

ಕಲ್ಲುಗುಂಡಿ: ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ಮಣೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಅವರ ವಿರುದ್ಧ ಸಂಪಾಜೆ ವಲಯ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲ್ಲುಗುಂಡಿಯ ಸಮನ್ವಯ ಸಹಕಾರಿ ಸಭಾಂಗಣದಲ್ಲಿ ನಡೆದ ಸಂಪಾಜೆ ಕಾಂಗ್ರೆಸ್ ಪಕ್ಷದ ಪ್ರಮುಖ ಸಭೆಯಲ್ಲಿ ಬ್ಲಾಕ್ ಅಧ್ಯಕ್ಷರ ನಡೆಗೆ ಒಕ್ಕೊರಲಿನ ತೀವ್ರ ವಿರೋಧ ವ್ಯಕ್ತವಾಯಿತು.

ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ನೂತನ ಕೆ.ಪಿ.ಸಿ.ಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರಂತಹ ನಾಯಕರು ಪಕ್ಷದ ಶಿಸ್ತು ಮತ್ತು ಸಿದ್ಧಾಂತಕ್ಕೆ ಮಾದರಿಯಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಸುಳ್ಯದಲ್ಲಿ ರಾಧಾಕೃಷ್ಣ ಬೊಳ್ಳೂರು ಅವರು ಬ್ಲಾಕ್ ಅಧ್ಯಕ್ಷರಾದ ನಂತರ ಪಕ್ಷದ ಶಿಸ್ತು ಹಾಗೂ ಸಿದ್ಧಾಂತಕ್ಕೆ ಬದ್ಧರಾಗಿ ನಡೆದುಕೊಳ್ಳುತ್ತಿಲ್ಲ ಎಂದು ಸಭೆಯಲ್ಲಿ ಆರೋಪಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಸಮಿತಿ ರಚಿಸುವ ಸಂದರ್ಭದಲ್ಲಿ ಸೌಜನ್ಯಕ್ಕಾದರೂ ಸ್ಥಳೀಯ ನಾಯಕರ ಅಭಿಪ್ರಾಯವನ್ನು ಪಡೆದಿಲ್ಲ ಎಂದು ಕಾರ್ಯಕರ್ತರು ದೂರಿದ್ದಾರೆ.
ಸುಮಾರು 30 ವರ್ಷಗಳಿಂದ ಸಂಪಾಜೆಯಲ್ಲಿ ಕಾಂಗ್ರೆಸ್ ಕಟ್ಟಿ ಬೆಳೆಸಿದ ಸೋಮಶೇಖರ ಕೊಯಿಂಗಾಜೆ ಮನನೊಂದು ರಾಜೀನಾಮೆ ಕೊಟ್ಟರೂ ಬ್ಲಾಕ್ ಕಾಂಗ್ರೆಸ್ ಈ ಬಗ್ಗೆ ಕ್ಯಾರೇ ಎಂದಿಲ್ಲ. ಇಡೀ ಸುಳ್ಯ ಕ್ಷೇತ್ರದಲ್ಲೇ ಕಾಂಗ್ರೆಸ್ ಸತತವಾಗಿ ಗೆಲ್ಲುತ್ತಾ ಬಂದ ಗ್ರಾಮ ಪಂಚಾಯತ್ ಸೊಸೈಟಿ ಗಳ ಅಧಿಕಾರ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ ನಾಯಕರುಗಳನ್ನೇ ಕಡೆಗಣಿಸುವ ಬ್ಲಾಕ್ ಕಾಂಗ್ರೆಸ್ ನ ಈಗಿನ ಅಧ್ಯಕ್ಷರ ನಡೆ ಬೇಸರ ತರಿಸುವಂತಿದೆ. ಎಂದು ಸಭಿಕರು ದೂರಿದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಬ್ಲಾಕ್ ಹಾಗೂ ವರಿಷ್ಠರ ಸೂಚನೆಯನ್ನು ದಿಕ್ಕರಿಸಿ, ಪಕ್ಷದಿಂದ ಉಚ್ಛಾಟನೆಗೊಂಡಿದ್ದ ಜಿ.ಕೆ. ಹಮೀದ್ ಅವರ ಮಾತು ಕೇಳಿ, ಕೋಮುವಾದಿ ಬಿಜೆಪಿಯ ಬೆಂಬಲದೊಂದಿಗೆ ಸ್ಪರ್ಧಿಸಿದ್ದ ಸಂಪಾಜೆ ಗ್ರಾ.ಪಂ. ಸದಸ್ಯ ಎಸ್.ಕೆ. ಹನೀಫ್ ಅವರನ್ನು ಈಗ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿರುವುದಕ್ಕೆ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು. ಪಕ್ಷದ ಸಿದ್ಧಾಂತದ ವಿರುದ್ಧ ನಿಂತವರಿಗೆ ಇಂತಹ ಉನ್ನತ ಜವಾಬ್ದಾರಿ ನೀಡಿರುವುದು, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಪಕ್ಷಕ್ಕಾಗಿ ದುಡಿಯುವ ನಿಷ್ಠಾವಂತ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಕುಂದಿಸುವಂತಾಗಿದೆ. ಬೊಳ್ಳೂರು ಅವರು ನಿಜವಾಗಿಯೂ ಕಾಂಗ್ರೆಸ್ ಪಕ್ಷದ ಒಳಿತಿಗಾಗಿ ಈ ನಿರ್ಧಾರ ತಗೆದುಕೊಂಡಿದ್ದಾರೆಯೇ ಎಂದು ಕಾರ್ಯಕರ್ತರು ಪ್ರಶ್ನಿಸಿದ್ದಾರೆ.


