ಸುಳ್ಯ/ಮಡಿಕೇರಿ: ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿಭಾಗವಾದ ಕಲ್ಮಕಾರು ಹಾಗೂ ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಪಂಚಾಯ್ತಿ ವ್ಯಾಪ್ತಿಯ ಶೀರಡ್ಕ ಪರಿಸರದಲ್ಲಿ ಗಾಂಜಾ ಜಾಲದ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದು, ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ.ದಕ್ಷಿಣ ಕನ್ನಡದ ಕಲ್ಮಕಾರಿನಿಂದ ಕೇವಲ 7 ಕಿ.ಮೀ ದೂರದಲ್ಲಿರುವ, ಕೊಡಗು ಜಿಲ್ಲೆಗೆ ಒಳಪಡುವ ಕಡಮ್ಮಕಲ್ಲು ಎಸ್ಟೇಟ್ ಸಮೀಪದ ಶೀರಡ್ಕದಲ್ಲಿ ಈ ಬೆಳವಣಿಗೆ ನಡೆದಿದೆ.

ಇಲ್ಲಿನ ಸ್ಥಳೀಯ ವ್ಯಕ್ತಿಯೊಬ್ಬನಿಗೆ ಸೇರಿದ ಜಾಗದಲ್ಲಿ ಗಾಂಜಾ ಪತ್ತೆಯಾಗಿದೆ ಎನ್ನಲಾಗಿದ್ದು, ದಾಳಿಯ ಸುಳಿವು ಅರಿತು ಮುಖ್ಯ ಆರೋಪಿ ಘಟ್ಟ ಹತ್ತಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ, ಸ್ಥಳದಲ್ಲಿದ್ದ ಆತನ ಸಹೋದರ ಹಾಗೂ ಗಾಂಜಾ ಸೇವನೆಯಲ್ಲಿ ತೊಡಗಿದ್ದ ಇತರ ಮೂರ್ನಾಲ್ಕು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಸ್ಥಳೀಯವಾಗಿ ಮಾತುಗಳು ಕೇಳಿಬರುತ್ತಿದೆ.

ಕಳೆದ ಕೆಲ ದಿನಗಳಿಂದ ಕಲ್ಮಕಾರು ಮತ್ತು ಕೊಲ್ಲಮೊಗ್ರ ಭಾಗದಲ್ಲಿ ಪೊಲೀಸರ ಸಂಚಾರ ದಟ್ಟವಾಗಿದ್ದು, ಸ್ಥಳೀಯರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಸದ್ಯದ ಮಾಹಿತಿ ಪ್ರಕಾರ, ಬಂದಿರುವುದು ಸುಬ್ರಹ್ಮಣ್ಯ ಪೊಲೀಸರಂತೂ ಅಲ್ಲ ಎನ್ನುವುದು ಖಚಿತವಾಗಿದೆ.

ಬಂಧಿತರ ನಿಖರ ಸಂಖ್ಯೆ ಹಾಗೂ ವಶಪಡಿಸಿಕೊಂಡ ಗಾಂಜಾ ಪ್ರಮಾಣದ ಅಧಿಕೃತ ಅಂಕಿ-ಅಂಶಗಳು ಇನ್ನಷ್ಟೇ ಹೊರಬರಬೇಕಿದೆ.ಕಲ್ಮಕಾರಿನಿಂದ ಕೊಡಗಿನ ಗಾಳಿಬೀಡಿಗೆ ರಸ್ತೆ ಸಂಪರ್ಕವಿಲ್ಲದ ಕಾರಣ, ಈ ದುರ್ಗಮ ಕಾಡಂಚಿನ ಪ್ರದೇಶವು ಸಮಾಜವಿರೋಧಿ ಶಕ್ತಿಗಳ ಆಶ್ರಯ ತಾಣವಾಗಿ ಮಾರ್ಪಡುತ್ತಿದೆ. ಹೊರಗಿನಿಂದ ಬರುವ ಅಪರಿಚಿತರು ಇಲ್ಲಿನ ಸ್ಥಳೀಯರೊಂದಿಗೆ ಕೈಜೋಡಿಸಿ ಈ ದಂಧೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಈ ಭಾಗದಲ್ಲಿ ಗಾಂಜಾ ದಟ್ಟ ಹೊಗೆ ಏಳುತ್ತಿರುವುದನ್ನು ಗಮನಿಸಿದರೆ, ಈ ಅರಣ್ಯದ ಒಳಭಾಗದಲ್ಲಿ ಗಾಂಜಾ ಕೃಷಿ ನಡೆಯುತ್ತಿದೆಯೇ ಎಂಬ ಬಲವಾದ ಸಂಶಯಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ. ಪೊಲೀಸರ ಬೇಟೆ ಮುಂದುವರಿದಿದ್ದು, ಹಲವರು ತಲೆಮರೆಸಿಕೊಂಡಿದ್ದಾಗಿ ತಿಳಿದುಬಂದಿದೆ.



