ಬಿಸಿ ರೋಡು ಬಸ್ ಸ್ಟಾಂಡಿನಲ್ಲಿ ಯುವತಿಯ ಕೊಲೆ: ಹಂತಕ ಚೇತನ್ ಏಕಮುಖ ಪ್ರೀತಿ ಕೊಲೆಗೆ ಕಾರಣ?


ಬಿಸಿ ರೋಡ್: ಇಲ್ಲಿನ KSRTC ಬಸ್ ನಿಲ್ದಾಣದಲ್ಲಿ ಇಂದು ಜುಲಾಯಿ 16ರಂದು ಗುರುವಾರ ಯುವತಿಯೊಬ್ಬಳ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಹಂತಕ ಯುವತಿ ಸಂಬಂಧಿ ಚೇತನ್ ಕೃತ್ಯ ಎಸಗಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮೃತರನ್ನು ಕಕ್ಯಪದವು ನಿವಾಸಿ ಲಾವಣ್ಯ ಎಂದು ಗುರುತಿಸಲಾಗಿದೆ. ಇವರು ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಮ್ ಒಂದರಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಲಾವಣ್ಯ ಅವರು ಕೆಲಸ ಮುಗಿಸಿ ತಮ್ಮ ಊರಾದ ಕಕ್ಯಪದವು ಕಡೆಗೆ ತೆರಳಲು KSRTC ಬಸ್ ಹತ್ತಿ ಕುಳಿತಿದ್ದರು. ಈ ವೇಳೆ ತಮ್ಮ ಪಕ್ಕದಲ್ಲೇ ಅಪರಿಚಿತ ಯುವಕನೊಬ್ಬ ಬಂದು ಕುಳಿತಿದ್ದರಿಂದ ಆತಂಕಗೊಂಡ ಅವರು, ತಕ್ಷಣವೇ ತಮ್ಮ ಸಂಬಂಧಿಕರೊಬ್ಬರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. “ನನ್ನ ಪಕ್ಕದಲ್ಲಿ ಓರ್ವ ಯುವಕ ಕುಳಿತಿದ್ದಾನೆ” ಎಂದು ಹೇಳುತ್ತಿರುವಾಗಲೇ ಇದ್ದಕ್ಕಿದ್ದಂತೆ ಕರೆ ಕಡಿತಗೊಂಡಿದೆ ಎನ್ನಲಾಗಿದೆ.

ಬಸ್‌ನಲ್ಲಿದ್ದ ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿ ಪ್ರಕಾರ, ಫೋನ್ ಕರೆ ಕಡಿತಗೊಂಡ ಬೆನ್ನಲ್ಲೇ ಲಾವಣ್ಯ ಅವರು ಬಸ್‌ನಿಂದ ಕೆಳಗಿಳಿದಿದ್ದಾರೆ. ಇದನ್ನು ಗಮನಿಸಿದ ಯುವಕ ಕೂಡಲೇ ಆಕೆಯನ್ನು ಹಿಂಬಾಲಿಸಿಕೊಂಡು ಬಸ್‌ನಿಂದ ಇಳಿದಿದ್ದಾನೆ. ತಕ್ಷಣ ತನ್ನ ಬ್ಯಾಗ್‌ನಿಂದ ಹರಿತವಾದ ಕತ್ತಿಯನ್ನು ಹೊರತೆಗೆದು ಆಕೆಯ ಮೇಲೆ ದಾಳಿಗೆ ಮುಂದಾಗಿದ್ದಾನೆ. ಇದರಿಂದ ಗಾಬರಿಗೊಂಡ ಯುವತಿ ಪ್ರಾಣಭಯದಿಂದ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದರೂ, ದುಷ್ಕರ್ಮಿ ಆಕೆಯನ್ನು ಬೆನ್ನಟ್ಟಿ ಹೋಗಿ ತೀವ್ರವಾಗಿ ಇರಿದು ಕೊಲೆ ಮಾಡಿದ್ದಾನೆ. ಬಳಿಕ ಸ್ಥಳದಿಂದ ಓಡಿ ಹೋಗಿದ್ದಾನೆ.

ಬಸ್ ನಿಲ್ದಾಣದಂತಹ ಸಾರ್ವಜನಿಕ ಸ್ಥಳದಲ್ಲೇ ನಡೆದ ಈ ಭೀಕರ ಕೊಲೆಯಿಂದಾಗಿ ಪ್ರಯಾಣಿಕರು ಹಾಗೂ ಸ್ಥಳೀಯರಲ್ಲಿ ಕೆಲಕಾಲ ತೀವ್ರ ಆತಂಕ ಮತ್ತು ಸಾರ್ವಜನಿಕ ವಲಯದಲ್ಲಿ ಬಿಗುಬಿನ ವಾತಾವರಣ ನಿರ್ಮಾಣವಾಗಿತ್ತು. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಬಂಟ್ವಾಳ ಉಪವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳು, ನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೊಲೆಗೆ ನಿಖರ ಕಾರಣ ಏನೆಂಬುದರ ಬಗ್ಗೆ ತನಿಖೆ ಮುಂದುವರಿದಿದೆ. ಸದ್ಯ ಪೊಲೀಸರು ಆರೋಪಿ ಚೇತನ್ ಪತ್ತೆಗಾಗಿ ವ್ಯಾಪಕ ಶೋಧ ಕಾರ್ಯ ಕೈಗೊಂಡಿದ್ದಾರೆ.

ಕೊಲೆಯ ಸಿಸಿ ಟಿವಿ ದೃಶ್ಯ

https://www.facebook.com/share/v/1U7JWXtFLm/

Leave a Reply

Discover more from

Subscribe now to keep reading and get access to the full archive.

Continue reading