ಮದುವೆ ಎನ್ನುವುದು ಇಬ್ಬರು ನೆಮ್ಮದಿಯಾಗಿ ಬದುಕಲು ಹೊರತಾಗಿ ನಾಲ್ಕು ಜನರಿಗೆ ತೋರಿಸಲು ಅಲ್ಲ!

✒ಸಾಹುಕಾರ್ ಅಚ್ಚು

ಹರ್ಷಿಯ ಎಂಬ ಮಲಯಾಳೀ ವ್ಲಾಗರ್ ಒಬ್ಬಳ ಚಿನ್ನ ರಹಿತ ವಿವಾಹದ ನಿರ್ಧಾರವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.ಚಿನ್ನ ಮದುವೆಗೆ ಖಡ್ಡಾಯ ಎಂಬಂತಿರುವಾಗ ಚಿನ್ನವನ್ನೇ ಪೂರ್ಣ ತ್ಯಜಿಸಿ  ಮದುವೆ ಆಗಿದ್ದಾರೆ. ಇತರ ಆಡಂಬರಗಳು ಅಲ್ಲಿದ್ದರೂ ಚಿನ್ನ ಇಲ್ಲದ ಮದುವೆ ಜನರನ್ನು ಬೇರೊಂದು ರೀತಿ ಚಿಂತಿಸುವ ರೀತಿ ಮಾಡಿದೆ. ಸಾಂಪ್ರದಾಯಿಕ  ಆಡಂಬರಗಳು,  ದುಬಾರಿ ಮೆಹಂದಿ ಶಾಸ್ತ್ರಗಳು ಮತ್ತು ಒಂದು ವಾರದ ಕಾಲ ನಡೆಯುವ ಟು ಬಿ, ಹಳದಿ ಕಪ್ಪು ಮದುವೆಗಳ  ಅಬ್ಬರವಿಲ್ಲದೆ ನಡೆಯುವ ಮದುವೆ ಹೀಗೇ ಕ್ರಾಂತಿಕಾರಿ ನಡೆಗಳು ಕೇವಲ ಒಂದು ವೈಯಕ್ತಿಕ ಆಯ್ಕೆಯಾಗಿ ಉಳಿದಿಲ್ಲ. ಬದಲಿಗೆ, ಇದು ಪ್ರಸ್ತುತ ಸಮಾಜದಲ್ಲಿ ಮದುವೆ ಎಂಬ ಕಾರ್ಯವನ್ನು ಆವರಿಸಿಕೊಂಡಿರುವ ಪ್ರದರ್ಶನ ಸಂಸ್ಕೃತಿಯನ್ನು ಪ್ರಶ್ನಿಸುವ ಒಂದು ಆರ್ಥಿಕ ಮತ್ತು ಸಾಮಾಜಿಕ ವಿದ್ಯಮಾನವಾಗಿ ಹೊರಹೊಮ್ಮಿದೆ.

ಇಂದಿನ ದಿನಗಳಲ್ಲಿ ಮದುವೆ ಎನ್ನುವುದು ಇಬ್ಬರು ವ್ಯಕ್ತಿಗಳ ಮಿಲನಕ್ಕಿಂತ ಹೆಚ್ಚಾಗಿ ಒಂದು ಬೃಹತ್ ಆರ್ಥಿಕ ಪ್ರದರ್ಶನವಾಗಿ ಮಾರ್ಪಟ್ಟಿದೆ. ವರನ ವಾರ್ಷಿಕ ಆದಾಯ, ಆಸ್ತಿಯ ಮೌಲ್ಯ ಮತ್ತು ವಧುವಿನ ಕಡೆಯವರು ಮಾಡುವ ಆಡಂಬರದ ಖರ್ಚುಗಳೇ ಮದುವೆಯ ಯಶಸ್ಸಿನ ಮಾನದಂಡಗಳಾಗುತ್ತಿವೆ. ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಕುಟುಂಬಗಳು ಸಮಾಜಕ್ಕೆ ತೋರಿಸಿಕೊಳ್ಳುವ ಸಲುವಾಗಿ ತಮ್ಮ ಜೀವನದಲ್ಲಿ ದುಡಿದದ್ದನ್ನೆಲ್ಲ ಸುರಿದು ನಂತರ ಬದುಕಿ ಮುಗಿಯುವ ತನಕ  ಸಾಲದ ಸುಳಿಗೆ ಸಿಲುಕುತ್ತಿರುವುದಕ್ಕೆ ಈ ಸಮಾಜ ನಿಗದಿಪಡಿಸಿದ ಚೌಕಟ್ಟುಗಳೇ ಕಾರಣ. ವೆಡ್ಡಿಂಗ್ ಪ್ಲಾನರ್‌ಗಳು, ಪ್ರಿ-ವೆಡ್ಡಿಂಗ್ ಶೂಟ್‌ಗಳು ಮತ್ತು ದುಬಾರಿ ಗ್ಯಾಜೆಟ್‌ಗಳ ಸಂಸ್ಕೃತಿಯನ್ನು ಇಂದಿನ ಮಾರುಕಟ್ಟೆಯು ಒಂದು ಅನಿವಾರ್ಯತೆ ಎಂಬಂತೆ ಬಿಂಬಿಸುತ್ತಿದೆ.


