ಸಂಪಾಜೆ: ಕಡೆಪಾಲದಲ್ಲಿ ವಿವಾಹಿತ ಯುವತಿ ಅನುಮಾನಾಸ್ಪದ ಸಾವು:  ಮೂವರ ವಿರುದ್ಧ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲು


ಸಂಪಾಜೆ: ಇಲ್ಲಿನ ಕಡೆಪಾಲದಲ್ಲಿ ವಿವಾಹಿತ ಯುವತಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಪತಿ ಮನೆಯವರ ಕಿರುಕುಳ ಹಾಗೂ ಕೊಲೆಯಿಂದಲೇ ಈ ಘಟನೆ ಸಂಭವಿಸಿದೆ ಎಂದು ಆರೋಪಿಸಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ದೂರು ದಾಖಲಾಗಿದೆ.
ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಸಾರೆಪುಣಿ ನಿವಾಸಿ ಜುಬೈದಾ ಅವರ ಪುತ್ರಿ ಫಾತಿಮತ್ ನಿಶಾನ ಮೃತಪಟ್ಟ ದುರ್ದೈವಿ. ಇವರನ್ನು ಸುಮಾರು ನಾಲ್ಕು ವರ್ಷಗಳ ಹಿಂದೆ ಸಂಪಾಜೆ ಗ್ರಾಮದ ಕಡೆಪಾಲ ನಿವಾಸಿ ಅನ್ಸಾರ್ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು.
ಜುಲೈ 18ರಂದು ರಾತ್ರಿ ಫಾತಿಮತ್ ನಿಶಾನ ಅವರು ತಮ್ಮ ತಾಯಿಗೆ ಕರೆ ಮಾಡಿ, ಪತಿಯ ಮನೆಯಲ್ಲಿ ಮಾವ, ಅತ್ತೆ ಹಾಗೂ ನಾದಿನಿಯಿಂದ ತಮಗೆ ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದರೆನ್ನಲಾಗಿದೆ. ಈ ಸಂಭಾಷಣೆಯ ಮಧ್ಯೆಯಷ್ಟೇ ಮಗಳ ಕೈಯಿಂದ ಫೋನ್ ಕಸಿದುಕೊಂಡ ಮಾವ ಅಲವಿ, ನಿನ್ನ ಮಗಳನ್ನು ಕೊಲ್ಲುತ್ತೇನೆ ಎಂದು ತಾಯಿಗೆ ಬೆದರಿಕೆ ಹಾಕಿದ್ದರೆಂದು ದೂರಿನಲ್ಲಿ ಆರೋಪಿಸಲಾಗಿದೆ.
ಕರೆ ಬಂದ ತಕ್ಷಣ ಆತಂಕಗೊಂಡ ತಾಯಿ ಜುಬೈದಾ ಅವರು ಮಗಳ ಮನೆಗೆ ಧಾವಿಸಿದಾಗ, ಫಾತಿಮತ್ ನಿಶಾನ ಮೃತಪಟ್ಟಿರುವುದು ಕಂಡುಬಂದಿದೆ.
ಕೌಟುಂಬಿಕ ಮನಸ್ತಾಪ ಹಾಗೂ ಗಂಡನ ಮನೆಯವರ ಕಿರುಕುಳವೇ ಮಗಳ ಸಾವಿಗೆ ಕಾರಣವಾಗಿದ್ದು, ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ತಾಯಿ ಜುಬೈದಾ ನೀಡಿದ ದೂರಿನ ಮೇರೆಗೆ ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಗಳಾದ ಮಾವ ಅಲವಿ, ಅತ್ತೆ ಆಯಿಷ ಹಾಗೂ ನಾದಿನಿ ಫಸೀಲಾ ಎಂಬುವವರ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ. 100/2026, ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 85, 103(1) ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading