ಮಂಗಳೂರು: ಜಪ್ಪಿನಮೊಗರಿನ ಇಂಡಿಯಾನ ಕನ್ವೆನ್ಷನ್ ಸಭಾಂಗಣದಲ್ಲಿ ದಿನಾಂಕ 13/06/2026 ರಂದು ನಡೆದ ಮೀಫ್ ಅಕಾಡೆಮಿಕ್ ಎಕ್ಸಲೆನ್ಸ್ ಅವಾರ್ಡ್ ಮತ್ತು ಮೀಫ್ ಚಾಪ್ಟರ್ಸ್ ಕಾನ್ಫರೆನ್ಸ್ -2026 ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗೂನಡ್ಕದ ತೆಕ್ಕಿಲ್ ಮಾದರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಗೌರವ ಅಭಿನಂದನಾ ಫಲಕವನ್ನು ನೀಡಿ ಅಭಿನಂದಿಸಲಾಯಿತು. 2025-26 ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ-1 ರಲ್ಲಿ 100% ಫಲಿತಾಂಶ ಪಡೆದುಕೊಂಡ ಸಾಧನೆಗಾಗಿ ಶಾಲೆಗೆ ಈ ಗೌರವವನ್ನು ಸಮರ್ಪಿಸಲಾಯಿತು.
ಈ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಮಾನ್ಯ ಯು ಟಿ ಖಾದರ್, ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂಪಿಝಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಬಿ ಎಂ ಪಾರುಖ್, ಮಂಗಳೂರು ದ.ಕ. ಉಪ ನಿರ್ದೇಶಕರು (ಅಭಿವೃದ್ದಿ) ಮಾನ್ಯ ಜಿ ಎಸ್ ಶಶಿಧರ್, ಮೀಪ್ ಅಧ್ಯಕ್ಷರಾದ ಮೂಸಬ್ಬಾ ಪಿ ಬ್ಯಾರಿ, ಮೀಪ್ ಗೌರವ ಅಧ್ಯಕ್ಷರಾದ ಉಮ್ಮರ್ ಟೀಖೆ, ಮೀಫ್ ಉಪಾಧ್ಯಕ್ಷರಾದ ಮುಸ್ತಫಾ ಸುಳ್ಯ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಶಾಲೆಯ ಈ ಸಾಧನೆಯ ಅಭಿನಂದನಾ ಗೌರವ ಸ್ಮರಣಿಕೆಯನ್ನು ಶಾಲಾ ಆಡಳಿತ ಮಂಡಳಿಯ ವ್ಯವಸ್ಥಾಪಕರಾದ ಅಬ್ದುಲ್ಲಾ ಮಾಸ್ಟರ್ (ನಿವೃತ್ತ ಮುಖ್ಯ ಶಿಕ್ಷಕರು, ಅರಂತೋಡು), ಶಾಲಾ ಮುಖ್ಯ ಶಿಕ್ಷಕರಾದ ಸಂಪತ್ ಜೆ ಡಿ ಹಾಗೂ ಸಹ ಶಿಕ್ಷಕಿಯರಾದ ಬುಶ್ರಾ ಕೆ ಎಂ ಮತ್ತು ಆಯಿಷತ್ ದಿಲ್ ಶಾನಾ ಅವರು ಸ್ವೀಕರಿಸಿದರು.





