ಸುಳ್ಯ/ಗುತ್ತಿಗಾರು: “ಜೀವವೇ ಇಲ್ಲದ ಜಿಯೋ ನೆಟ್ವರ್ಕ್…” ಇದು ಸದ್ಯ ಜಿಯೋ ಸಿಮ್ ಬಳಸಿ ಕೈ ಸುಟ್ಟುಕೊಂಡಿರುವ ಗುತ್ತಿಗಾರು ಪರಿಸರದ ಗ್ರಾಹಕರ ಬಾಯಿಂದ ಬರುತ್ತಿರುವ ಆಕ್ರೋಶದ ನುಡಿಗಳು.

ಗುತ್ತಿಗಾರಿನಲ್ಲಿ ಜಿಯೋ ನೆಟ್ವರ್ಕ್ ಪದೇ ಪದೇ ಕೈಕೊಡುತ್ತಿದ್ದು, ಗ್ರಾಹಕರು ಸಂಪರ್ಕ ಸಿಗದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಸ್ಥಳೀಯ ಗ್ರಾಹಕರು ತೀವ್ರವಾಗಿ ಒತ್ತಾಯಿಸಿದ್ದಾರೆ.


ಸುಮಾರು ಎರಡು ವಾರಗಳ ಮುಂಚಿತವಾಗಿ ಇಬ್ಬರು ಯುವಕರು ಗುತ್ತಿಗಾರು ಭಾಗದಲ್ಲಿ ಗ್ರಾಹಕರ ಬಳಿ ಬಂದು, ಇತರ ನೆಟ್ವರ್ಕ್ನಿಂದ ಜಿಯೋಗೆ ಪೋರ್ಟ್ (Port) ಮಾಡಿ ಎಂದು ಪುಸಲಾಯಿಸಿ ಪೋರ್ಟ್ ಮಾಡಿಸಿದ್ದರು. ಆಫರ್ಗಳ ಆಸೆಗೆ ಬಿದ್ದು ನಂಬಿಕೆಯಿಂದ ಪೋರ್ಟ್ ಮಾಡಿಸಿಕೊಂಡ ಗುತ್ತಿಗಾರಿನ ಗ್ರಾಹಕರು ಈಗ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ. ಅಂದು ಆತುರಪಟ್ಟು ಪೋರ್ಟ್ ಮಾಡಿಸಿಕೊಂಡಿದ್ದಕ್ಕೆ ಇಂದು ಗ್ರಾಹಕರು ಆ ಯುವಕರಿಗೆ ಹಾಗೂ ಜಿಯೋ ಸಂಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಇಂದು ಬೆಳಿಗ್ಗೆಯಿಂದಲೇ ಗುತ್ತಿಗಾರು ಪರಿಸರದಲ್ಲಿ ಜಿಯೋ ನೆಟ್ವರ್ಕ್ ಸಂಪೂರ್ಣವಾಗಿ ಕಡಿತಗೊಂಡಿದ್ದರಿಂದ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ತೀವ್ರ ತೊಂದರೆ ಅನುಭವಿಸಿದ್ದು, ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಇಂದಿನ ಡಿಜಿಟಲ್ ಯುಗದಲ್ಲಿ ಆನ್ಲೈನ್ ಪೇಮೆಂಟ್, ತುರ್ತು ಕರೆಗಳು ಹಾಗೂ ದಿನನಿತ್ಯದ ಕೆಲಸಗಳಿಗೆ ನೆಟ್ವರ್ಕ್ ಸಿಗದೆ ಸಾರ್ವಜನಿಕರು ಅಸಹಾಯಕರಾಗಿದ್ದಾರೆ.ಜಿಯೋ ಕಂಪನಿಯು ಕೇವಲ ರೀಚಾರ್ಜ್ ಹಣ ವಸೂಲಿ ಮಾಡುವುದಷ್ಟೇ ಅಲ್ಲ, ಗ್ರಾಹಕರಿಗೆ ನಿರಂತರ ಸೇವೆ ನೀಡುವುದನ್ನೂ ಕಲಿಯಬೇಕು. ಗುತ್ತಿಗಾರು ಭಾಗದ ಈ ನೆಟ್ವರ್ಕ್ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಿ ಸುಗಮ ಸಂಪರ್ಕ ಕಲ್ಪಿಸಿಕೊಡಬೇಕು ಎಂದು ಗ್ರಾಹಕರು ಆಗ್ರಹಿಸಿದ್ದಾರೆ.