ಪಕ್ಷವಿರೋಧಿ ಚಟುವಟಿಕೆ ನಡೆಸಿರುವ ಎಸ್.ಕೆ. ಹನೀಫ್ ಅವರನ್ನು ತಕ್ಷಣವೇ ಬ್ಲಾಕ್ ಕಾಂಗ್ರೆಸ್ ಜವಾಬ್ದಾರಿಯಿಂದ ಮುಕ್ತಗೊಳಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು. ಪಕ್ಷದಲ್ಲಿ ಯಾವುದೇ ಪ್ರಮುಖ ತೀರ್ಮಾನ ಕೈಗೊಳ್ಳುವಾಗ ಸ್ಥಳೀಯ ಘಟಕವನ್ನು ಕಡ್ಡಾಯವಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಈ ಬಗ್ಗೆ ಬ್ಲಾಕ್ ಕಾಂಗ್ರೆಸ್‌ಗೆ ಅಧಿಕೃತ ಪತ್ರ ಬರೆಯಲಾಗುವುದು. ಒಂದು ವೇಳೆ ಪಕ್ಷದ ಶಿಸ್ತು ಕಾಪಾಡದಿದ್ದರೆ ಮುಂದಿನ ದಿನಗಳಲ್ಲಿ ಸಂಪಾಜೆ ಕಾಂಗ್ರೆಸ್ ವತಿಯಿಂದ ಕಠಿಣ ನಿರ್ಧಾರ ಕೈಗೊಳ್ಳಲಾಗುವುದು ಹಾಗೂ ಈ ಇಡೀ ವೃತ್ತಾಂತವನ್ನು ನೂತನ ರಾಜ್ಯಾಧ್ಯಕ್ಷರ ಗಮನಕ್ಕೆ ತರಲಾಗುವುದು ಎಂದು ಒಕ್ಕೊರಲಿನಿಂದ ನಿರ್ಧರಿಸಲಾಯಿತು.


ಸಭೆಯ ಅಧ್ಯಕ್ಷತೆಯನ್ನು ಸಂಪಾಜೆ ವಲಯ ಕಾಂಗ್ರೆಸ್ ಪ್ರಭಾರ ಅಧ್ಯಕ್ಷ ವಸಂತ ಗೌಡ ಪೆಲ್ತಡ್ಕ ವಹಿಸಿದ್ದರು.ಸಭೆಯಲ್ಲಿ ಸಂಪಾಜೆ ಸಹಕಾರಿ ಸಂಘದ ನಿರ್ದೇಶಕ ರಾಜು ನೆಲ್ಲಿಕುಮೇರಿ, ಜಿಲ್ಲಾ ಕಾಂಗ್ರೆಸ್ ನಾಯಕ ಮಹಮ್ಮದ್ ಕುಂಞಿ ಗೂನಡ್ಕ, ಪ್ರಮೀಳಾ ಪೆಲ್ತಡ್ಕ, ಸಂಪಾಜೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಲನ ಕೆ.ಆರ್, ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಸದಸ್ಯೆ ಕಾಂತಿ ಬಿ.ಎಸ್, ಹಿರಿಯ ಕಾಂಗ್ರೆಸ್ ನಾಯಕರಾದ ಬೆಂಜಮಿನ್ ಡಿಸೋಜ ಹಾಗೂ ಸಾಜೀದ್ ಗೂನಡ್ಕ ಮಾತನಾಡಿದರು.
ಕೆ.ಪಿ.ಸಿ.ಸಿ ಪ್ರಚಾರ ಸಮಿತಿಯ ಮುಖ್ಯ ಸಂಯೋಜಕ ಜಾನಿ ಕೆ.ಪಿ ಅವರು ಸಭೆಯಲ್ಲಿ ಎಸ್ ಐ ಆರ್ ಬಗ್ಗೆ ವಿವರಣೆ ನೀಡಿ, ಕಾರ್ಯಕರ್ತರ ಅಭಿಪ್ರಾಯದಂತೆ ಬ್ಲಾಕ್ ಅಧ್ಯಕ್ಷರಿಗೆ ಪತ್ರ ಬರೆಯಲು ತಮ್ಮ ಸಂಪೂರ್ಣ ಬೆಂಬಲ ಸೂಚಿಸಿದರು.
ವೇದಿಕೆಯಲ್ಲಿ ಪ್ರಮುಖರಾದ ರಕ್ಷಿತ್ ದೊಡ್ಡಡ್ಕ, ಸಭಾಸ್ಟಿಯನ್ ನೆಲ್ಲಿಕುಮೇರಿ, ಸತೀಶ್ ನೆಲ್ಲಿಕುಮೇರಿ, ನಫ್ಸಾನ್ ಪೆಲ್ತಡ್ಕ, ಯಾಹ್ಯಾ ದೊಡ್ಡಡ್ಕ, ಸುಹೈಲ್ ಪೇರಡ್ಕ, ಲುಕ್ಮಾನ್ ಪೇರಡ್ಕ, ಕೆರೋಲಿನಾ ಕ್ರಾಸ್ತಾ, ಫಿಲೋಮಿನಾ ಕ್ರಾಸ್ತಾ, ಪ್ರೀತಿ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಲೂಕಾಸ್ ಕಾರ್ಯಕ್ರಮ ಸ್ವಾಗತಿಸಿ, ನಿರೂಪಿಸಿದರು.

