ತಮಿಳುನಾಡಿನ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಅವರನ್ನು ಭೇಟಿಯಾಗಿ ತನ್ನ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

2019 ರಲ್ಲಿ ತನ್ನ ಐಪಿಎಸ್ ಹುದ್ದೆ ಬಿಟ್ಟು 2020 ರಲ್ಲಿ ರಾಜಕೀಯಕ್ಕಿಳಿದಿದ್ದ ಅಣ್ಣಾಮಲೈ ಬಿಜೆಪಿಯನ್ನು ಆರಿಸಿಕೊಂಡಿದ್ದರು. ಮತ್ತು ನಂತರ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ 2025ರ ತನಕ ಮುಂದುವರೆದಿದ್ದರು.


ತಮ್ಮ ಐಪಿಎಸ್ ಸೇವಾವಧಿಯ ಸಮಯದಲ್ಲಿ ಕರ್ನಾಟಕದಾದ್ಯಂತ ಸಿಂಗಮ್ ಎಂದೇ ಗುರುತಿಸಿಕೊಂಡಿದ್ದ ಅಣ್ಣಾಮಲೈ ದಕ್ಷ ಅಧಿಕಾರಿ ಎಂದೇ ಹೆಸರು ಮಾಡಿದ್ದರು.


2024ರ ತನಕ 3.6% ಇದ್ದ ಬಿಜೆಪಿ ಮತಗಳಿಕೆಯನ್ನು ನಂತರ 11.24 % ಗೆ ಏರಿಸಿದ್ದು ಅಣ್ಣಾಮಲೈ ಹೆಗ್ಗಳಿಕೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೊಯಮತ್ತೂರಿನಿಂದ ಸ್ಪರ್ಧಿಸಿದ್ದ ಅಣ್ಣಾಮಲೈ 4.5 ಲಕ್ಷ ಮತಗಳನ್ನು ಪಡೆದಿದ್ದರು ಮತ್ತು ಡಿಎಂಕೆ ಅಭ್ಯರ್ಥಿ ವಿರುದ್ಧ 1.18 ಲಕ್ಷ ಮತಗಳಿಂದ ಸೋತಿದ್ದರು. ಇದಕ್ಕೂ ಮುನ್ನ ಅವರು ತಮಿಳುನಾಡಿನ ಕರೂರು ಜಿಲ್ಲೆಯ ಅರವಕೊಚ್ಚಿ ಕ್ಷೇತ್ರದಿಂದ ಸ್ಪರ್ಧಿಸಿ ಅಲ್ಲಿಯೂ ಪರಾಭವಗೊಂಡಿದ್ದರು.


ಬಿಜೆಪಿಗೆ ತಮಿಳಿಗರ ನಾಡಿಮಿಡಿತ ಅರ್ಥ ಆಗುವುದಿಲ್ಲ ಎನ್ನುವುದು ಅಣ್ಣಾ ಮಲೈ ಗಂಭೀರ ಆರೋಪ. ಕಳೆದ ಸಲ ಮೈತ್ರಿ ಸಾಧ್ಯತೆಗಳನ್ನು ರಾಷ್ಟ್ರ ನಾಯಕರಿಗೆ ತಿಳಿಸಿದರೂ ಅವರು ಸೊಪ್ಪು ಹಾಕಲಿಲ್ಲ ಎನ್ನುವುದು ಅಣ್ಣಾಮಲೈ ಅಸಮಾಧಾನಕ್ಕೆ ಮತ್ತೊಂದು ಕಾರಣ.

ರಜನೀಕಾಂತ್ ಜತೆ ಸೇರಿ ಹೊಸ ಪಕ್ಷ ಸ್ಥಾಪಿಸುವ ಸಾಧ್ಯತೆ ಬಗ್ಗೆ ಊಹಾಪೋಹಗಳು ತಮಿಳುನಾಡಿನಾದ್ಯಂತ ಹರಿದಾಡುತ್ತಿದೆ.



