ಸುಳ್ಯ: ಡಾ. ಉಮ್ಮರ್ ಬೀಜದಕಟ್ಟೆ ಅವರ ನೇತೃತ್ವದ ಪ್ರತಿಷ್ಠಿತ ‘ಸಜ್ಜನ ಪ್ರತಿಷ್ಠಾನ’ ವತಿಯಿಂದ ನೀಡಲಾಗುವ ಈ ವರ್ಷದ ‘ಸಜ್ಜನ ಶ್ರೇಷ್ಠ ರಕ್ತದಾನಿ ಪ್ರಶಸ್ತಿ’ಗೆ ಸುಳ್ಯದ ಹಿರಿಯ ರಕ್ತದಾನಿ ಹಾಗೂ ಸುಳ್ಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಪಿ.ಬಿ. ಸುಧಾಕರ ರೈ ಅವರು ಆಯ್ಕೆಯಾಗಿದ್ದಾರೆ.
ಸಮಾಜದಲ್ಲಿ ನಿರಂತರವಾಗಿ ರಕ್ತದಾನ ಮಾಡುತ್ತಾ, ಅತಿ ಹೆಚ್ಚು ಬಾರಿ ರಕ್ತ ನೀಡುವುದರ ಜೊತೆಗೆ, ಇತರರಿಗೂ ರಕ್ತದಾನ ಮಾಡಲು ಸದಾ ಪ್ರೇರಣೆ ನೀಡುತ್ತಾ ಬಂದಿರುವ ಸುಧಾಕರ ರೈ ಅವರ ಸುದೀರ್ಘ ಸಾಮಾಜಿಕ ಸೇವೆಯನ್ನು ಗುರುತಿಸಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.


ಬೆಂಗಳೂರಿನಲ್ಲಿ ನಡೆದ ಸಜ್ಜನ ಪ್ರತಿಷ್ಠಾನದ ಪ್ರಮುಖ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸಮಾಜದಲ್ಲಿ ರಕ್ತದಾನದ ಮಹತ್ವವನ್ನು ಸಾರುವ ಮತ್ತು ರಕ್ತದಾನಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ವರ್ಷ ‘ವಿಶ್ವ ರಕ್ತದಾನಿಗಳ ದಿನಾಚರಣೆ’ಯ ಅಂಗವಾಗಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ ಎಂದು ಪ್ರತಿಷ್ಠಾನದ ನಿರ್ದೇಶಕರಾದ ಶರೀಫ್ ಜಟ್ಟಿಪಳ್ಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈ ಅವರ ಈ ಆಯ್ಕೆಗೆ ಸುಳ್ಯದ ಸಾರ್ವಜನಿಕ ವಲಯ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳಿಂದ ವ್ಯಾಪಕ ಹರ್ಷ ಮತ್ತು ಅಭಿನಂದನೆಗಳು ವ್ಯಕ್ತವಾಗಿವೆ.




