ಇಬ್ಬರು ವಿವಾಹಿತರ ನಾಪತ್ತೆ; ಸಂಗಾತಿಗಳಿಂದ ಪ್ರತ್ಯೇಕ ದೂರು: ನ್ಯಾಯಕ್ಕಾಗಿ ಪೊಲೀಸ್ ಕಮಿಷನರ್ ಮೊರೆ ಹೋದ ಯುವತಿ

ಸಾಕಾರ ನ್ಯೂಸ್: ಮಂಗಳೂರು ತಾಲೂಕಿನ ಕೊಳವೂರಿನ ಮುತ್ತೂರು ಸೈಟ್ ನಿವಾಸಿ ಲೋಲಾಕ್ಷಿ ಎಂಬುವವರು ತಮ್ಮ ಪತಿ ಪ್ರಜ್ವಲ್ ಆಚಾರ್ಯ ಕಳೆದ ಎರಡು ವಾರಗಳಿಂದ ನಾಪತ್ತೆಯಾಗಿರುವ ಕುರಿತು ಮಂಗಳೂರು ಪೊಲೀಸ್ ಕಮಿಷನರ್ ಹಾಗೂ ಬಜ್ಪೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಪಾಂಡೇಶ್ವರ ನಿವಾಸಿ ಶರ್ಮಿಳಾ ಎಂಬ ವಿವಾಹಿತ ಮಹಿಳೆಯ ಪಾತ್ರವಿದೆ ಎಂದು ಅವರು ಆರೋಪಿಸಿದ್ದಾರೆ.

ದೂರಿನ ಪ್ರಕಾರ, ಪ್ರಜ್ವಲ್ ಆಚಾರ್ಯ ಮತ್ತು ಶರ್ಮಿಳಾ ನಡುವೆ ಆಪ್ತ ಸಂಪರ್ಕವಿದ್ದು, ಶರ್ಮಿಳಾ ಪ್ರಜ್ವಲ್ ಅವರ ಬ್ಯಾಂಕ್ ಖಾತೆಗೆ ಹಲವು ಬಾರಿ ಹಣ ವರ್ಗಾವಣೆ ಮಾಡುತ್ತಿದ್ದರು ಎನ್ನಲಾಗಿದೆ. ಸುಮಾರು ಸುಮಾರು ₹1 ಲಕ್ಷ 30 ಸಾವಿರ ಸಾಲದ ಹಣ ತಮ್ಮ ಪತಿ ಪ್ರಜ್ವಲ್ ಶರ್ಮಿಳಾಗೆ ಕೊಡುವುದು ಬಾಕಿಯಿದೆ ಎಂದು ಲೋಲಾಕ್ಷಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಲೋಲಾಕ್ಷಿ ಅವರು ಸಾಕಾರ ನ್ಯೂಸ್ ಗೆ ಕೊಟ್ಟ  ಹೇಳಿಕೆಯಂತೆ, ತಮ್ಮ ವಿವಾಹದ ಸಂಪೂರ್ಣ ವೆಚ್ಚವನ್ನು ತಾವೇ ಭರಿಸಿದ್ದು, ಅದರಿಂದ ಈಗಾಗಲೇ ಸಾಲದ ಹೊರೆ ಎದುರಿಸುತ್ತಿದ್ದಾರೆ. ಇದೀಗ ಹತ್ತು ತಿಂಗಳ ಮಗುವಿನೊಂದಿಗೆ ಪತಿ ನಾಪತ್ತೆಯಾಗಿರುವುದರಿಂದ ಜೀವನ ನಿರ್ವಹಣೆ ಮತ್ತು ಮಗುವಿನ ಆರೈಕೆ ಕಷ್ಟಕರವಾಗಿದೆ ಮತ್ತು ನಾಪತ್ತೆಯಾದ ಮರುದಿನ ಪ್ರಜ್ವಲ್ ಅವರ ಫೋನ್ ಗೆ ಸುಬ್ರಹ್ಮಣ್ಯದ ಲಾಡ್ಜ್ ಒಂದರಿಂದ ಕರೆ ಬಂದಿದ್ದು ಪ್ರಜ್ವಲ್ ಫೋನ್ ಮನೆಯಲ್ಲಿ ಬಿಟ್ಟು ಹೋದ ಕಾರಣ ತಾನೇ ಕರೆ ಸ್ವೀಕರಿಸಿ ಮಾತನಾಡಿದ್ದು ಅಂದು ಪ್ರಜ್ವಲ್ ಜತೆ ಒಬ್ಬಳು ಯುವತಿ ಇದ್ದುದಾಗಿ ಲಾಡ್ಜ್ ಸಿಬ್ಬಂದಿ ತಿಳಿಸಿರುತ್ತಾರೆ ಇದನ್ನು ಪೋಲೀಸರಿಗೂ ತಿಳಿಸಿರುತ್ತೇನೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಈ ಪ್ರಕರಣದಲ್ಲಿ ಪ್ರಜ್ವಲ್ ಜತೆ ನಾಪತ್ತೆಯಾಗಿದ್ದಾರೆನ್ನಲಾದ  ಶರ್ಮಿಳಾ ಕೂಡ ವಿವಾಹಿತರಾಗಿದ್ದು, ಅವರಿಗೆ ಐದು ವರ್ಷದ ಮಗುವಿದೆ ಎಂದು ತಿಳಿದುಬಂದಿದೆ. ಶರ್ಮಿಳಾ ಅವರ ಪತಿಯೂ ತಮ್ಮ ಪತ್ನಿ ನಾಪತ್ತೆಯಾಗಿರುವ ಕುರಿತು ಪಾಂಡೇಶ್ವರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಜ್ವಲ್ ಆಚಾರ್ಯ ನಾಪತ್ತೆಯಾಗಿರುವ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದ್ದು, ಎರಡು ವಾರ ಕಳೆದರೂ ತನಿಖೆಯಲ್ಲಿ ನಿರೀಕ್ಷಿತ ಪ್ರಗತಿ ಕಂಡುಬಂದಿಲ್ಲ ಎಂದು ಲೋಲಾಕ್ಷಿ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮಂಗಳೂರು ಪೊಲೀಸ್ ಕಮಿಷನರ್ ಅವರನ್ನು ಭೇಟಿ ಮಾಡಿ ಶೀಘ್ರ ತನಿಖೆ ನಡೆಸಿ ತಮ್ಮ ಪತಿಯನ್ನು ಪತ್ತೆಹಚ್ಚಿ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.

ಸದ್ಯ ಎರಡೂ ಪ್ರಕರಣಗಳ ತನಿಖೆ ಮುಂದುವರಿದಿದ್ದು, ನಾಪತ್ತೆಯಾಗಿರುವ ಪ್ರಜ್ವಲ್ ಆಚಾರ್ಯ ಮತ್ತು ಶರ್ಮಿಳಾ ಅವರ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕುಟುಂಬಸ್ಥರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

 

Leave a Reply

Discover more from

Subscribe now to keep reading and get access to the full archive.

Continue reading