ಸಾಮಾಜಿಕ ಜಾಲತಾಣ ‘ಇನ್‌ಸ್ಟಾಗ್ರಾಮ್’ನಲ್ಲಿ ಶುರುವಾದ ಪರಿಚಯ, ಪ್ರೀತಿಗೆ ತಿರುಗಿ ಕೊನೆಗೆ ಯುವತಿಯೊಬ್ಬಳ ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ. ಹಾಸನ ಜಿಲ್ಲೆಯ ಸಕಲೇಶಪುರ ಮೂಲದ ಅನುಷಾ ಕೊಲೆಯಾದ ದುರ್ದೈವಿ. ಈಕೆಯನ್ನು ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಆಕೆಯ ಪ್ರೇಮಿ ಶರತ್ ಎಂಬಾತನೇ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ.


ಮೃತ ಅನುಷಾಗೆ ತಂದೆ-ತಾಯಿ ಇರಲಿಲ್ಲ. ಆಕೆಗೆ ಆಕೆಯ ಅಕ್ಕನೇ ಸರ್ವಸ್ವವಾಗಿದ್ದರು. ಆದರೆ, ಇನ್‌ಸ್ಟಾಗ್ರಾಮ್‌ನಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ಮೂಲದ, ಬೆಂಗಳೂರಿನಲ್ಲಿ ವಾಟರ್ ಟ್ಯಾಂಕ್ ಚಾಲಕನಾಗಿದ್ದ ಶರತ್ ಪರಿಚಯವಾಗಿದೆ. ಅತೀ ಕಡಿಮೆ ಅವಧಿಯಲ್ಲೇ ಇವರಿಬ್ಬರ ಪರಿಚಯ ಪ್ರೀತಿಗೆ ತಿರುಗಿದೆ. ಶರತ್‌ನ ಮಾತುಗಳನ್ನು ನಂಬಿ ದಾರಿ ತಪ್ಪಿದ ಅನುಷಾ, ಬೆಂಗಳೂರಿಗೆ ಬಂದು ಆತನ ಜೊತೆ ವಾಸಿಸಲು ಆರಂಭಿಸಿದ್ದಳು. ಕಳೆದ 6 ತಿಂಗಳಿಂದ ಇಬ್ಬರೂ ಒಟ್ಟಿಗೆ ಒಂದೇ ಮನೆಯಲ್ಲಿ ಸಂಸಾರ ನಡೆಸುತ್ತಿದ್ದರು.



ಬೆಳಗ್ಗೆಯಿಂದ ಸಂಜೆವರೆಗೂ ಶರತ್ ಕೆಲಸಕ್ಕೆ ಹೋದಾಗ ಅನುಷಾ ಮನೆಯಲ್ಲೇ ಇರುತ್ತಿದ್ದಳು. ಆದರೆ ಇತ್ತೀಚೆಗೆ ಈಕೆ ವಾರಕ್ಕೊಮ್ಮೆ ಸ್ನೇಹಿತರ ಜೊತೆ ಟ್ರಿಪ್ ಹೋಗಲು ಶುರು ಮಾಡಿದ್ದಳು. ಇದೇ ವಿಚಾರವಾಗಿ ಇಬ್ಬರ ನಡುವೆ ತೀವ್ರ ಭಿನ್ನಾಭಿಪ್ರಾಯ ಮೂಡಿ, ಗಲಾಟೆಗಳು ನಡೆಯುತ್ತಿದ್ದವು. ದಿನಾಲೂ ಜಗಳವಾಗುತ್ತಿದ್ದರಿಂದ ಬೇಸತ್ತ ಅನುಷಾ, ಇತ್ತೀಚೆಗೆ ಶರತ್‌ನನ್ನು ಬಿಟ್ಟು ತನ್ನ ಅಕ್ಕನ ಮನೆಗೆ ಹೋಗಿ ಆಶ್ರಯ ಪಡೆದಿದ್ದಳು.
ಅಕ್ಕನ ಮನೆಗೆ ಹೋಗಿದ್ದ ಅನುಷಾಳನ್ನು ಹುಡುಕಿಕೊಂಡು ಶರತ್ ಅಲ್ಲಿಗೂ ಹೋಗಿದ್ದಾನೆ. ಅಲ್ಲಿ ಆಕೆಗೆ ಇಲ್ಲಸಲ್ಲದ ಮಾತುಗಳನ್ನು ಹೇಳಿ, ಮನವೊಲಿಸಿ ಮತ್ತೆ ತನ್ನ ರೂಮ್‌ಗೆ ವಾಪಸ್ ಕರೆದುಕೊಂಡು ಬರುತ್ತಿದ್ದ. ಆದರೆ, ಬರುವ ದಾರಿ ಮಧ್ಯೆಯೇ ಇಬ್ಬರ ನಡುವೆ ಮತ್ತೆ ಅದೇ ಟ್ರಿಪ್ ವಿಚಾರವಾಗಿ ತಗಾದೆ ಎದ್ದಿದೆ. ರೂಮ್‌ಗೆ ಬರುತ್ತಿದ್ದಂತೆ ಇಬ್ಬರ ನಡುವಿನ ಜಗಳ ವಿಕೋಪಕ್ಕೆ ಹೋಗಿದೆ.

ಕೋಪದ ಕೈಗೆ ಬುದ್ಧಿ ಕೊಟ್ಟ ಶರತ್, ರೂಮ್‌ಗೆ ಬಂದ ತಕ್ಷಣ ಅನುಷಾಳ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ಆಕೆ ಪ್ರಾಣ ಬಿಡುತ್ತಿದ್ದಂತೆ ಶವವನ್ನು ರೂಮ್‌ನಲ್ಲೇ ಹಾಕಿ, ಹೊರಗಡೆಯಿಂದ ಬಾಗಿಲು ಲಾಕ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಅಲ್ಲಿಂದ ನೇರವಾಗಿ ವಕೀಲರೊಬ್ಬರಿಗೆ ಫೋನ್ ಮಾಡಿ ವಿಷಯ ತಿಳಿಸಿದ ಆರೋಪಿ ಶರತ್, ಬಳಿಕ ಪೊಲೀಸರ ಎದುರು ಶರಣಾಗಿದ್ದಾನೆ.
ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಪ್ರೀತಿ, ಲಿವ್-ಇನ್ ರಿಲೇಶನ್‌ಶಿಪ್‌ನ ಆಕರ್ಷಣೆಗೆ ಬಿದ್ದು ಯುವತಿಯೊಬ್ಬಳು ಹೀಗೆ ದುರಂತ ಅಂತ್ಯ ಕಂಡಿರುವುದು ಸಾರ್ವಜನಿಕರಲ್ಲಿ ತಲ್ಲಣ ಮೂಡಿಸಿದೆ.



