ಬಂಟ್ವಾಳ ತಾಲೂಕಿನ ಮುಡಿಪು-ಬಿ. ಸಿ. ರೋಡ್ ರಸ್ತೆಯ ಸಜಿಪ ಎಂಬಲ್ಲಿ ಕಾರು ಮತ್ತು ಸ್ಕೂಟರ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯುವ ಸಾಮಾಜಿಕ ಕಾರ್ಯಕರ್ತರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಜಿಪ ನಿವಾಸಿ ಅಬ್ದುಲ್ ರಹಿಮಾನ್ ಅವರ ಪುತ್ರ, 22 ವರ್ಷದ ಅಹಮದ್ ಆಸೀರ್ ಮೃತಪಟ್ಟ ದುರ್ದೈವಿ.


ಅಹಮದ್ ಆಸೀರ್ ಅವರು ಸಂಜೆ ತನ್ನ ಮನೆಯಿಂದ ಸುಮಾರು ಒಂದು ಕಿಲೋ ಮೀಟರ್ ದೂರದಲ್ಲಿರುವ ಸಜಿಪ ಬ್ಯಾಂಕ್ ಪ್ರದೇಶಕ್ಕೆ ಆಕ್ಟಿವಾ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಮಾರುತಿ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಸ್ಕೂಟರ್ ಸಂಪೂರ್ಣವಾಗಿ ಜಖಂಗೊಂಡಿದ್ದು, ತಲೆ ಮತ್ತು ದೇಹಕ್ಕೆ ಗಂಭೀರ ಗಾಯಗಳಾದ ಕಾರಣ ಆಸೀರ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.



ಮೃತ ಯುವಕ ಸಣ್ಣ ವಯಸ್ಸಿನಲ್ಲೇ ಸಮಾಜಮುಖಿ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದರು. ಅವರು ಎಸ್‌ಕೆಎಸ್‌ಎಸ್‌ಎಫ್ ಸಜೀಪನಡು ಶಾಖೆಯ ಸಕ್ರಿಯ ಸದಸ್ಯರಾಗಿದ್ದರು ಹಾಗೂ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ನೆರವಿಗೆ ಧಾವಿಸುವ ವಿಖಾಯ ಆಕ್ಟಿವ್ ವಿಂಗ್ ತಂಡದಲ್ಲಿ ಗುರುತಿಸಿಕೊಂಡಿದ್ದರು. ಸದಾ ಪರರ ಸೇವೆಗೆ ಸಿದ್ಧರಿರುತ್ತಿದ್ದ ಯುವಕನ ಅಕಾಲಿಕ ಮರಣ ಸಜಿಪ ಪರಿಸರದ ಜನರಲ್ಲಿ ತೀವ್ರ ಆಘಾತ ಮತ್ತು ದುಃಖವನ್ನುಂಟು ಮಾಡಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಕೈಗೊಂಡಿದ್ದಾರೆ.


