ಸುಳ್ಯದಲ್ಲಿ ಫುಟ್‌ಬಾಲ್ ಜ್ವರ: ಮಧ್ಯರಾತ್ರಿ ಭರ್ಜರಿ ಬ್ಯಾಂಡ್ ಸೆಟ್, ಪಟಾಕಿ ಸಿಡಿಸಿ ಕ್ರಿಸ್ಟಿಯಾನೋ ರೊನಾಲ್ಡೋ ಅವರ ಬೃಹತ್ ಫ್ಲೆಕ್ಸ್ ಅನಾವರಣಗೊಳಿಸಿದ ಅಭಿಮಾನಿಗಳು!

ಸುಳ್ಯ: ವಿಶ್ವ ಫುಟ್‌ಬಾಲ್ ಜಗತ್ತಿನ ದಂತಕಥೆ, ಕೋಟ್ಯಂತರ ಅಭಿಮಾನಿಗಳ ಹೃದಯದ ಅರಸ ಕ್ರಿಸ್ಟಿಯಾನೋ ರೊನಾಲ್ಡೋ (CR7) ಅವರ ಮೇಲಿನ ಕ್ರೇಜ್ ಸುಳ್ಯದಲ್ಲೂ ಭಿನ್ನ ಮಟ್ಟದಲ್ಲಿದೆ ಎಂಬುದಕ್ಕೆ ನಿನ್ನೆ ರಾತ್ರಿ ನಡೆದ ಅದ್ಧೂರಿ ಕಾರ್ಯಕ್ರಮವೇ ಸಾಕ್ಷಿ. ಸುಳ್ಯದ ರೊನಾಲ್ಡೋ ಅಭಿಮಾನಿ ಬಳಗ ಒಟ್ಟಾಗಿ ಸೇರಿ, ಪೋರ್ಚುಗಲ್ ರಾಷ್ಟ್ರೀಯ ತಂಡದ ಜರ್ಸಿಯಲ್ಲಿರುವ ರೊನಾಲ್ಡೋ ಅವರ ಬೃಹತ್ ಮತ್ತು ಆಕರ್ಷಕ ಫ್ಲೆಕ್ಸ್ ಒಂದನ್ನು ಮಧ್ಯರಾತ್ರಿಯ ಸಡಗರದಲ್ಲಿ ಅನಾವರಣಗೊಳಿಸಿತು. 

ಸಾಮಾನ್ಯವಾಗಿ ಫುಟ್‌ಬಾಲ್ ಆಟಗಾರರಿಗೆ ಕಟೌಟ್ ನಿಲ್ಲಿಸಿ, ಹಬ್ಬದಂತೆ ಆಚರಿಸುವ ಕ್ರೇಜ್ ನೆರೆಯ ಕೇರಳ ರಾಜ್ಯದಲ್ಲಿ ಮಾತ್ರ ನೋಡಲು ಸಾಧ್ಯ ಎಂಬ ಮಾತಿದೆ. ಆದರೆ ನಿನ್ನೆ ರಾತ್ರಿ ಸುಳ್ಯದಲ್ಲಿ ನಡೆದ ಅದ್ದೂರಿ ಇವೆಂಟ್ ನೋಡಿದ ಸ್ಥಳೀಯರು, “ನಮ್ಮ ಸುಳ್ಯ ಈಗ ಇಂಟರ್ನ್ಯಾಷನಲ್ ಲೆವೆಲ್‌ನಲ್ಲಿ ಕೇರಳದ ಫುಟ್‌ಬಾಲ್ ಹಬ್ಬದ ತರಹವೇ ಕಾಣಿಸುತ್ತಿದೆ” ಎಂದು ಹಾಡಿ ಹೊಗಳಿದ್ದಾರೆ. ಕೇರಳದ ಮಲಪ್ಪುರಂ, ಕಣ್ಣೂರು ಭಾಗದಲ್ಲಿ ಕಂಡುಬರುವ ಫುಟ್‌ಬಾಲ್ ಉನ್ಮಾದ ನಿನ್ನೆ ರಾತ್ರಿ ಸುಳ್ಯದ ಮಣ್ಣಿನಲ್ಲೂ ಮರುಸೃಷ್ಟಿಯಾಗಿತ್ತು!

