ಸೋನಂ, ಸಿಯಾ ಆಯ್ತು ಈಗ ರೂಬಿ! ಪತಿಯನ್ನು ಕೊಂದು ಬಾತ್‌ರೂಮ್‌ನಲ್ಲೇ ಹೂತಿಟ್ಟ ಪತ್ನಿ!

 

ಆಗ್ರಾ: ಸೋನಂ, ಸಿಯಾ ಪ್ರಕರಣಗಳ ಬೆನ್ನಲ್ಲೇ ದೇಶವನ್ನೇ ಮತ್ತೊಮ್ಮೆ ಬೆಚ್ಚಿಬೀಳಿಸುವಂತಹ ಕ್ರೂರ ಕೊಲೆ ಪ್ರಕರಣವೊಂದು ಉತ್ತರ ಪ್ರದೇಶದ ಆಗ್ರಾದಲ್ಲಿ ಬೆಳಕಿಗೆ ಬಂದಿದೆ. ಕೌಟುಂಬಿಕ ಕಲಹ, ನಂಬಿಕೆ ದ್ರೋಹದ ಪರಾಕಾಷ್ಠೆಯಂತಿರುವ ಈ ಘಟನೆಯಲ್ಲಿ, ಪತ್ನಿಯೇ ತನ್ನ ಪತಿಯನ್ನು ಅತ್ಯಂತ ವ್ಯವಸ್ಥಿತವಾಗಿ ಕೊಲೆ ಮಾಡಿ, ಶವವನ್ನು ಮನೆಯ ಬಾತ್‌ರೂಮ್ ನೆಲದಡಿಯೇ ಹೂತು ಹಾಕಿ 45 ದಿನಗಳ ಕಾಲ ನಾಟಕವಾಡಿದ್ದಾಳೆ!


ಆಗ್ರಾದ ನಿವಾಸಿ ಸುರೇಂದ್ರ ಶರ್ಮಾ ಸುಮಾರು ಒಂದೂವರೆ ತಿಂಗಳ ಹಿಂದೆ ನಾಪತ್ತೆಯಾಗಿದ್ದಾರೆ ಎಂದು ಆತನ ಪತ್ನಿ ರೂಬಿ ಶರ್ಮಾ ಪೊಲೀಸರಿಗೆ ದೂರು ನೀಡಿದ್ದಳು. ಅಷ್ಟೇ ಅಲ್ಲದೆ, ಪೊಲೀಸರೊಂದಿಗೆ ಸೇರಿ ಪತಿಯನ್ನು ಹುಡುಕುವ ನಾಟಕವಾಡಿದ್ದಳು. ನೆರೆಹೊರೆಯವರ ಮುಂದೆ ಕಣ್ಣೀರು ಹಾಕುತ್ತಾ ಎಲ್ಲರ ಸಹಾನುಭೂತಿ ಗಳಿಸಿದ್ದಳು. ಆದರೆ, ಆಕೆಯ ಹೇಳಿಕೆಗಳಲ್ಲಿದ್ದ ಗೊಂದಲಗಳಿಂದಾಗಿ ಸುರೇಂದ್ರ ಅವರ ಸಹೋದರಿಗೆ ಅನುಮಾನ ಮೂಡಿ, ಪೊಲೀಸರಿಗೆ ಮರುಪರಿಶೀಲಿಸುವಂತೆ ಕೋರಿದರು.


ಕುಟುಂಬಸ್ಥರ ಅನುಮಾನದ ಮೇರೆಗೆ ಪೊಲೀಸರು ಮನೆಯಲ್ಲಿ ತೀವ್ರ ಶೋಧ ನಡೆಸಿದಾಗ ಬಾತ್‌ರೂಮ್‌ನಲ್ಲಿ ಹೊಸದಾಗಿ ಅಳವಡಿಸಲಾಗಿದ್ದ ಟೈಲ್ಸ್ ಕಂಡು ಸಂಶಯ ಮೂಡಿದೆ. ತಕ್ಷಣ ಆ ಜಾಗವನ್ನು ಒಡೆದು ಕಾಂಕ್ರೀಟ್ ಅಗೆದಾಗ ಅಡಿಯಲ್ಲಿ ಹೂತಿದ್ದ ಸುರೇಂದ್ರ ಶರ್ಮಾ ಅವರ ಅಸ್ಥಿಪಂಜರ ಪತ್ತೆಯಾಗಿದೆ! ಸದ್ಯ ಶವವನ್ನು ವಶಕ್ಕೆ ಪಡೆದಿರುವ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.


