ಸಮಾಜದಲ್ಲಿ ನಿಸ್ವಾರ್ಥ ಮಾನವೀಯ ಸೇವೆ ಸಲ್ಲಿಸುತ್ತಿರುವ ಸುಳ್ಯದ ಆಪತ್ಬಾಂಧವ ಅಬ್ದುಲ್ ರಜಾಕ್ ಅಚ್ಚು ಪ್ರಗತಿ ಅವರನ್ನು ಸುಳ್ಯದ ಶಾಂತಿನಗರದ ಮುಸ್ಲಿಮ್ ವೆಲ್ಫೇರ್ ಎಸೋಸಿಯೇಷನ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಶಾಂತಿನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಸಿಕ ಸ್ವಲಾತ್ ಮತ್ತು ಪ್ರಾರ್ಥನಾ ಸಂಗಮದ ಮಧ್ಯೆ ಈ ಸನ್ಮಾನ ಕಾರ್ಯಕ್ರಮ ನಡೆಯಿತು. ಅಬ್ದುಲ್ ರಜಾಕ್ ಅವರು ಸಮಾಜದ ವಿಭಿನ್ನ ಹಾಗೂ ಕಠಿಣ ಸಂದರ್ಭಗಳಲ್ಲಿ ಜೀವದ ಹಂಗು ತೊರೆದು ಮಾಡುತ್ತಿರುವ ಸೇವೆಗಳನ್ನು ಗುರುತಿಸಿ ಈ ಗೌರವ ಸಮರ್ಪಿಸಲಾಯಿತು.


ಅಚ್ಚು ಪ್ರಗತಿ ಎಂದೇ ಪರಿಚಿತರಾಗಿರುವ ಅಬ್ದುಲ್ ರಜಾಕ್ ಅವರು ಹಲವು ವರ್ಷಗಳಿಂದ ಸಮಾಜದ ಕಷ್ಟದ ದಿನಗಳಲ್ಲಿ ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸುತ್ತಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ಮತ್ತು ಅಪಘಾತಕ್ಕೊಳಗಾದವರನ್ನು ಸಕಾಲದಲ್ಲಿ ಆಸ್ಪತ್ರೆಗೆ ತಲುಪಿಸುವ ಆಂಬುಲನ್ಸ್ ಸೇವೆ ನೀಡುವ ಮೂಲಕ ಹಲವರ ಜೀವ ರಕ್ಷಣೆಗೆ ಕಾರಣರಾಗಿದ್ದಾರೆ.
ನದಿ ಹಾಗೂ ಕೆರೆಗಳಲ್ಲಿ ಮುಳುಗಿದವರನ್ನು ರಕ್ಷಿಸುವ ಮತ್ತು ಮೃತದೇಹಗಳನ್ನು ಹೊರತೆಗೆಯುವ ಅತ್ಯಂತ ಸವಾಲಿನ ಕಾರ್ಯಾಚರಣೆಗಳಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಇದರೊಂದಿಗೆ ಅತ್ಯಂತ ಕಠಿಣ ಸ್ಥಿತಿಯಲ್ಲಿರುವ, ಕೊಳೆತು ನಾರುತ್ತಿರುವ ಶವಗಳ ನಿರ್ವಹಣೆ ಮತ್ತು ಮರಣೋತ್ತರ ಪರೀಕ್ಷೆ ಕಾರ್ಯಗಳಲ್ಲಿ ನೆರವಾಗುವ ಮೂಲಕ ಮಾನವೀಯತೆಯ ಅತ್ಯುನ್ನತ ಮೌಲ್ಯವನ್ನು ಎತ್ತಿಹಿಡಿದಿದ್ದಾರೆ.
ಈ ಸಂದರ್ಭದಲ್ಲಿ ನಡೆದ ಪ್ರಾರ್ಥನಾ ಸಂಗಮ ಹಾಗೂ ಸನ್ಮಾನ ಸಮಾರಂಭದಲ್ಲಿ ಸಯ್ಯದ್ ಕುಂಞಿಕೋಯ ತಂಙಳ್ ಅವರು ದಿವ್ಯ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಸ್ಲಿಮ್ ವೆಲ್ಫೇರ್ ಎಸೋಸಿಯೇಷನ್‌ನ ಪದಾಧಿಕಾರಿಗಳು, ಧಾರ್ಮಿಕ ಹಾಗೂ ಸಾಮಾಜಿಕ ರಂಗದ ಪ್ರಮುಖರು ಮತ್ತು ಸ್ಥಳೀಯ ಸಾರ್ವಜನಿಕರು ಉಪಸ್ಥಿತರಿದ್ದು, ಅಚ್ಚು ಪ್ರಗತಿ ಅವರ ನಿಸ್ವಾರ್ಥ ಸೇವೆಗೆ ಸಾಕ್ಷಿಯಾಗಿ ಶುಭ ಹಾರೈಸಿದರು.