ಇತಿಹಾಸದಲ್ಲಿ ಪ್ರತಿ ಕಾಲಘಟ್ಟದಲ್ಲೂ ಮದುವೆಗೆ ಕೆಲವು ಸಾಮಾಜಿಕ ನಿಯಮಗಳಿದ್ದವು. ಆದರೆ, ಇಂದಿನ ಯುವ ಪೀಳಿಗೆಯಲ್ಲಿ, ವಿಶೇಷವಾಗಿ ಹೆಣ್ಣುಮಕ್ಕಳಲ್ಲಿ ಈ ಬಾಹ್ಯ ಆಕರ್ಷಣೆಗಳ ಆಚೆಗಿನ ಚಿಂತನೆ ವಿಸ್ತಾರವಾಗುತ್ತಿದೆ. ಕೇವಲ ಚರ್ಮದ ಬಣ್ಣ ಅಥವಾ ಬ್ಯಾಂಕ್ ಬ್ಯಾಲೆನ್ಸ್ ನೋಡಿ ಸಂಗಾತಿಯನ್ನು ಆಯ್ಕೆ ಮಾಡುವ ಹಳೆಯ ಪದ್ಧತಿಯ ವಿರುದ್ಧ ತಾರ್ಕಿಕ ಅಸಮಾಧಾನ ವ್ಯಕ್ತವಾಗುತ್ತಿದೆ. ವ್ಯಕ್ತಿಯ ಜಗತ್ತನ್ನು ನೋಡುವ ದೃಷ್ಟಿಕೋನ, ಶಿಕ್ಷಣಕ್ಕೆ ನೀಡುವ ಗೌರವ ಮತ್ತು ಪರಸ್ಪರರ ಮನಸ್ಥಿತಿಗೆ ಆದ್ಯತೆ ನೀಡುವ ಹೊಸ ಆಲೋಚನೆಗಳು ಆರಂಭವಾಗಿವೆ.

ಮದುವೆಯ ನಂತರದ ಬದುಕಿಗೆ ಬೇಕಿರುವುದು ಸಮಾಜದ ಮೆಚ್ಚುಗೆಯಲ್ಲ, ಬದಲಿಗೆ ಇಬ್ಬರು ವ್ಯಕ್ತಿಗಳ ನಡುವಿನ ಮಾನಸಿಕ ನೆಮ್ಮದಿ ಮತ್ತು ಸಾಮರಸ್ಯ ಎಂಬ ಪ್ರಾಯೋಗಿಕ ಜ್ಞಾನ ಇಂದಿನ ತಲೆಮಾರಿನಲ್ಲಿ ಹೆಚ್ಚಾಗುತ್ತಿದೆ. ಆದಾಗ್ಯೂ, ಇಂತಹ ಮುಕ್ತ ಆಲೋಚನೆ ಉಳ್ಳವರಿಗೆ ಇಂದಿನ ಸಮಾಜ ಮತ್ತು ಸುತ್ತಲಿನ ಜನರ ರೂಢಿಗತ ನಿರೀಕ್ಷೆಗಳೇ ದೊಡ್ಡ ಬಿಕ್ಕಟ್ಟಾಗಿ ಪರಿಣಮಿಸಿವೆ. ತಮಗೆ ನೆಮ್ಮದಿ ನೀಡುವ ಸಂಗಾತಿಯನ್ನು ಕಂಡುಕೊಂಡ ನಂತರವೂ ಸಮಾಜವು ಅವರಲ್ಲಿ ತಪ್ಪು ಕೊರತೆಗಳನ್ನು ಹುಡುಕುವ ಪ್ರವೃತ್ತಿಯನ್ನು ಹೊಂದಿದೆ.