ಪೊಲೀಸರ ತೀವ್ರ ವಿಚಾರಣೆ ಎದುರಿಸಲಾಗದೆ ರೂಬಿ ಶರ್ಮಾ ಕೊನೆಗೂ ಸತ್ಯ ಕಕ್ಕಿದ್ದಾಳೆ. ಮೇ 18ರಂದು ಪತಿಗೆ ಪಾಯಸದಲ್ಲಿ ಹೆಚ್ಚಿನ ಪ್ರಮಾಣದ ನಿದ್ದೆ ಮಾತ್ರೆಗಳನ್ನು ಬೆರೆಸಿ ನೀಡಿದ್ದಳು. ಮದ್ಯದ ಚಟ ಹೊಂದಿದ್ದ ಸುರೇಂದ್ರ, ಎಂದಿನಂತೆ ನಿದ್ರಿಸುತ್ತಿದ್ದಾರೆ ಅಂದುಕೊಂಡ ಇಬ್ಬರು ಹೆಣ್ಣು ಮಕ್ಕಳಿಗೂ ತಂದೆಯ ಕೊಲೆಯಾಗಿರುವುದು ತಿಳಿಯಲೇ ಇಲ್ಲ. ಮರುದಿನ ಮಕ್ಕಳನ್ನು ತಂಗಿ/ಸಹೋದರನ ಮನೆಗೆ ಕಳುಹಿಸಿ, ರೂಬಿ ಈ ಕೃತ್ಯ ಎಸಗಿದ್ದಾಳೆ.

ಸುರೇಂದ್ರ ಅವರ ತಂದೆಯ ಪಿಂಚಣಿ ಹಣ ಜಮೆಯಾಗುತ್ತಿದ್ದ ಖಾತೆಯ ಎಟಿಎಂ ಕಾರ್ಡ್ ಸುರೇಂದ್ರ ಬಳಿಯೇ ಇರುತ್ತಿತ್ತು. ಅವರು ನಾಪತ್ತೆಯಾದ ಮೇಲೂ ಖಾತೆಯಿಂದ ಹಣ ಡ್ರಾ ಆಗುತ್ತಿರುವುದನ್ನು ಗಮನಿಸಿದ ಸಹೋದರ ಅನಿಲ್ ಶರ್ಮಾ ಪೊಲೀಸರಿಗೆ ಮಾಹಿತಿ ನೀಡಿದರು. ಇದೇ ತನಿಖೆಗೆ ದೊಡ್ಡ ತಿರುವು ನೀಡಿತು.


ಉಪ ಪೊಲೀಸ್ ಆಯುಕ್ತ ಸಯ್ಯದ್ ಅಲಿ ಅಬ್ಬಾಸ್ ಮಾತನಾಡಿ, “ಮಹಿಳೆಯೊಬ್ಬಳೇ ವ್ಯಕ್ತಿಯನ್ನು ಕೊಂದೂ, ಮನೆಯೊಳಗೆ ಗುಂಡಿ ತೋಡಿ ಶವ ಹೂಳುವುದು ಸುಲಭದ ಕೆಲಸವಲ್ಲ. ಹಾಗಾಗಿ ಈ ಕೃತ್ಯದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ” ಎಂದಿದ್ದಾರೆ.

ಸೋನಂ, ಸಿಯಾ ಮತ್ತು ಈಗ ರೂಬಿ ಶರ್ಮಾ – ಈ ಸರಣಿ ಘಟನೆಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿವೆ. ನೂರು ವರ್ಷಗಳ ದಾಂಪತ್ಯದ ಕನಸು ಕಾಣಬೇಕಾದ ಇಂದಿನ ತಲೆಮಾರು, ಇಂತಹ ಕ್ರೂರ ಘಟನೆಗಳನ್ನು ನೋಡಿ ಮದುವೆ ಎಂಬ ವ್ಯವಸ್ಥೆಯಿಂದಲೇ ದೂರ ಸರಿಯುವಂತಹ ಭೀತಿಯ ವಾತಾವರಣ ನಿರ್ಮಾಣವಾಗುತ್ತಿದೆ. ನಂಬಿಕೆಯೇ ಜೀವಾಳವಾಗಿರಬೇಕಾದ ಸಂಸಾರದಲ್ಲಿ, ಸಂಗಾತಿಯೇ ಯಮನಾಗುತ್ತಿರುವ ಇಂತಹ ವಿಕೃತ ಮನಸ್ಥಿತಿಗಳು ಇಡೀ ಮಾನವ ಕುಲ ತಲೆತಗ್ಗಿಸುವಂತೆ ಮಾಡಿದೆ

Leave a Reply

Discover more from

Subscribe now to keep reading and get access to the full archive.

Continue reading