ನಿಂತಿರುವುದು ಒಂದು ಕಟ್ಟಡದ ಎರಡನೇ ಮಹಡಿಯ ಮೇಲ್ಚಾವಣಿಯ ಮೇಲೆ” ಎಂದು ಹೇಳಿದಾಗ ನಿಜಕ್ಕೂ ಬೆಚ್ಚಿಬಿದ್ದೆವು. ಅಷ್ಟು ಪ್ರಮಾಣದ ಮಣ್ಣು ಆ ಪ್ರದೇಶವನ್ನು ಆವರಿಸಿತ್ತು.

ಬೆಳಿಗ್ಗೆ ಆರು ಗಂಟೆಗೆ ಆರಂಭವಾದ ಕಾರ್ಯ ಸಂಜೆವರೆಗೂ ಮುಂದುವರಿಯಿತು. ದಿನವಿಡೀ ಹೆಲಿಕಾಪ್ಟರ್‌ನಿಂದ ಎಸೆಯುತ್ತಿದ್ದ ಬ್ರೆಡ್, ಬಿಸ್ಕತ್ ಮತ್ತು ನೀರಿನ ಬಾಟಲಿಗಳೇ ನಮ್ಮ ಆಹಾರವಾಗಿದ್ದವು.

ಮರಳುವಾಗ ಹೊಳೆ ದಾಟುವ ಸಂದರ್ಭ ಮತ್ತೊಂದು ಅಪಾಯ ಎದುರಾಯಿತು. ರೋಪ್ ಹಿಡಿದು ಮಧ್ಯಭಾಗ ತಲುಪಿದ್ದಾಗ ಮೇಲ್ಭಾಗದಿಂದ ಭಾರೀ ನೀರು ಹರಿದು ಬರುತ್ತಿದೆ ಎಂದು ಮಿಲಿಟರಿ ಸಿಬ್ಬಂದಿ ಕೂಗಿದರು. ಕೆಲ ಕ್ಷಣಗಳು ಜೀವ ಕೈಯಲ್ಲೇ ಹಿಡಿದು ನಿಂತಂತಾಯಿತು. ಅದೃಷ್ಟವಶಾತ್ ನೀರಿನ ರಭಸ ಸ್ವಲ್ಪ ಕಡಿಮೆಯಾಗಿ ಸುರಕ್ಷಿತವಾಗಿ ದಡ ಸೇರಲು ಸಾಧ್ಯವಾಯಿತು.

ಆ ದಿನದ ಕಾರ್ಯಾಚರಣೆ ಮುಗಿದ ನಂತರ ನಾವು ವಿಶ್ರಾಂತಿ ಪಡೆದು ಮತ್ತೆ ಮೇಪಾಡಿಯತ್ತ ನಡೆದೆವು. ಸುಮಾರು 15 ಕಿಲೋಮೀಟರ್ ಕಾಲ್ನಡಿಗೆಯಲ್ಲೇ ಸಾಗಬೇಕಾಯಿತು. ದಾರಿಯುದ್ದಕ್ಕೂ ಆಂಬುಲೆನ್ಸ್‌ಗಳು ಓಡಾಡುತ್ತಿದ್ದವು. ಕೊನೆಗೆ ಒಂದು ಆಂಬುಲೆನ್ಸ್ ನಮ್ಮನ್ನು ಮೇಪಾಡಿಗೆ ಕರೆತಂದಿತು.

ಆ ಕಾರ್ಯಾಚರಣೆಯಲ್ಲಿ ನಮ್ಮ ತಂಡ ಹಲವು ಮೃತದೇಹಗಳನ್ನು ಪತ್ತೆಹಚ್ಚಿ ಸಾಗಿಸುವ ಕಾರ್ಯದಲ್ಲಿ ಸೈನ್ಯದೊಂದಿಗೆ ಕೈಜೋಡಿಸಿತು. ಇಬ್ಬರು ಜೀವಂತ ಮಹಿಳೆಯರನ್ನು ಸುರಕ್ಷಿತವಾಗಿ ರೋಪ್ ಮೂಲಕ ದಾಟಿಸಲು ಸಹ ನೆರವಾಯಿತು.

ನಾವು ತಲುಪುವಾಗ 91 ಮೃತದೇಹಗಳು ಪತ್ತೆಯಾಗಿದ್ದರೆ, ಮರಳುವ ವೇಳೆಗೆ ಸಂಖ್ಯೆ 250 ದಾಟಿತ್ತು. ಬಳಿಕ ಇನ್ನೂ ಅನೇಕ ಮೃತದೇಹಗಳು ಪತ್ತೆಯಾಗಿದ್ದವು. ನೂರಾರು ಜನರ ಸುಳಿವೇ ಸಿಗದೆ ಉಳಿದಿದ್ದರು.

ಈ ಎಲ್ಲದರ ನಡುವೆ ನನ್ನ ಮನಸ್ಸನ್ನು ಹೆಚ್ಚು ಕಾಡಿದ್ದು ಒಂದು ಪುಟ್ಟ ಮಗುವಿನ ಮೃತದೇಹ. ಅದನ್ನು ಕಂಡ ಕ್ಷಣದಿಂದ ನನ್ನ ಮನೆಯಲ್ಲಿದ್ದ ನನ್ನ ಮಗುವಿನ ಮುಖವೇ ನೆನಪಾಗುತ್ತಿತ್ತು. ಮನೆಗೆ ತಲುಪಿದ ತಕ್ಷಣ ಮಗುವನ್ನು ಗಟ್ಟಿಯಾಗಿ ತಬ್ಬಿಕೊಂಡೆ.

ಇಂದಿಗೂ ಆ ನೆನಪುಗಳು ಮಾಸಿಲ್ಲ. ವಯನಾಡಿಗೆ ಹೋಗುವ ಮುನ್ನ ಅದು ನನಗೆ ಸುಂದರ ಪ್ರವಾಸಿ ತಾಣವಾಗಿತ್ತು. ಆದರೆ ಆ ದುರಂತದ ನಂತರ ಅದು ನನ್ನ ಮನಸ್ಸಿನಲ್ಲಿ “ವಯನಾಡೋ… ಭಯನಾಡೋ…?” ಎಂಬ ಪ್ರಶ್ನೆಯಾಗಿ ಉಳಿದುಬಿಟ್ಟಿದೆ.

✒ಸಾಹುಕಾರ್ ಅಚ್ಚು

Leave a Reply

Discover more from

Subscribe now to keep reading and get access to the full archive.

Continue reading