ಕಾರ್ಯಕ್ರಮದ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ, ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನ ಮೇಲಿನ ಪ್ರೀತಿಯನ್ನು ವಾಹನಗಳ ಮೇಲೂ ಪ್ರದರ್ಶಿಸಿದ್ದರು. ನೂರಾರು ಬೈಕ್ ಹಾಗೂ ಕಾರುಗಳಿಗೆ ಕ್ರಿಸ್ಟಿಯಾನೋ ರೊನಾಲ್ಡೋ (CR7) ಅವರ ಕಸ್ಟಮೈಸ್ಡ್ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿತ್ತು. ಈ ಸ್ಟಿಕ್ಕರ್ ಕಾರು ಮತ್ತು ಬೈಕ್‌ಗಳ ಸಾಲು ಮೆರವಣಿಗೆಯುದ್ದಕ್ಕೂ ರೇಸ್ ಸ್ಟೈಲ್‌ನಲ್ಲಿ ಸಾಗಿದ್ದು, ಇಡೀ ಸುಳ್ಯ ಪೇಟೆಯಲ್ಲಿ ಹಬ್ಬದ ಕಳೆಯನ್ನು ಇನ್ನಷ್ಟು ಹೆಚ್ಚಿಸಿತ್ತು.ನಿನ್ನೆ ತಡರಾತ್ರಿ ನಡೆದ ಈ ಕಾರ್ಯಕ್ರಮ ಕೇವಲ ಫ್ಲೆಕ್ಸ್ ಅನಾವರಣಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಇಡೀ ಸುಳ್ಯ ಪೇಟೆಯೇ ತಿರುಗಿ ನೋಡುವಂತೆ ಅದ್ಧೂರಿ ಬ್ಯಾಂಡ್ ಸೆಟ್ ಆಯೋಜಿಸಲಾಗಿತ್ತು. ಧುಮುಕುವ ಬ್ಯಾಂಡ್ ವಾದನಕ್ಕೆ ಅಭಿಮಾನಿಗಳು ರೊನಾಲ್ಡೋ ಪರ ಘೋಷಣೆಗಳನ್ನು ಕೂಗುತ್ತಾ ಹೆಜ್ಜೆ ಹಾಕಿದರು. ಇದೇ ವೇಳೆ ಮುಗಿಲು ಮುಟ್ಟುವಂತೆ ತರಹೇವಾರಿ ಬಣ್ಣದ ಪಟಾಕಿಗಳನ್ನು ಸಿಡಿಸಲಾಯಿತು. ಆಕಾಶದಲ್ಲಿ ಸಿಡಿದ ಪಟಾಕಿಗಳ ಬೆಳಕು ಮತ್ತು ಧ್ವನಿ, ನೆರೆದಿದ್ದ ಫುಟ್‌ಬಾಲ್ ಪ್ರೇಮಿಗಳಲ್ಲಿ ರೋಮಾಂಚನ ಉಂಟುಮಾಡಿತು.

ಸುಳ್ಯದ ಫುಟ್‌ಬಾಲ್ ಇತಿಹಾಸವನ್ನು ತಿರುವಿ ಹಾಕಿದರೆ, ಇಲ್ಲಿ ಬೇರೆ ಯಾವುದೇ ಅಂತರರಾಷ್ಟಯ ಆಟಗಾರನಿಗೂ ಸಿಗದ ಅಭೂತಪೂರ್ವ ಗೌರವ ಸಿಆರ್7 (CR7) ಗೆ ಸಿಕ್ಕಿದೆ. ಸುಳ್ಯದ ಕ್ರೀಡಾ ಇತಿಹಾಸದಲ್ಲೇ ಕಟೌಟ್ ನಿಂತ ಏಕೈಕ ಫುಟ್‌ಬಾಲ್ ಆಟಗಾರ ಎಂದರೆ ಅದು ಕ್ರಿಸ್ಟಿಯಾನೋ ರೊನಾಲ್ಡೋ ಮಾತ್ರ.ಕಳೆದ ವಿಶ್ವಕಪ್ ಸಂದರ್ಭದಲ್ಲೂ ಸುಳ್ಯದ ರೊನಾಲ್ಡೋ ಅಭಿಮಾನಿಗಳು ಇಡೀ ತಾಲೂಕಿನಾದ್ಯಂತ ಭಾರಿ ಸದ್ದು ಮಾಡಿದ್ದರು. ಆಗ ಸುಳ್ಯದ ಪೈಚಾರ್, ಪ್ರಮುಖ ಕೇಂದ್ರವಾದ ಜ್ಯೋತಿ ಸರ್ಕಲ್, ಹಾಗೂ ಗಾಂಧಿನಗರದಲ್ಲಿ ರೊನಾಲ್ಡೋ ಅವರ ಬೃಹತ್ ಕಟೌಟ್‌ಗಳನ್ನು ನಿಲ್ಲಿಸಿ ಇಡೀ ಕರಾವಳಿಯೇ ಸುಳ್ಯದ ಕಡೆ ತಿರುಗಿ ನೋಡುವಂತೆ ಮಾಡಿದ್ದರು.

