ಉಡುಪಿ/ಗೋವಾ: ಎರಡು-ಮೂರು ದಿನಗಳ ಹಿಂದೆ ಗೋವಾದಲ್ಲಿ ಶವವಾಗಿ ಪತ್ತೆಯಾಗಿದ್ದ ಉಡುಪಿಯ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಅವರ ಮಾಜಿ ಆಪ್ತ ಸಹಾಯಕ ಸಂದೀಪ್ ಸಾಲ್ಯಾನ್ ಅವರ ನಿಗೂಢ ಸಾವು ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆರಂಭದಲ್ಲಿ ನಿಗೂಢ ಸಾವು ಎಂದು ಭಾವಿಸಲಾಗಿದ್ದ ಈ ಪ್ರಕರಣ, ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಒಂದು ವ್ಯವಸ್ಥಿತ ಕೊಲೆ ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ.
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾದ ಕ್ಯಾಲಂಗುಟ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಪ್ರಕರಣದ ಮುಖ್ಯ ಆರೋಪಿ ಎನ್ನಲಾದ ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಮಹಿಳೆಯನ್ನು ಮೂಲತಃ ಮಂಗಳೂರಿನ ನಿವಾಸಿಯಾಗಿದ್ದು, ಸದ್ಯ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಅಕ್ಷತಾ ಎಂದು ಗುರುತಿಸಲಾಗಿದೆ. ಈಕೆ ಸಂದೀಪ್ ಸಾಲ್ಯಾನ್ ಕೊಲೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಶಂಕೆ ವ್ಯಕ್ತವಾಗಿದ್ದು, ಗೋವಾದ ಕ್ಯಾಲಂಗುಟ್ ಪೊಲೀಸರು ಈಕೆಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಸಂದೀಪ್ ಸಾಲ್ಯಾನ್ ಅವರ ಸಾವು ಕೇವಲ ನಿಗೂಢ ಸಾವಲ್ಲ, ಇದರ ಹಿಂದೆ ವ್ಯವಸ್ಥಿತ ಸಂಚು ಅಡಗಿದೆ ಎಂಬುದು ತನಿಖೆಯಿಂದ ಸ್ಪಷ್ಟವಾಗಿದೆ. ಆದರೆ, ಈ ಕೊಲೆಗೆ ನಿಖರವಾದ ಕಾರಣವೇನು? ಆರೋಪಿ ಅಕ್ಷತಾ ಹಾಗೂ ಸಂದೀಪ್ ಸಾಲ್ಯಾನ್ ನಡುವೆ ಇದ್ದ ಸಂಬಂಧವೇನು? ಕೊಲೆಯ ಹಿಂದೆ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರದ ಹುಡುಕಾಟದಲ್ಲಿದ್ದಾರೆ ಪೊಲೀಸರು.
ಸದ್ಯ ಪ್ರಕರಣದ ಹಿನ್ನೆಲೆ ಹಾಗೂ ಕೊಲೆಗೆ ಕಾರಣವಾದ ಅಂಶಗಳ ಕುರಿತು ಗೋವಾ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಪೋಟಕ ಮಾಹಿತಿಗಳು ಹೊರಬೀಳುವ ಸಾಧ್ಯತೆ ಇದೆ.








