ಬೆಂಗಳೂರು: ರಹಸ್ಯವಾಗಿ ಮದುವೆಯಾಗಿದ್ದ ಪ್ರೇಮಿಯ ಕೈಯಿಂದಲೇ ಯುವತಿಯ ಕೊಲೆ; ಆರೋಪಿ ಪೊಲೀಸ್ ವಶಕ್ಕೆ!


ಬೆಂಗಳೂರು: ರಾಜಧಾನಿಯ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತಿಗಳರಪಾಳ್ಯ ತುಳಸಿನಗರದಲ್ಲಿ ಭಗ್ನಪ್ರೇಮದ ಹಿನ್ನೆಲೆಯಲ್ಲಿ ಯುವತಿಯೊಬ್ಬಳನ್ನು ಭೀಕರವಾಗಿ ಕೊಲೆ ಮಾಡಲಾಗಿರುವ ಘಟನೆ ಬೆಳಕಿಗೆ ಬಂದಿದೆ. 22 ವರ್ಷದ ಭವಾನಿ ಕೊಲೆಯಾದ ದುರ್ದೈವಿ. ಯುವತಿಯ ಕೊಲೆ ಆರೋಪದ ಮೇಲೆ ಆಕೆಯ ಪ್ರೇಮಿ ಚಂದ್ರಶೇಖರ್ ಅಲಿಯಾಸ್ ಚಂದನ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.



ಮೃತ ಭವಾನಿ ಮೊಬೈಲ್ ಶೋ ರೂಂ ಒಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಚಂದನ್‌ನ ಪರಿಚಯವಾಗಿತ್ತು. ಕಳೆದ ನಾಲ್ಕೈದು ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದರು. ಆದರೆ, ಚಂದನ್‌ಗೆ ಈಗಾಗಲೇ ವಿವಾಹವಾಗಿದ್ದು, ಪತ್ನಿ ಹಾಗೂ 6 ವರ್ಷದ ಮಗುವಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ಸತ್ಯವನ್ನು ಮುಚ್ಚಿಟ್ಟಿದ್ದ ಚಂದನ್, ಸುಮಾರು ಒಂದು ವರ್ಷದ ಹಿಂದೆ ಭವಾನಿಯನ್ನು ಗುಟ್ಟಾಗಿ ಮದುವೆಯಾಗಿದ್ದ. ಈ ವಿಷಯ ಇಬ್ಬರ ಕುಟುಂಬಸ್ಥರಿಗಾಗಲಿ ಅಥವಾ ಸ್ನೇಹಿತರಿಗಾಗಲಿ ತಿಳಿದಿರಲಿಲ್ಲ.

ಇತ್ತೀಚೆಗೆ ಭವಾನಿ ಕುಟುಂಬಸ್ಥರು ಆಕೆಗೆ ಬೇರೆ ಕಡೆ ಮದುವೆ ಮಾಡಲು ನಿರ್ಧರಿಸಿ, ಮುಂದಿನ ವಾರ ನಿಶ್ಚಿತಾರ್ಥಕ್ಕೂ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಈ ವಿಷಯವನ್ನು ಭವಾನಿ ತನ್ನ ರಹಸ್ಯ ಪತಿ ಚಂದನ್‌ಗೆ ತಿಳಿಸಿದ್ದಾಳೆ. ನಿನ್ನೆ ಬೆಳಗ್ಗೆ ಇಬ್ಬರೂ ಭವಾನಿ ವಾಸವಿದ್ದ ಕೊಠಡಿಯಲ್ಲಿ ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ.



ಮಾತುಕತೆ ವಿಕೋಪಕ್ಕೆ ತಿರುಗಿದಾಗ ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದರು ಎನ್ನಲಾಗಿದೆ. ಆದರೆ ವಿಷ ಸೇವಿಸಿದ ಬಳಿಕ ಭವಾನಿ ವಾಂತಿ ಮಾಡಿಕೊಂಡಿದ್ದಾಳೆ. ಇದರಿಂದ ಆಕ್ರೋಶಗೊಂಡ ಚಂದನ್, ಆಕೆಯ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಕೊಲೆಯ ಬಳಿಕ ಆರೋಪಿ ಚಂದನ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಭವಾನಿಯೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡು, ಒಂದು ವರ್ಷದ ಆ್ಯನಿವರ್ಸರಿ ಎಂದು ಸ್ಟೋರಿ ಹಾಕಿದ್ದಾನೆ. ಇದನ್ನು ಗಮನಿಸಿದ ಭವಾನಿಯ ಸಂಬಂಧಿಕರು ತಕ್ಷಣ ಸ್ಕ್ರೀನ್‌ಶಾಟ್ ತೆಗೆದು ಆಕೆಯ ತಂದೆ ಶ್ರೀನಿವಾಸ್ ಅವರಿಗೆ ಮಾಹಿತಿ ನೀಡಿದ್ದಾರೆ.
ಆತಂಕಗೊಂಡ ತಂದೆ ಮಗಳಿಗೆ ಕರೆ ಮಾಡಿದಾಗ ಆಕೆ ಕರೆ ಸ್ವೀಕರಿಸಿಲ್ಲ. ತಕ್ಷಣ ಅವರು ಮನೆ ಮಾಲೀಕರಿಗೆ ಕರೆ ಮಾಡಿ ಪರಿಶೀಲಿಸುವಂತೆ ಕೋರಿದ್ದಾರೆ. ಮನೆ ಮಾಲೀಕರು ಸ್ಥಳಕ್ಕೆ ಹೋಗಿ ನೋಡಿದಾಗ ಭವಾನಿ ಮೃತದೇಹವಾಗಿ ಬಿದ್ದಿರುವುದು ಮತ್ತು ವಿಷ ಸೇವಿಸಿದ್ದ ಚಂದನ್ ನರಳಾಡುತ್ತಿರುವುದು ಕಂಡುಬಂದಿದೆ.

ಸ್ಥಳಕ್ಕೆ ಧಾವಿಸಿದ ಬ್ಯಾಡರಹಳ್ಳಿ ಪೋಲೀಸರು ತಕ್ಷಣ ಆರೋಪಿ ಚಂದನ್‌ನನ್ನು ಆಸ್ಪತ್ರೆಗೆ ದಾಖಲಿಸಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಸದ್ಯ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಭವಾನಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸ್‌ಪೆಕ್ಟರ್ ಗೋವಿಂದರಾಜು ನೇತೃತ್ವದಲ್ಲಿ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.

Leave a Reply

Discover more from

Subscribe now to keep reading and get access to the full archive.

Continue reading