ಸುಳ್ಯದಲ್ಲಿ ರೊನಾಲ್ಡೋ ಫ್ಯಾನ್ಸ್ ಹವಾ ಯಾವಾಗಲೂ ಒಂದು ಕೈ ಮೇಲೇ ಇರುತ್ತದೆ ಎಂಬುದಕ್ಕೆ ಈ ದಾಖಲೆಗಳೇ ಸಾಕ್ಷಿ.ಈ ಇಡೀ ಇವೆಂಟ್‌ನ ಮತ್ತೊಂದು ಸುಂದರ ಹಾಗೂ ಪ್ರಮುಖ ಹೈಲೈಟ್ ಎಂದರೆ ಅದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳ ಸಂಖ್ಯೆ. ರೊನಾಲ್ಡೋ ಅವರಿಗೆ ಗೌರವ ಸಲ್ಲಿಸುವ (CR7 Tribute) ಈ ಕಾರ್ಯಕ್ರಮದಲ್ಲಿ ಹಿಂದೆಂದೂ ಕಾಣದಷ್ಟು ಸಂಖ್ಯೆಯಲ್ಲಿ ಸಣ್ಣ ಸಣ್ಣ ಮಕ್ಕಳು ಭಾಗವಹಿಸಿದ್ದರು. ನೆಚ್ಚಿನ ಆಟಗಾರನ 7ನೇ ನಂಬರ್‌ನ ಜರ್ಸಿ ಧರಿಸಿದ್ದ ಪುಟಾಣಿಗಳು, ರೊನಾಲ್ಡೋ ಅವರ ಐಕಾನಿಕ್ ‘Siuuu’ ಶೈಲಿಯಲ್ಲಿ ಸಂಭ್ರಮಿಸಿದ್ದು ಎಲ್ಲರ ಗಮನ ಸೆಳೆದರು.

ಹೊಸ ತಲೆಮಾರಿನ ಮಕ್ಕಳಲ್ಲೂ ರೊನಾಲ್ಡೋ ಮೇಲಿರುವ ಕ್ರೇಜ್ ಈ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.ಕರಾವಳಿಯ ಭಾಗದಲ್ಲಿ ಫುಟ್‌ಬಾಲ್ ಕ್ರೀಡೆಗೆ ಇರುವ ಜನಪ್ರಿಯತೆ ಎಲ್ಲರಿಗೂ ಗೊತ್ತು. ಆದರೆ ಅಂತರರಾಷ್ಟ್ರೀಯ ಮಟ್ಟದ ಆಟಗಾರನೊಬ್ಬನಿಗೆ ಸ್ಥಳೀಯವಾಗಿ ಇಷ್ಟೊಂದು ದೊಡ್ಡ ಮಟ್ಟದ ಗೌರವ ಸಮರ್ಪಣೆ ಮತ್ತು ನಿರಂತರವಾಗಿ ಕೇರಳ ಶೈಲಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡುತ್ತಾ ಬಂದಿರುವುದು ಸುಳ್ಯದ ಕ್ರೀಡಾ ಇತಿಹಾಸದಲ್ಲಿ ಒಂದು ಸ್ಮರಣೀಯ ಅಧ್ಯಾಯವಾಗಿ ಉಳಿಯಲಿದೆ. ಕಾರ್ಯಕ್ರಮದ ಫೋಟೋಗಳು ಮತ್ತು ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

Leave a Reply

Discover more from

Subscribe now to keep reading and get access to the full archive.

Continue reading