ಇತಿಹಾಸವನ್ನು ಗಮನಿಸಿದರೆ ಆಡಂಬರವಿಲ್ಲದ ಮತ್ತು ಪ್ರಬುದ್ಧ ವಿವಾಹಗಳಿಗೆ ಶ್ರೇಷ್ಠ ಉದಾಹರಣೆಗಳು ಸಿಗುತ್ತವೆ. ಇಸ್ಲಾಮಿಕ್ ಇತಿಹಾಸದಲ್ಲಿ ಬರುವ 40 ವರ್ಷದ ಯಶಸ್ವಿ ಉದ್ಯಮಿ ಖದೀಜಾ ಬೀವಿ (ರ) ಮತ್ತು 25 ವರ್ಷದ ಮುಹಮ್ಮದ್ ಪೈಗಂಬರ್ (ಸ) ಅವರ ವಿವಾಹವು ಸಾಮಾಜಿಕ ಅಂತಸ್ತು, ವಯಸ್ಸು ಮತ್ತು ಆರ್ಥಿಕತೆಯ ಎಲ್ಲಾ ರೂಢಿಗತ ನಿಯಮಗಳನ್ನು ಬದಿಗೊತ್ತಿದ ಒಂದು ಐತಿಹಾಸಿಕ ನಿದರ್ಶನವಾಗಿದೆ.

ಇಂತಹ ಶ್ರೇಷ್ಠ ಇತಿಹಾಸಗಳನ್ನು ಸಮಾಜ ಒಪ್ಪಿಕೊಳ್ಳುತ್ತದೆಯಾದರೂ, ಪ್ರಾಯೋಗಿಕ ಜೀವನಕ್ಕೆ ಬಂದಾಗ ಅದೇ ಹಳೆಯ ಸಂಪ್ರದಾಯದ ಚೌಕಟ್ಟನ್ನು ಹೇರಲು ಪ್ರಯತ್ನಿಸುವುದು ಒಂದು ವೈರುಧ್ಯವಾಗಿದೆ.
ಹರ್ಷಿಯ ಅವರ ವಿವಾಹದ ಮಾದರಿಯು ಸಮಾಜದಲ್ಲಿ ಹೊಸ ಚರ್ಚೆಯೊಂದನ್ನು ಹುಟ್ಟುಹಾಕಿದೆ. ಮದುವೆ ಎನ್ನುವುದು ಕೃತಕ ಫೋಟೋ ಶೂಟ್‌ಗಳು ಮತ್ತು ಆಭರಣಗಳ ಪ್ರದರ್ಶನ ಮೈದಾನವಾಗುವ ಬದಲು, ಇಬ್ಬರು ವ್ಯಕ್ತಿಗಳು ಮುಕ್ತವಾಗಿ ತಮ್ಮ ಜೀವನವನ್ನು ಕಟ್ಟಿಕೊಳ್ಳುವ ಸರಳ ವೇದಿಕೆಯಾಗಬೇಕು ಎಂಬ ಆಲೋಚನೆಗೆ ಇದು ಬಲ ನೀಡಿದೆ. ತೋರ್ಪಡಿಕೆಯ ಐಷಾರಾಮಿ ಸಂಸ್ಕೃತಿಯನ್ನು ಮೀರಿ ಪ್ರೀತಿ ಮತ್ತು ಸರಳತೆಯನ್ನು ಆಚರಿಸುವ ಇಂತಹ ನಡೆಗಳು ಭವಿಷ್ಯದಲಿ ಸಾಮಾಜಿಕ ಬದಲಾವಣೆ ತರಲಿ. ಇಂಥಾ ಕ್ರಾಂತಿಕಾರಿ ನಡೆಗಳು ಟ್ರೆಂಡ್ ಆಗಲಿ.

Leave a Reply

Discover more from

Subscribe now to keep reading and get access to the full archive.

Continue reading