ಬಹುಷಃ ಪುಲಿವಾಲ್ ಕಲ್ಯಾಣಮ್ ಚಿತ್ರದ ಮೇಲಿನ ಇದೊಂದೇ ಚಿತ್ರ ಸಾಕು. 90 ಕಿಡ್ಸ್ ನಕ್ಕು ಹಗುರಾಗಲು, ತಮ್ಮ ಸುಂದರ ಬಾಲ್ಯದ ಕಡೆಗೆ ಸಾಗಲು. ಪುಲಿವಾಲ್ ಕಲ್ಯಾಣಮ್ ಚಿತ್ರದಲ್ಲಿ ಮುಂಬಯಿಯಿಂದ ಟ್ಯಾಕ್ಸಿ ಹಿಡಿದು ಬರುವ ಸಲೀಮ್ ಕುಮಾರ್ ಪಾತ್ರ ಆ ಸಿನಿಮಾದಲ್ಲಿ ಸೃಷ್ಟಿಸಿದ ಸಂಚಲನ ಸಣ್ಣದಲ್ಲ.
ಕೇರಳದ ಪರವೂರಿನಲ್ಲಿ 1969 ರಲ್ಲಿ ಸಲೀಂ ಕುಮಾರ್ ಅವರ ಜನನವಾಯಿತು. ತಮ್ಮ 57 ವರ್ಷಗಳ ಜೀವನದಲ್ಲಿ ಕಷ್ಟಗಳ ವಿರುದ್ಧ ಹೋರಾಡುತ್ತಲೇ, ಅಭಿನಯದ ಮೇಲಿನ ತೀವ್ರ ಆಸಕ್ತಿಯಿಂದಾಗಿ, ಮೆಗಾ ಸ್ಟಾರ್‌ಗಳಾದ ಮಮ್ಮುಟ್ಟಿ, ಮೋಹನ್‌ಲಾಲ್, ತಿಲಕನ್, ನೆಡುಮುಡಿ ವೇಣು ಮುಂತಾದವರು ಆಳುತ್ತಿದ್ದ ಮಲಯಾಳಂ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಹಾಸ್ಯ ಶೈಲಿಯನ್ನು ಸೃಷ್ಟಿಸಿಕೊಂಡರು.

ನಂತರದ ದಿನಗಳಲ್ಲಿ ಗಂಭೀರ ಪಾತ್ರಗಳ ಮೂಲಕ ಭಾರತೀಯ ಚಿತ್ರರಂಗದ ನಂಬರ್ ಒನ್ ನಟನಾಗಿ ಹೆಮ್ಮೆಯ ಸಲೀಂ ಕುಮಾರ್ ಬೆಳೆದರು.

ಎಂ. ಜಿ. ವಿಶ್ವವಿದ್ಯಾಲಯದ ಮಿಮಿಕ್ರಿ ಸ್ಪರ್ಧೆಯಲ್ಲಿ ಸತತ ಮೂರು ಬಾರಿ ಪ್ರಥಮ ಸ್ಥಾನ ಪಡೆದರು. ಆ ಮಿಮಿಕ್ರಿಯ ಕಲೆಯ ಮೂಲಕವೇ ಅವರು ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟರು. ಏಷ್ಯಾನೆಟ್‌ನ ಕಾಮೆಡಿ ಕಾರ್ಯಕ್ರಮದ ಮೂಲಕ ಅವರ ರಂಗಪ್ರವೇಶವಾಯಿತು.

ನಂತರ 1997 ರಲ್ಲಿ ಸಿದ್ದಿಕ್ ಶಮೀರ್ ನಿರ್ದೇಶನದ ಇಷ್ಟಮಾನು ನೂರು ವಟ್ಟಂ ಸಿನಿಮಾದ ಭಾಗವಾದರು. ತದನಂತರ ಸಿಬಿ ಮಲಯಿಲ್ ನಿರ್ದೇಶನದ, ದಿಲೀಪ್ ನಟನೆಯ ನೀ ವರುವೋಲಂ ಚಿತ್ರದಲ್ಲಿ ಗಮನಾರ್ಹ ಪಾತ್ರವೊಂದು ಅವರಿಗೆ ಸಿಕ್ಕಿತು.

2000 ದಲ್ಲಿ ಬಿಡುಗಡೆಯಾದ ಸತ್ಯಮೇವ ಜಯತೇ ಸಿನಿಮಾದಲ್ಲಿನ ಅವರ ನಟನೆಯನ್ನು ನೋಡಿ, ರಫಿ-ಮೆಕಾರ್ಟಿನ್ ಜೋಡಿಯು ತೆಂಕಾಸಿಪ್ಪಟ್ಟಣಂ ಚಿತ್ರಕ್ಕೆ ಸಲೀಂ ಅವರನ್ನು ಆಯ್ಕೆ ಮಾಡಿತು. ಇದು ಕನ್ನಡಕ್ಕೆ ರವಿಚಂದ್ರನ್ ಶಿವರಾಜ್ ಕುಮಾರ್ ಜೋಡಿಯ ಚಿತ್ರವಾಗಿ ಕೋದಂಡರಾಮ ಎಂಬ ಹೆಸರಿನಲ್ಲಿ ರಿಮೇಕ್ ಕೂಡಾ ಆಗಿತ್ತು. ಇದರಲ್ಲಿನ ಮುತ್ತುರಾಮನ್ ಎಂಬ ಪಾತ್ರ ಸಲೀಂ ಅವರ ವೃತ್ತಿಜೀವನದ ದಿಕ್ಕನ್ನೇ ಬದಲಾಯಿಸಿತು.


