ಮಂಗಳೂರಿನ ಕಂಕನಾಡಿಯ ಅಲ್‌ಝಯಾನ್ ಇಂಟರ್‌ನ್ಯಾಷನಲ್ ಸ್ಕೂಲ್ ಆಡಿಟೋರಿಯಂನಲ್ಲಿ ಇತ್ತೀಚೆಗೆ ಬ್ಲಿಸ್ ಲಂಡನ್ ಟೀಚರ್ಸ್ ಅಕಾಡೆಮಿಯ ನರ್ಸರಿ ಶಿಕ್ಷಕಿಯರ ತರಬೇತಿ ಕೋರ್ಸ್ ಪೂರ್ತಿಗೊಳಿಸಿದ ವಿದ್ಯಾರ್ಥಿನಿಯರ ಘಟಿಕೋತ್ಸವ ಸಮಾರಂಭವು ನಡೆಯಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಲ್ ತವಾಮ್ ಗ್ರೂಪ್ ಸಂಸ್ಥೆಯ ನಿರ್ದೇಶಕರಾದ ಡಾ. ಶೇಖ್ ಬಾವಾ ಹಾಜಿ ಅವರು, ಶಿಕ್ಷಣ ಎನ್ನುವುದು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದರು. ಶಿಕ್ಷಕರು ಕೇವಲ ವೃತ್ತಿಗಷ್ಟೇ ಸೀಮಿತವಾಗದೆ ಆದರ್ಶ ಶಿಕ್ಷಕರಾಗಬೇಕು ಮತ್ತು ಪ್ರತಿ ಮಗುವಿನ ಮನಸ್ಸಿನಲ್ಲಿ ಎಂದಿಗೂ ಮರೆಯಲಾಗದ ಸ್ಥಾನವನ್ನು ಪಡೆದುಕೊಳ್ಳಲು ಶ್ರಮಿಸಬೇಕು ಎಂದು ಕರೆ ನೀಡಿದರು.

ಬ್ಲಿಝ್ ಲಂಡನ್ ಟೀಚರ್ಸ್ ಅಕಾಡೆಮಿಯ ಡೈರೆಕ್ಟರ್ ಆಗಿರುವ ಉಮರುಲ್ ಫಾರೂಕ್ ರಝಾ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಹಾಫಿಝ್ ಅನಸ್ ಅಹ್ಸನಿ, ಅಲ್‌ಝಯಾನ್ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಾದ ಇಲ್ಯಾಸ್ ಹಾಗೂ ಬ್ಲಿಸ್ ಲಂಡನ್ ಟೀಚರ್ಸ್ ಅಕಾಡೆಮಿಯ ತರಬೇತುದಾರರಾದ ಅಬ್ದುಸ್ಸಮದ್ ಅದನಿ, ಅಮ್ರಿನ್, ಸುಮಯ್ಯ ರಿಫಾ ಮತ್ತು ರಫಾ ಮರ್ಯಂ ಅವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ತರಬೇತಿ ಪೂರೈಸಿದ ವಿದ್ಯಾರ್ಥಿನಿಯರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರು ಶಿಕ್ಷಣದ ಮಹತ್ವ, ಮಹಿಳಾ ಸಬಲೀಕರಣ ಹಾಗೂ ಸಮಾಜಕ್ಕೆ ಉತ್ತಮ ಶಿಕ್ಷಕರ ಅಗತ್ಯತೆಯ ಬಗ್ಗೆ ಪ್ರೇರಣಾದಾಯಕ ಮಾತುಗಳನ್ನಾಡಿದರು.

ವಿದ್ಯಾರ್ಥಿನಿಯರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಧಕರಿಗೆ ನಡೆದ ಗೌರವ ಸಮರ್ಪಣೆ ಮತ್ತು ವಿದ್ಯಾರ್ಥಿನಿಯರ ಸಾಧನೆಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು. ಕುಮಾರಿ ನಝೀಫಾ ಸ್ವಾಗತಿಸಿದರೆ, ಮಿನಾಝ್ ಮತ್ತು ರೆಹನಾಝ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಈ ಸಮಾರಂಭದಲ್ಲಿ ಪೋಷಕರು, ಶಿಕ್ಷಕರು ಹಾಗೂ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

