ಅಭಿಜೀತ್ ಪಡ್ಕೆ ಅವರು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸ್ಥಾಪಿಸಿ, ದೆಹಲಿಯ ಜಂತರ್ ಮಂತರ್‌ನಲ್ಲಿ ಒಂದೂವರೆ ತಿಂಗಳ ಕಾಲ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಯಶಸ್ವಿಯಾಗಿ ಸಂಘಟಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಶಿಕ್ಷಣ ಸಚಿವರ ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರತಿಭಟನೆಯು ಸರ್ಕಾರದ ಆಡಳಿತದ ಮೇಲೆ ಬೀರಿದ ಪ್ರಭಾವದ ಕುರಿತು ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಈ ನಡುವೆ ಅಭಿಜೀತ್ ಪಡ್ಕೆ ಅವರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯೊಂದು ದೇಶದಲ್ಲಿ ಸಮಾನತೆ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಕುರಿತು ಗಂಭೀರ ಚರ್ಚೆಗೆ ಗ್ರಾಸವಾಗಿದೆ. ತಾವು ಪ್ರತಿಭಟನೆ ನಡೆಸಿ ಯಶಸ್ವಿಯಾದ ಸಂದರ್ಭದಲ್ಲಿ ಮಾತನಾಡಿರುವ ಅವರು, ತಾನು ಅಭಿಜೀತ್ ಆಗಿರದೇ ಖಾಲಿದ್ ಅಥವಾ ಇಬ್ರಾಹಿಮ್ ಆಗಿದ್ದರೆ ಈ ಹೊತ್ತಿಗೆ ಜೈಲಿನಲ್ಲಿರುತ್ತಿದ್ದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲದೆ, ಪ್ರತಿಭಟನೆ ಸಂಘಟಿಸುವುದು ದೂರದ ಮಾತು, ಕಾಕ್ರೋಚ್ ಜನತಾ ಪಾರ್ಟಿ ಎಂಬ ಸಂಘಟನೆಯನ್ನು ಹುಟ್ಟುಹಾಕಿದ ತಕ್ಷಣವೇ ತಮ್ಮ ಮೇಲೆ ಉಗ್ರರ ನಂಟಿನ ಕಟ್ಟುಕತೆಗಳನ್ನು ಕಟ್ಟಿ, ಕಾನೂನಿನ ಸರಪಳಿಗಳಿಗೆ ಸಿಲುಕಿಸಿ ಸೆರೆಮನೆಗೆ ನೂಕಲಾಗುತ್ತಿತ್ತು ಎಂದು ಅವರು ಉಮರ್ ಖಾಲಿದ್ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೆಯೂ ಈ ದೇಶದ ಪ್ರಸ್ತುತ ಸಾಮಾಜಿಕ ಹಾಗೂ ರಾಜಕೀಯ ವ್ಯವಸ್ಥೆಯ ತಾರತಮ್ಯದ ಧೋರಣೆಯತ್ತ ನೇರವಾದ ಬೊಟ್ಟು ಮಾಡಿದ್ದಾರೆ.
ಅವರ ಈ ಹೇಳಿಕೆಯು ಭಾರತದ ಇಂದಿನ ಸ್ಥಿತಿಗತಿಯಲ್ಲಿ ಪ್ರಜಾಪ್ರಭುತ್ವ, ಕಾನೂನಿನ ಅನ್ವಯಿಕೆ ಮತ್ತು ವ್ಯಕ್ತಿಗಳ ಧರ್ಮ ಅಥವಾ ಹಿನ್ನೆಲೆಯ ಆಧಾರದ ಮೇಲೆ ಸಮಾಜದಲ್ಲಿ ಕಾಣಿಸಿಕೊಳ್ಳುವ ಭಿನ್ನ ದೃಷ್ಟಿಕೋನಗಳ ಕುರಿತು ಆಳವಾದ ಚಿಂತನೆಗೆ ಹಚ್ಚುವಂತಿದೆ.









